ಸಾರಾಂಶ
ಸಮಾಜದಲ್ಲಿದ್ದ ಮೇಲು ಕೀಳು ಎಂಬುದನ್ನು ತೊಡೆದು ಹಾಕಲು ಎಲ್ಲಾ ಕಾಯಕಗಳು ಶ್ರೇಷ್ಠ ಎಂಬುದನ್ನು ಜನ ಮಾನಸಕ್ಕೆ ಅರಿವು ಮಾಡಿಕೊಟ್ಟರು.
ಕನ್ನಡಪ್ರಭ ವಾರ್ತೆ ಮೈಸೂರು
ಬಸವ ಜ್ಯೋತಿಯು ಮಾನವನ ಅಂತರಂಗದಲ್ಲಿ ಬೆಳಕನ್ನು ಮೂಡಿಸುತ್ತದೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.ಮಂಡ್ಯದ ಬಸವ ಫೌಂಡೇಷನ್ ಮತ್ತು ಕಾಯಕಯೋಗಿ ಫೌಂಡೇಷನ್ ಪದಾಧಿಕಾರಿಗಳು ದೇವನೂರು ಶ್ರೀ ಗುರುಮಲ್ಲೇಶ್ವರ ಮಠದಿಂದ ತಂದ ಬಸವ ಜ್ಯೋತಿಯನ್ನು ಮೈಸೂರಿನ ಬೋಗಾದಿಯ ಶಾರದಾನಗರ ರೈಲ್ವೆ ಬಡಾವಣೆಯ ಶರಣು ಕುಠೀರದಲ್ಲಿ ಬರ ಮಾಡಿಕೊಂಡು ಅವರು ಮಾತನಾಡಿದರು.ಸಮಾಜದಲ್ಲಿದ್ದ ಮೇಲು ಕೀಳು ಎಂಬುದನ್ನು ತೊಡೆದು ಹಾಕಲು ಎಲ್ಲಾ ಕಾಯಕಗಳು ಶ್ರೇಷ್ಠ ಎಂಬುದನ್ನು ಜನ ಮಾನಸಕ್ಕೆ ಅರಿವು ಮಾಡಿಕೊಟ್ಟರು. ಸಾಮರಸ್ಯವನ್ನುಂಟು ಮಾಡಲು ಒಂದೇ ಸ್ಥಳದಲ್ಲಿ ಎಲ್ಲರೂ ದಾಸೋಹವನ್ನು ಮಾಡುವ ಪದ್ಧತಿಯನ್ನು ಜಾರಿಗೆ ತಂದರು. ಏಕಕಾಲದಲ್ಲಿ 176000 ಜನ ಮಹಾಮನೆಯ ಅಂಗಳದಲ್ಲಿ ದಾಸೋಹ ಮಾಡುತ್ತಿದ್ದರು ಎಂದರೆ ಬಸವಣ್ಣನವರ ದೂರದೃಷ್ಟಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಕಾಯಕಯೋಗಿ ಫೌಂಡೇಷನ್ ಸಂಸ್ಥಾಪಕ ಶಿವಕುಮಾರ್ ಮಾತನಾಡಿ, ಬಸವಣ್ಣನವರ ಲಿಂಗೈಕ್ಯ ಮಾಸವಾದ ಶ್ರಾವಣ ಮಾಸದಲ್ಲಿ ಪ್ರತೀ ವರ್ಷ ಒಂದೊಂದು ಶರಣರ ಕ್ಷೇತ್ರದಿಂದ ಬಸವ ಜ್ಯೋತಿಯನ್ನು ತಂದು ಒಂದು ತಿಂಗಳ ಪರ್ಯಂತ ಶರಣರ ಹಿರಿಮೆಯನ್ನು ತಿಳಿಸುವ ಬಸವ ಜ್ಯೋತಿ ಕಾರ್ಯಕ್ರಮವನ್ನು ಮನೆ ಮನೆಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಪ್ರಸಕ್ತ ವರ್ಷ ದಾಸೋಹ ಚಕ್ರವರ್ತಿ ಎಂದೇ ಹೆಸರಾದ ದೇವನೂರು ಶ್ರೀ ಗುರುಮಲ್ಲೇಶ್ವರ ಕ್ಷೇತ್ರದಿಂದ ಬಸವ ಜ್ಯೋತಿಯನ್ನು ತಂದು ಮೈಸೂರಿನಲ್ಲಿ ಬಸವಪ್ರಭೆ ಮತ್ತಷ್ಟು ಹರಡಲಿ ಎಂದು ಶರಣು ಕುಠೀರದಲ್ಲಿ ಮೊದಲ ಜ್ಯೋತಿ ಹೊತ್ತಿಸಲಾಗಿದೆ ಎಂದು ಹೇಳಿದರು.ಬಸವ ಫೌಂಡೇಷನ್ ಅಧ್ಯಕ್ಷೆ ಅಪರ್ಣ ಶಿವಕುಮಾರ್ ಮಾತನಾಡಿ, ಬಸವ ತತ್ವವನ್ನು ಅನುಸರಿಸುತ್ತಿರುವುದರಿಂದ ನಮ್ಮ ಹಣ ಉಳಿತಾಯವಾಗುತ್ತಿರುವುದರ ಜೊತೆಗೆ ಅಪಾರ ಜ್ಞಾನವನ್ನು ಗಳಿಸಿಕೊಳ್ಳಲು ಸಹಾಯಕವಾಗಿದೆ. ನಾಗರ ಪಂಚಮಿ ಅವೈಜ್ಞಾನಿಕ ಆಚರಣೆಯಾಗಿದ್ದು, ಅದರ ಬದಲು ಬಸವ ಪಂಚಮಿಯನ್ನು ಆಚರಿಸುವುದರ ಮೂಲಕ ವ್ಯರ್ಥವಾಗುವ ಹಾಲನ್ನು ಹಸಿದವರಿಗೆ ನೀಡಿ ಆಹಾರ ಪದಾರ್ಥಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಮಂಡ್ಯ ಲಿಂಗಾಯತ ಮಹಾಸಭಾದ ಅಧ್ಯಕ್ಷ ಮಂಜುನಾಥ್, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕರಾದ ವಿ. ಲಿಂಗಣ್ಣ, ಅಕ್ಕಮಹಾದೇವಿ ಮರಮ್ಕಲ್, ಪಡಗೂರು ನಾಗರಾಜು, ನಂದೀಶ್, ವೀಣಾ ನಂದೀಶ್, ವಚನ ಇದ್ದರು.