ನಾಡಿದ್ದಿನಿಂದ ಒಲೇಮಠದಲ್ಲಿ ವಚನ ಜಾತ್ರೆ

| Published : Apr 13 2025, 02:04 AM IST

ನಾಡಿದ್ದಿನಿಂದ ಒಲೇಮಠದಲ್ಲಿ ವಚನ ಜಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಬಸವ ಜಯಂತಿ ನಿಮಿತ್ತ ಶರಣರ ಪ್ರವಚನ, ಸದ್ಭಾವನಾ ಪಾದಯಾತ್ರೆ ಹಾಗೂ ವಚನ ಜಾತ್ರಾ ಮಹೋತ್ಸವ ಏ.15ರಿಂದ ಏ.29ರವರೆಗೆ ನಗರದ ಓಲೇಮಠದಲ್ಲಿ ನಡೆಯಲಿದೆ ಎಂದು ಆನಂದ ದೇವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಬಸವ ಜಯಂತಿ ನಿಮಿತ್ತ ಶರಣರ ಪ್ರವಚನ, ಸದ್ಭಾವನಾ ಪಾದಯಾತ್ರೆ ಹಾಗೂ ವಚನ ಜಾತ್ರಾ ಮಹೋತ್ಸವ ಏ.15ರಿಂದ ಏ.29ರವರೆಗೆ ನಗರದ ಓಲೇಮಠದಲ್ಲಿ ನಡೆಯಲಿದೆ ಎಂದು ಆನಂದ ದೇವರು ತಿಳಿಸಿದರು. ಮಠದ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿದಿನ ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ನಗರದ ಪ್ರತಿ ವಾರ್ಡ್‌ಗಳಲ್ಲಿ ಸಂಚರಿಸಿ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಹಾಗೂ ರುದ್ರಾಕ್ಷಿ ಧಾರಣೆ ಸದ್ಭಾವನೆ ಪಾದಯಾತ್ರೆ ನಡೆಸಲಾಗುವುದು, ಇಂದಿನ ಯುವ ಪೀಳಿಗೆ ಚಟಗಳ ದಾಸರಾಗಿ ಮನೆಯಲ್ಲಿ ತಂದೆ-ತಾಯಿಯನ್ನು ದೂಷಿಸುವ ಹಾಗೂ ಚಿಕ್ಕವಯಸ್ಸಿನಲ್ಲಿ ಜೀವನ ಹಾಳು ಮಾಡಿಕೊಳ್ಳುತ್ತಿರುವ ಅನೇಕ ಉದಾಹರಣೆಗಳಿದ್ದು, ಅದಕ್ಕೆ ಕಡಿವಾಣ ಹಾಕಲು ಸಮಾಜದಲ್ಲಿ ಅಧ್ಯಾತ್ಮ ತುಂಬಲು ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.

ಪ್ರವಚನ ಕಾರ್ಯಕ್ರಮದ ಉದ್ಘಾಟನೆ ದಿ,15ರಂದು ಸಂಜೆ 6.30ಕ್ಕೆ ನಡೆಯಲಿದ್ದು, ಮರೆಗುದ್ದಿಯ ಮಹಾಂತಸ್ವಾಮಿಗಳು, ಕಲ್ಯಾಣ ಮಠದ ಗೌರಿಶಂಕರ ಸ್ವಾಮಿಗಳು, ಚಿಮ್ಮಡ ವಿರಕ್ತಮಠದ ಪ್ರಭುಮಹಾಸ್ವಾಮಿಗಳು, ಮುತ್ತಿನಕಂತಿ ಮಠದ ಶಿವಲಿಂಗ ಸ್ವಾಮಿಗಳು ಭಾಗವಹಿಸಲಿದ್ದು, ಜುಂಝರವಾಡದ ಬಸವರಾಜೇಂದ್ರ ಸ್ವಾಮಿಗಳು ಪ್ರವಚನ ನೀಡಲಿದ್ದಾರೆ. ನಗರದ ರಾಜಕಾರಣಿಗಳು ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು,

ಪಾದಪೂಜೆ: ಮಕ್ಕಳಿಂದ ತಾಯಂದಿರ ಪಾದಪೂಜೆ ವಿನೂತನ ಕಾರ್ಯಕ್ರಮ ಏ.28ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಇಂದಿನ ಮಕ್ಕಳು ತಂದೆ-ತಾಯಿ ಗುರುಹಿರಿಯರನ್ನು ಗೌರವಿಸುವ ಅಭ್ಯಾಸವಾಗಲಿ ಎಂಬ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಥೋತ್ಸವ: ಏ.30ರಂದು ಜಗಜ್ಯೋತಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆ, ರಥೋತ್ಸವ ನಡೆಯಲಿದೆ, ಸುಮಂಗಲಿಯರು ವಚನಗಳನ್ನು ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. 15 ದಿನಗಳವರೆಗೆ ನಿತ್ಯ ದಾಸೋಹ ಇರಲಿದೆ ಎಂದು ವಿವರಿಸಿದರು.

ಶ್ರೀಶೈಲ ಗೊಂಗನ್ನವರ. ಸದಾನಂದ ಬಾಗೇವಾಡಿ, ಮಲ್ಲು ಮುದ್ದಕನ್ನವರ, ಎಂ.ಕೆ. ಹಿಟ್ಟಿಮಠ, ಸಿದ್ದಯ್ಯ ಕಲ್ಲಕತ್ತಿಮಠ, ಸದು ನ್ಯಾಮಗೌಡ, ಮಹೇಶ ಕಲಕತ್ತಿಮಠ, ರಾಚಯ್ಯ ಮಠಪತಿ, ಬಸವರಾಜ ಸಿದ್ದಗೀರಿಮಠ, ಬಸು ಬಳಗಾರ, ಎಸ್.ವೈ. ಪಾಟೀಲ ಮಾತನಾಡಿದರು. ಶ್ರೀಕಾಂತ ನ್ಯಾಮಗೌಡ, ನಿಂಗನಗೌಡ ಪಾಟೀಲ, ಮಲ್ಲಪ್ಪ ದೇಸಾಯಿ ಇತರರು ಇದ್ದರು.