ಗದಗ: ಹೆಣ್ಣುಮಕ್ಕಳು ತರುಣಾವಸ್ಥೆಯಲ್ಲಿ ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ತೋರುವ ನಿರ್ಲಕ್ಷ್ಯ ಭವಿಷ್ಯದಲ್ಲಿ ಗಂಭೀರ ಕಾಯಿಲೆಗಳಿಗೆ ದಾರಿಯಾಗಬಹುದು. ಗರ್ಭಾಶಯ ಕ್ಯಾನ್ಸರ್‌ನಂತಹ ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ, ಲಭ್ಯವಿರುವ ಲಸಿಕೆ ಪಡೆಯುವ ಮೂಲಕ ತಡೆಗಟ್ಟಬಹುದು ಸ್ತ್ರೀರೋಗ ತಜ್ಞೆ ಡಾ. ಮಹಾಲಕ್ಷ್ಮಿ ಅಯ್ಯನಗೌಡ ತಿಳಿಸಿದರು.

ನಗರದ ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕ ಹಾಗೂ ಸೆಕ್ಯುರ್ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಗರ್ಭಾಶಯ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ವಿದ್ಯಾರ್ಥಿನಿಯರು ಋತುಚಕ್ರದ ಅವಧಿಯಲ್ಲಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಹಾಗೂ ಪೌಷ್ಟಿಕ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಕ್ಯಾನ್ಸರ್ ಲಕ್ಷಣಗಳು ಕಂಡುಬಂದಲ್ಲಿ ಮುಚ್ಚಿಡದೆ ತಕ್ಷಣ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಇದೇ ವೇಳೆ ಸೆಕ್ಯುರ್ ಆಸ್ಪತ್ರೆಯ ವತಿಯಿಂದ ವಿದ್ಯಾರ್ಥಿನಿಯರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಸಮಾಲೋಚನೆ ನಡೆಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎ.ಕೆ. ಮಠ ಮಾತನಾಡಿ, ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಇಂತಹ ಜಾಗೃತಿ ಶಿಬಿರಗಳು ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ಮತ್ತು ಆರೋಗ್ಯದ ಅರಿವು ಮೂಡಿಸುತ್ತವೆ ಎಂದರು.

ಉಪಪ್ರಾಚಾರ್ಯೆ ಡಾ. ವೀಣಾ ಇ. ಮಾತನಾಡಿ, ಮಹಿಳೆಯರ ಆರೋಗ್ಯ ಸುಧಾರಿಸಿದಾಗ ಮಾತ್ರ ನಿಜವಾದ ಸಬಲೀಕರಣ ಸಾಧ್ಯ ಎಂದರು.


ಸಂಯೋಜಕಿ ಗೌರಿ ಯಳಮಲಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಘಟಕದ ಸದಸ್ಯೆ ವಿಶಾಲ ತಾಳಗಡೆ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ನೂರಾರು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಜಯಂತಿಯನ್ನು ವ್ಯವಸ್ಥಿತವಾಗಿ ಆಚರಿಸಲು ಕ್ರಮ ವಹಿಸಿ

ಗದಗ: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಮೇ 10ರಂದು ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ವ್ಯವಸ್ಥಿತ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಕ್ರಮ ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ನಿಮಿತ್ತ ಜರುಗಿದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕು ಮಟ್ಟದಲ್ಲಿ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ಜಯಂತಿಯ ಆಚರಣೆಗೆ ಕ್ರಮ ವಹಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು, ಗ್ರಾಪಂ, ಶಾಲಾ- ಕಾಲೇಜುಗಳಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ, ಪದವಿಯಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಮಾಜದ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಶಿಷ್ಟಾಚಾರದನ್ವಯ ಆಮಂತ್ರಣ ಮುದ್ರಣಕ್ಕೆ ಕ್ರಮ ವಹಿಸಬೇಕು ಎಂದರು.ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಕುರಿತು ಆಳವಾಗಿ ಅಧ್ಯಯನ ಮಾಡಿದವರಿಂದ ಉಪನ್ಯಾಸ ಕಾರ್ಯಕ್ರಮವು ಜರುಗುವುದು. ಒಟ್ಟಾರೆಯಾಗಿ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಕ್ರಮ ವಹಿಸಬೇಕೆಂದರು.

ಈ ಸಂದರ್ಭದಲ್ಲಿ ಊಟೋಪಹಾರದ ವ್ಯವಸ್ಥೆ, ವೇದಿಕೆ ವ್ಯವಸ್ಥೆ, ವೇದಿಕೆ ಅಲಂಕಾರ, ಬ್ಯಾನರ್ ಅಳವಡಿಕೆ, ಪುಸ್ತಕ ಬಿಡುಗಡೆ ಕುರಿತು ಚರ್ಚಿಸಲಾಯಿತು.ಡಿವೈಎಸ್ಪಿ ಮಹಾಂತೇಶ್ ಸಜ್ಜನ, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀಕ್ಷಕ ರಾಜಕುಮಾರ ಸೊಪ್ಪಡ್ಲ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಮಾಜದ ಮುಖಂಡರು, ಮಹಿಳೆಯರು ಇದ್ದರು.