ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ವಚನ ಸಾಹಿತ್ಯವೆಂಬುದು ಇಡೀ ವಿಶ್ವದಲ್ಲಿಯೇ ಒಂದು ವಿಶಿಷ್ಟ ಸ್ಥಾನ ನೀಡಲಾಗಿದೆ. ಬದುಕಿನ ಸಾರವನ್ನು ತಿಳಿಸುವ ಸಾಹಿತ್ಯವಾಗಿದೆ. ಇಂತಹ ವಚನಗಳನ್ನು ಕೇವಲ ಬಾಯಿ ಪಾಠ ಮಾಡದೆ, ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ದಿ.ಚನ್ನಪ್ಪಗೌರಮ್ಮ ಅವರು ನನ್ನಂತಹ ಹಲವರಿಗೆ ಅವರ ಬದುಕಿನ ಮೂಲಕವೇ ಗುರುವಾಗಿದ್ದರು ಎಂದು ವಚನ ಸಾಹಿತ್ಯ ಪ್ರವಾಚಕ ಎಸ್.ಜಿ.ಶಿವಶಂಕರ್ ತಿಳಿಸಿದ್ದಾರೆ.ನಗರದ ಶೈನಾ ಅಧ್ಯಯನ ಸಂಸ್ಥೆ, ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ತುಮಕೂರು ಇವರು ಆಯೋಜಿಸಿದ್ದ ಬಿ.ಚನ್ನಪ್ಪಗೌರಮ್ಮ ವಚನ ಸಾಹಿತ್ಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಂಸ್ಕೃತ ವಿದ್ವಾಂಸ ಕೋ.ರಂ.ಬಸವರಾಜು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಬಿ.ಚನ್ನಪ್ಪ ಅವರು ನನಗೆ ನೇರವಾಗಿ ಗುರುಗಳಲ್ಲದಿದ್ದರೂ, ಅವರ ಬದುಕು ಮತ್ತು ಜೀವನ ವಿಧಾನದಿಂದ ಪರೋಕ್ಷವಾಗಿ ಜನರ ನಡುವೆ ಹೇಗೆ ಬದುಕುಬೇಕೆಂಬ ಹಲವಾರು ಅಂಶಗಳನ್ನು ಕಲಿತಿದ್ದೇನೆ ಎಂದರು.ಮೂಲತಃ ಎಂ ಜಿನಿಯರ್ ಆದ ನಾನು ವಚನ ಸಾಹಿತ್ಯಕ್ಕೆ ಪಾದಾರ್ಪಣೆ ಮಾಡಿದ್ದೇ ಒಂದು ವಿಶೇಷ. ವಚನ ಸಾಹಿತ್ಯಕ್ಕೆ ಎಂತಹರನ್ನು ತನ್ನತ್ತ ಸೆಳೆದುಕೊಳ್ಳುವ ಶಕ್ತಿ ಇದೆ.ವಚನ ಸಾಹಿತ್ಯದ ಅಧ್ಯಯನದಿಂದ ಜೀವನದಲ್ಲಿ ಪರಿವರ್ತನೆ ಕಾಣಬಹುದು ಎಂಬುದಕ್ಕೆ ನನ್ನಲ್ಲಿ ಹಲವಾರು ಉದಾಹರಣೆಗಳಿವೆ. ವಚನಗಳನ್ನು ಓದುವುದು, ಹಾಡುವುದು ಮುಖ್ಯವಲ್ಲ.ಅವುಗಳಂತೆ ಬದುಕುವುದೇ ನಿಜವಾದ ಬದುಕು.ಇಂತಹ ಬದುಕನ್ನು ಬಿ.ಚನ್ನಪ್ಪಗೌರಮ್ಮ ಬದುಕಿದ್ದರು ಎಂದು ವಚನ ಪ್ರವಾಚಕ ಜಿ.ಎಸ್.ಶಿವಶಂಕರ್ ನುಡಿದರು.
ಸಾಹಿತಿ ಡಾ.ಬಿ.ಸಿ.ಶೈಲನಾಗರಾಜು ನುಡಿನಮನ ಸಲ್ಲಿಸುತ್ತಾ, ಬಿ.ಚನ್ನಪ್ಪ ಅವರು ನನ್ನ ತಂದೆ. ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ, ತಮ್ಮ ಇಡೀ ಜೀವನವನ್ನು ಶರಣ ಸಂಸ್ಕೃತಿ, ಪರಂಪರೆ ಮತ್ತು ವಚನ ಸಾಹಿತ್ಯದ ಬೆಳವಣಿಗೆಗೆ ಸಮರ್ಪಿಸಿಕೊಂಡವರು.ನೇರ ನಿಷ್ಠೂರ ಮನಸ್ಥಿತಿಯ ಚಿ.ಚನ್ನಪ್ಪಗೌರಮ್ಮ ಅವರು,ನಮಗೆ ಅಕ್ಷರ ನೀಡಿದ್ದೇಷ್ಟೆ ಅಲ್ಲ, ವೈಚಾರಿಕ ಮನೋಭಾವನೆಯ ಮೂಲಕ ಬದುಕು ಕಟ್ಟಿಕೊಳ್ಳಲು ನೆರವಾದವರು. ಅವರು ಅನುಸರಿಸುತ್ತಿದ್ದ ಪೂಜಾ ವಿಧಾನ, ಆ ಸಮಯದಲ್ಲಿ ನೀಡುತ್ತಿದ್ದ ಪ್ರವಚನಗಳಲ್ಲಿ ನಮ್ಮಲ್ಲಿ ಹೊಸ ಆಲೋಚನೆಗಳು ಹುಟ್ಟಲು ಕಾರಣವಾದವು.ನಾವು ಮಾಡುವ ಪ್ರತಿ ಕೆಲಸದಲ್ಲಿಯೂ ಅವರನ್ನು ಕಾಣುತ್ತೇವೆ. ಅವರು ಕಲಿಸಿದ ಶಿಸ್ತು ಮತ್ತು ವೈಚಾರಿಕತೆ ನಮ್ಮ ಜೀವನದಲ್ಲಿ ಏನಾದರೂ ಸಾಧಿಸಲು ದಾರಿಯಾಗಿದೆ ಎಂದರು.ಶಿಕ್ಷಕರಾಗಿದ್ದ ನಮ್ಮ ತಂದೆಯ ಸಂಸ್ಮರಣೆಗಾಗಿ ಬಿ.ಚನ್ನಪ್ಪಗೌರಮ್ಮ ವಚನ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಾ ಬರಲಾಗುತ್ತಿದೆ. ಕಳೆದ ಸಾಲಿನಲ್ಲಿ ವಿದ್ವಾನ್ ಎಂ.ಜಿ.ಸಿದ್ದರಾಮಯ್ಯ ಅವರಿಗೆ ನೀಡಲಾಗಿತ್ತು. ಈ ಬಾರಿ ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿರುವ, ಸಿದ್ದಗಂಗಾ ಮಠದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿರುವ, ವಚನ ಸಾಹಿತ್ಯದಲ್ಲಿ ಅಪಾರ ಕೆಲಸ ಮಾಡಿರುವ ಕೋ.ರಂ.ಬಸವರಾಜು ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಪ್ರಶಸ್ತಿ ಮೂಲಕ ತಮ್ಮ ತಂದೆಯನ್ನು ಜೀವಂತವಾಗಿಡುವ ಸಣ್ಣ ಪ್ರಯತ್ನವಿದು ಎಂದು ಡಾ.ಬಿ.ಸಿ.ಶೈಲಾ ನಾಗರಾಜು ನುಡಿದರು.
ಪ್ರಾಚೀನ ಕಾವ್ಯಗಳ ಪ್ರವಾಚಕರಾದ ಮುರುಳೀಕೃಷ್ಣ ಮಾತನಾಡಿ,ಬಿ.ಚನ್ನಪ್ಪ ಅವರದ್ದು ಮಾದರಿ ವ್ಯಕ್ತಿತ್ವ. ಶಿಕ್ಷಕರಾಗಿ ಅಷ್ಟೊಂದು ಶುದ್ಧ ಕನ್ನಡ ಮಾತನಾಡುವ ಮತ್ತೊಬ್ಬರನ್ನು ನಾನು ನೋಡಿಲ್ಲ. ಅವರಿಂದ ಆಧ್ಯಾತ್ಮಿಕವಾಗಿ ಸಾಕಷ್ಟು ಪ್ರೇರೇಪಿತನಾಗಿದ್ದೇನೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೈನಾ ಸಂಸ್ಥೆಯ ಅಧ್ಯಕ್ಷ ದೊಂಬರನಹಳ್ಳಿ ನಾಗರಾಜು ವಹಿಸಿದ್ದರು.ವೇದಿಕೆಯಲ್ಲಿ ನಿವೃತ್ತ ಅಧಿಕಾರಿ ಪಿ.ಎನ್.ಶಿವರುದ್ರಪ್ಪ, ಮಹಿಳಾ ಬಸವಕೇಂದ್ರದ ಕಲ್ಪನಾ ಉಮೇಶ್,ಬಿ.ಚನ್ನಪ್ಪಗೌರಮ್ಮ ಅವರ ಪುತ್ರರಾದ ಬಿ.ಸಿ.ಸೋಮಪ್ರಸಾದ್ ಮಂಜುಳ, ಬಿ.ಸಿ.ಪ್ರಭು ಪ್ರಸಾದ್ ರೂಪ ಮತ್ತಿತರರು ಉಪಸ್ಥಿತರಿದ್ದರು.