ಜಾನುವಾರುಗಳಿಗೆ 6 ತಿಂಗಳಿಗೊಮ್ಮೆ ಕಡ್ಡಾಯ ಲಸಿಕೆ ಹಾಕಿಸಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

| Published : Mar 22 2024, 01:06 AM IST

ಜಾನುವಾರುಗಳಿಗೆ 6 ತಿಂಗಳಿಗೊಮ್ಮೆ ಕಡ್ಡಾಯ ಲಸಿಕೆ ಹಾಕಿಸಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಪಶು ವೈದ್ಯಾಧಿಕಾರಿಗಳು ಎಲ್ಲ ತಾಲೂಕಿನಲ್ಲಿ ಮನೆ ಮನೆಗೆ ಭೇಟಿ ನೀಡಿ ಎಮ್ಮೆ ಮತ್ತು ದನಗಳಿಗೆ ಕಾಲುಬಾಯಿ ಲಸಿಕೆ ಹಾಕಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು ಹಾಗೂ ಪ್ರತಿ ದಿನ ಕೇಂದ್ರದ ಭಾರತ್ ಪಶುಧನ್ ಪೋರ್ಟಲ್‍ನಲ್ಲಿ ಪ್ರತಿ ದಿನ ಪ್ರಗತಿ ನಮೂದಿಸಬೇಕು. ಜೊತೆಗೆ ಲಸಿಕೆ ನೀಡಲು ರೈತರ ಮನೆಗಳಿಗೆ ತೆರಳಿದಾದ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿ ಅವರಲ್ಲಿ ಅರಿವು ಮೂಡಿಸಬೇಕು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಏ.1ರಿಂದ 30 ರವರೆಗೆ ಜಾನುವಾರುಗಳಿಗೆ 5ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿ ಶೇ.100 ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಾನುವಾರುಗಳಿಗೆ 5ನೇ ಸುತ್ತಿನ ಉಚಿತ ಕಾಲುಬಾಯಿ ಲಸಿಕಾ ಕಾರ್ಯಕ್ರಮ, ಜಿಲ್ಲಾ ಮಟ್ಟದ ಬೀದಿ ನಾಯಿಗಳ ಸಂತಾನ ನಿಯಂತ್ರಣ(ಎಬಿಸಿ) ಹಾಗೂ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ರೈತರಿಗೆ ಆರ್ಥಿಕ ಸಂಕಷ್ಟ ತಂದೊಡ್ಡುವ ಕಾಲುಬಾಯಿ ರೋಗ ನಿಯಂತ್ರಿಸಿ ನಿರ್ಮೂಲನೆ ಮಾಡಲು ಪ್ರತಿ 6 ತಿಂಗಳಿಗೊಮ್ಮೆ ಎಲ್ಲ ರೈತರು ಈ ರೋಗದ ವಿರುದ್ಧ ಜಾನುವಾರುಗಳಿಗೆ ಕಡ್ಡಾಯ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.

ಪಶು ವೈದ್ಯಾಧಿಕಾರಿಗಳು ಎಲ್ಲ ತಾಲೂಕಿನಲ್ಲಿ ಮನೆ ಮನೆಗೆ ಭೇಟಿ ನೀಡಿ ಎಮ್ಮೆ ಮತ್ತು ದನಗಳಿಗೆ ಕಾಲುಬಾಯಿ ಲಸಿಕೆ ಹಾಕಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು ಹಾಗೂ ಪ್ರತಿ ದಿನ ಕೇಂದ್ರದ ಭಾರತ್ ಪಶುಧನ್ ಪೋರ್ಟಲ್‍ನಲ್ಲಿ ಪ್ರತಿ ದಿನ ಪ್ರಗತಿ ನಮೂದಿಸಬೇಕು. ಜೊತೆಗೆ ಲಸಿಕೆ ನೀಡಲು ರೈತರ ಮನೆಗಳಿಗೆ ತೆರಳಿದಾದ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿ ಅವರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪೆಟ್‍ಶಾಪ್, ಪೆಟ್ ಕ್ಲಿನಿಕ್ ಮತ್ತು ಮೆಡಿಕಲ್ ಶಾಪ್ ನಡೆಸಲು ಪರವಾನಗಿ ಪಡೆಯಬೇಕು. ಈಗಾಗಲೇ ಸಲ್ಲಿಸಿರುವ ಅರ್ಜಿಗಳ ಪರಿಶೀಲಿಸಿ, ಸಮರ್ಪಕವಾಗಿದ್ದಲ್ಲಿ ಅನುಮತಿ ನೀಡಬೇಕು. ಅನಧಿಕೃತವಾಗಿರುವ ಶಾಪ್ ಮತ್ತು ವೈದ್ಯರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಪಶುಪಾಲನಾ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಶಿವಯೋಗಿ ಮಾತನಾಡಿ ತಾಲೂಕುವಾರು ಪ್ರತಿ ಒಂದು ಅಥವಾ ಎರಡು ತಿಂಗಳಿಗೊಮ್ಮೆ ಶಿಬಿರ ನಡೆಸಿ ನಾಯಿಗಳ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ನಿಯಮಾನುಸಾರ ನಿಗದಿಗೊಳಿಸಿದ ಎನ್‍ಜಿಒ ಕಡೆಯಿಂದ ಮಾಡಿಸಿ ವರದಿ ಸಲ್ಲಿಸಬೇಕು. ನಗರದ ಸುತ್ತಮುತ್ತ, ಉಪನಗರ, ಗ್ರಾಪಂ ವ್ಯಾಪ್ತಿಯಲ್ಲೂ ನಾಯಿ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಗಳ ಕೈಗೊಳ್ಳಬೇಕು ಎಂದು ಪಶು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ ಅವರು ಹೀಗೆ ನಿಯಮಿತವಾಗಿ ಮಾಡಿದಲ್ಲಿ ಬೀದಿ ನಾಯಿಗಳ ನಿಯಂತ್ರಣ ಸಾಧ್ಯ ಎಂದರು.

ಸಭೆಯಲ್ಲಿ 5ನೇ ಸುತ್ತಿನ ಉಚಿತ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಪೋಸ್ಟರ್‌ನ್ನು ಜಿಲ್ಲಾಧಿಕಾರಿ ಮತ್ತು ಇತರೆ ಅಧಿಕಾರಿಗಳು ಬಿಡುಗಡೆಗೊಳಿಸಿದರು. ಸಭೆಯಲ್ಲಿ ಜಿಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಎಎಸ್‍ಪಿ ಅನಿಲ್ ಕುಮಾರ್ ಭೂಮರಡ್ಡಿ, ಡಿಎಚ್‌ಒ ಡಾ.ನಟರಾಜ್, ಪಶುಪಾಲನಾ ಇಲಾಖೆಯ ಪಾಲಿಕ್ಲಿನಿಕ್ ಉಪನಿರ್ದೇಶಕರು, ಪಾಲಿಕೆ ಪಶು ವೈದ್ಯಾಧಿಕಾರಿ ಡಾ.ರೇಖಾ, ಡಾ.ಉಮಾದೇವಿ ಸೇರಿ ಹಲವರಿದ್ದರು. ಜಿಲ್ಲೆಯಲ್ಲಿ 5.40 ಲಕ್ಷ ಜಾನುವಾರುಗಳಿದ್ದು, ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸಾಗರ ತಾಲೂಕುಗಳಲ್ಲಿ ಏ.30ರೊಳಗೆ ಲಸಿಕೆಯನ್ನು ಶೇ.100 ಸಾಧಿಸಲಾಗುವುದು. ಆದರೆ ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕುಗಳಲ್ಲಿ ಮನೆಗಳು ದೂರ ದೂರ ಇರುವುದರಿಂದ ಶೇ.100 ಪ್ರಗತಿ ಸಾಧಿಸಲು ಸ್ವಲ್ವ ಹೆಚ್ಚುವರಿ ಸಮಯ ಬೇಕು. 4ನೇ ಸುತ್ತಿನಲ್ಲೂ ಸ್ವಲ್ಪ ಹೆಚ್ಚುವರಿ ಸಮಯ ಪಡೆಯಲಾಗಿತ್ತು.

ಡಾ.ಶಿವಯೋಗಿ, ಪಶುಪಾಲನಾ ಇಲಾಖೆ ಉಪನಿರ್ದೇಶಕ-------------------

ಪೊಟೋ: 21ಎಸ್‌ಎಂಜಿಕೆಪಿ02

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಾನುವಾರುಗಳಿಗೆ 5ನೇ ಸುತ್ತಿನ ಉಚಿತ ಕಾಲುಬಾಯಿ ಲಸಿಕಾ ಕಾರ್ಯಕ್ರಮ, ಜಿಲ್ಲಾಮಟ್ಟದ ಬೀದಿ ನಾಯಿಗಳ ಸಂತಾನ ನಿಯಂತ್ರಣ (ಎಬಿಸಿ) ಹಾಗೂ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಕಾಲುಬಾಯಿ ಲಸಿಕಾ ಕಾರ್ಯಕ್ರಮದ ಪೋಸ್ಟರ್‌ ಬಿಡುಗಡೆಗೊಳಿಸಿದರು.