ಸಾರಾಂಶ
ಸಮಾಜ ಸುಧಾರಣೆಯಲ್ಲಿ ವಚನ ಸಾಹಿತ್ಯದ ಕೊಡುಗೆ ಅಮೂಲ್ಯವಾಗಿದೆ. ಸಾಹಿತ್ಯ, ವಚನ ರಚನೆ ಕೇವಲ ಮೇಲ್ವರ್ಗ, ರಾಜಾಶ್ರಯದ ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಜನಸಾಮಾನ್ಯರು ವಚನ ಸಾಹಿತ್ಯ ರಚನೆ ಮೂಲಕ ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಳ್ಳಬಹುದು ಎಂಬುದನ್ನು 12ನೇ ಶತಮಾನದಲ್ಲಿ ಸಿದ್ದರಾಮೇಶ್ವರ ಅವರು ಕಾಯಕ ವೃತ್ತಿ ಜತೆಗೆ ತೋರಿಸಿಕೊಟ್ಟಿದ್ದಾರೆ ಎಂದು ಶಿಕಾರಿಪುರ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಸಮಾಜ ಸುಧಾರಣೆಯಲ್ಲಿ ವಚನ ಸಾಹಿತ್ಯದ ಕೊಡುಗೆ ಅಮೂಲ್ಯವಾಗಿದೆ. ಸಾಹಿತ್ಯ, ವಚನ ರಚನೆ ಕೇವಲ ಮೇಲ್ವರ್ಗ, ರಾಜಾಶ್ರಯದ ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಜನಸಾಮಾನ್ಯರು ವಚನ ಸಾಹಿತ್ಯ ರಚನೆ ಮೂಲಕ ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಳ್ಳಬಹುದು ಎಂಬುದನ್ನು 12ನೇ ಶತಮಾನದಲ್ಲಿ ಸಿದ್ದರಾಮೇಶ್ವರ ಅವರು ಕಾಯಕ ವೃತ್ತಿ ಜತೆಗೆ ತೋರಿಸಿಕೊಟ್ಟಿದ್ದಾರೆ ಎಂದು ಶಿಕಾರಿಪುರ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಹೇಳಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತ, ತಾ.ಪಂ, ಪುರಸಭೆ, ವಿವಿಧ ಇಲಾಖೆಗಳು, ತಾಲೂಕು ನೊಳಂಬ ಲಿಂಗಾಯಿತ ಸಮಾಜ, ತಾಲೂಕು ಭೋವಿ ಸಮಾಜ ವತಿಯಿಂದ ನಡೆದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನ ಕ್ರಾಂತಿಕಾರಿ ಬಸವಣ್ಣ ಅವರ ಯುಗವಾಗಿ ಇತಿಹಾಸದಲ್ಲಿ ದಾಖಲಾಗಿದೆ. ಮೇಲು-ಕೀಳು, ಬಡವ- ಶ್ರೀಮಂತ, ಮೂಢನಂಬಿಕೆ, ಕಂದಾಚಾರ ಮುಂತಾದ ವಿಚಾರಗಳಿಂದ ಸಮಾಜ ನೊಂದಿತ್ತು. ಈ ಸಂದರ್ಭದಲ್ಲಿ ನೂರಾರು ಶಿವಶರಣರು ಜಾತಿ-ಭೇದವಿಲ್ಲದೆ ಸಮಾಜ ಪರಿವರ್ತನೆಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಸಾಹಿತ್ಯ, ವಚನಗಳ ರಚನೆ, ಆಡಳಿತ ಕೇವಲ ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತವಾಗದೇ ಎಲ್ಲ ವರ್ಗದ ಜನತೆ ಪಾಲ್ಗೊಳ್ಳಬೇಕು ಎಂದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮುನ್ನುಡಿ ಬರೆದ ಬಸವಣ್ಣ ಅವರು ಸಮಾಜ ಸುಧಾರಣೆಯಲ್ಲಿ ಸರ್ವರ ಪಾತ್ರ ಬಹು ಮಹತ್ವವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.ಸಿದ್ದರಾಮೇಶ್ವರರ ಜೀವನದ ಬಗ್ಗೆ ಸರ್ಕಾರಿ ಬಾಲಿಕ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪುಟ್ಟಪ್ಪ ಕೆ.ಎಚ್. ಉಪನ್ಯಾಸ ನೀಡಿ, ವೈದಿಕಶಾಹಿ, ಪುರೋಹಿತಶಾಹಿ, ವರ್ಣಬೇಧ ವ್ಯವಸ್ಥೆಯಿಂದ ಜಡ್ಡುಗಟ್ಟಿದ ಸಮಾಜಕ್ಕೆ ಸಿದ್ದರಾಮೇಶ್ವರರ ಸಹಿತ ಹಲವು ಶರಣರು ಆಶಾಕಿರಣವಾಗಿ, ಶ್ರಮಸಿದ್ದಾರೆ. ಕಾಯಕ ತತ್ವದ ಜತೆಗೆ ಸಮಾಜದ ಸುಧಾರಣೆಗಾಗಿ ವಚನ ಸಾಹಿತ್ಯ ರಚಿಸಿದ ಶರಣರು, ಸರ್ವ ಸಮಾಜದ ಹಿತಕ್ಕಾಗಿ ಶ್ರಮಿಸಿದ್ದಾರೆ ಎಂದರು.
ತಾಲೂಕು ಭೋವಿ ಸಮಾಜ ಅಧ್ಯಕ್ಷ ಬಿ.ಸಿ. ಈಶಪ್ಪ, ಬಿಸಿಎಂ ಕಲ್ಯಾಣಾಧಿಕಾರಿ ಉಮೇಶ್, ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಹಿರೇಮಠ್, ಮುಖಂಡ ಶಾಂತಪ್ಪ ಪುನೇದಹಳ್ಳಿ, ಸಿದ್ರಾಮಪ್ಪ ಹಿರೇಜಂಬೂರು, ತೊಗರ್ಸಿ ಸಣ್ಣಹನುಮಂತಪ್ಪ, ಪಾಪಯ್ಯ, ಚಿನ್ನಪ್ಪ, ತಿಪ್ಪೇಶ್, ದೇವರಾಜ ಮತ್ತಿತರರು ಹಾಜರಿದ್ದರು.- - - -15 ಕೆಎಸ್ಕೆಪಿ1:
ಶಿಕಾರಿಪುರದ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ತಹಸೀಲ್ದಾರ್ ಮಲ್ಲೇಶ್ ಪೂಜಾರ್ ಉದ್ಘಾಟಿಸಿದರು.