ಹನ್ನೆರಡೆನೆಯ ಶತಮಾನದ ಶರಣ-ಶರಣೆಯರ ನಡೆ ನುಡಿಗಳು ಇಂದಿಗೂ ಪ್ರಸುತ್ತ, ಅವರ ತತ್ವ ಸಿದ್ಧಾಂತ ಮಕ್ಕಳು, ಯುವಕರು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ಜೀವನ ಸಾರ್ಥವಾಗುತ್ತದೆ
ಕೊಪ್ಪಳ: ವಚನ ಸಾಹಿತ್ಯದ ಅಧ್ಯಯನದಿಂದ ಸರ್ವರಲ್ಲೂ ಸಮಾನತೆ ಸೋದರತ್ವದಿಂದ ಬಾಳುವ ಶಕ್ತಿ-ಯುಕ್ತಿ ತುಂಬುತ್ತವೆ. ಆ ಕಾರಣಕ್ಕಾಗಿ ಅಂದು, ಇಂದು, ಮುಂದೆಯೂ ಕೂಡಾ ವಚನ ಸಾಹಿತ್ಯ ಸರ್ವಕಾಲಿಕ ಸತ್ಯ ಸಂಗತಿ ಪ್ರತಿಪಾದಿಸುತ್ತದೆ ಎಂದು ಕೊಪ್ಪಳ ತಾಲೂಕಿನ ಯತ್ನಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ವೀರಭದ್ರಯ್ಯ ಹಿರೇಮಠ ಹೇಳಿದರು.
ತಾಲೂಕಿನ ಯತ್ನಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನ ಶಾಲೆಗೊಂದು ವಚನ ವಾಚನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಹನ್ನೆರಡೆನೆಯ ಶತಮಾನದ ಶರಣ-ಶರಣೆಯರ ನಡೆ ನುಡಿಗಳು ಇಂದಿಗೂ ಪ್ರಸುತ್ತ, ಅವರ ತತ್ವ ಸಿದ್ಧಾಂತ ಮಕ್ಕಳು, ಯುವಕರು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ಜೀವನ ಸಾರ್ಥವಾಗುತ್ತದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಸಂಗೀತ ಕಲಾವಿದೆ ಅನ್ನಪೂರ್ಣ ಮನ್ನಾಪೂರು ಮಾತನಾಡಿ, ಶರಣರು-ಶರಣಿಯರು ಈ ನಾಡಿನ ದೇಶದ ಬೆಲೆ ಕಟ್ಟಲಾಗದ ಬಹು ದೊಡ್ಡ ಆಸ್ತಿಯಾಗಿದ್ದಾರೆ. ನಾವು ಅವರ ಆದರ್ಶ ಜೀವನದಲ್ಲಿ ಅಳವಡಿಸಿಕೊಂಡರೆ ಹಾಲು ತೊರಗೆ ಬೆಲ್ಲದ ಕೆಸರು ಸಕ್ಕರೆಯ ಮಳ್ಳಲಿನಂತೆಯಾಗುತ್ತದೆ. ಮಕ್ಕಳು ಈ ನಾಡಿನ ದೊಡ್ಡ ಆಸ್ತಿಯಾಗಿ ಬೆಳೆಯಬೇಕು ಹಾಗಾಗಿ ವಚನ ಸಾಹಿತ್ಯ ಓದಿ ಪಚನ ಮಾಡಿಕೊಂಡು ಮುನ್ನ ನಡೆದರೆ ನಿಮ್ಮ ಭವಿಷ್ಯ ಉಜ್ಜಲವಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಎಸ್.ಗೋನಾಳ ಹಾಗೂ ಶಿಕ್ಷಕ ಸಿದ್ದಪ್ಪ ಮೇಟಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಮೈಲಾರಪ್ಪ ಉಂಕಿ ಮಾತನಾಡಿ, ನಮ್ಮ ಪರಿಷತ್ತಿನ ಉದ್ದೇಶ ಶಾಲೆಗೊಂದು ವಚನ ವಾಚನ ಕಾರ್ಯಕ್ರಮ ಮಾಡಿ ವಿದ್ಯಾರ್ಥಿಗಳಯಲ್ಲಿ ವಚನ ಸಾಹಿತ್ಯದಲ್ಲಿನ ಸಮಾನತೆಯ ತತ್ವ ಸಿದ್ಧಾಂತ ತಲುಪಿಸುವ ಕಾರ್ಯ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.ವಚನ ವಾಚನ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಮೆಹಬೂಬು ನದಾಫ್, ಭವಾನಿ ಕೆಂಚನಗೌಡ್ರ, ಧನ್ಯ ಮಂಗಳೂರು, ಖುಷಿ ಟಣಕನಕಲ್, ಸುಶ್ಮಿತಾ ಪೂಜಾರ, ರಾಜೇಶ್ವರಿ ಇವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೃತುಂಜಯ ಮಳಿಮಠ ವಹಿಸಿದ್ದರು. ಸಿದ್ದಪ್ಪ ಮೇಟಿ ನಿರೂಪಿಸಿ,ವಂದಿಸಿದರು.