ಸಮಾಜದಲ್ಲಿನ ಮೇಲು ಕೀಳು, ಬಡವ ಶ್ರೀಮಂತ, ಸ್ತ್ರೀ ಪುರುಷ ಎಂಬ ಬೇಧವಿಲ್ಲದೆ ಪ್ರತಿಯೊಬ್ಬರೂ ಸಮಾನರು ಎಂಬ ಉನ್ನತ ತತ್ವ ದ್ಯೇಯವನ್ನು ಹೊಂದಿ ಸಮ ಸಮಾಜ ನಿರ್ಮಾಣಕ್ಕೆ ಅಗತ್ಯವಾಗಿರುವ ವಚನ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವ ದಿಸೆಯಲ್ಲಿ ಪ್ರತಿಯೊಬ್ಬರಿಗೂ ತಲುಪಿಸಬೇಕಾಗಿದೆ ಎಂದು ಶಿರಾಳಕೊಪ್ಪದ ವೈದ್ಯ ಡಾ.ಮುರುಘರಾಜ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಸಮಾಜದಲ್ಲಿನ ಮೇಲು ಕೀಳು, ಬಡವ ಶ್ರೀಮಂತ, ಸ್ತ್ರೀ ಪುರುಷ ಎಂಬ ಬೇಧವಿಲ್ಲದೆ ಪ್ರತಿಯೊಬ್ಬರೂ ಸಮಾನರು ಎಂಬ ಉನ್ನತ ತತ್ವ ದ್ಯೇಯವನ್ನು ಹೊಂದಿ ಸಮ ಸಮಾಜ ನಿರ್ಮಾಣಕ್ಕೆ ಅಗತ್ಯವಾಗಿರುವ ವಚನ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವ ದಿಸೆಯಲ್ಲಿ ಪ್ರತಿಯೊಬ್ಬರಿಗೂ ತಲುಪಿಸಬೇಕಾಗಿದೆ ಎಂದು ಶಿರಾಳಕೊಪ್ಪದ ವೈದ್ಯ ಡಾ.ಮುರುಘರಾಜ್ ತಿಳಿಸಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಲಿಂ.ರಾಜೇಶ್ವರಿ ಮತ್ತು ಲಿಂ.ದೇವಪ್ಪ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಚನ ಸಾಹಿತ್ಯ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಲು ಅತ್ಯಂತ ಪ್ರಶಸ್ತವಾಗಿದ್ದು, ತಾಲೂಕು ಹಲವು ಶಿವಶರಣರಿಗೆ ಜನ್ಮ ನೀಡಿದ ಪುಣ್ಯಭೂಮಿಯಾಗಿದೆ. ಇಲ್ಲಿನ ಮಣ್ಣಿನ ಕಣಕಣದಲ್ಲಿ ವಚನ ಸಾಹಿತ್ಯದ ಶ್ರೇಷ್ಠತೆ ಅಡಗಿದೆ ಎಂದ ಅವರು, ಶಿವಶರಣರು ರಚಿಸಿದ ವಚನ ಸಾಹಿತ್ಯ ಇಂದಿನ ಅಸಮಾನತೆಯ ಸಮಾಜಕ್ಕೆ ದಿವ್ಯ ಔಷಧವಾಗಿದ್ದು ಈ ದಿಸೆಯಲ್ಲಿ ಶಾಲಾ ಕಾಲೇಜುಗಳಲ್ಲಿ ವಚನಗಳ ಮಹತ್ವ ತಿಳಿಸುವ ದತ್ತಿ ಕಾರ್ಯಕ್ರಮ ಹೆಚ್ಚು ಹೆಚ್ಚು ಆಯೋಜಿಸಿ ಯುವಪೀಳಿಗೆಯಲ್ಲಿ ವಚನ ಸಾಹಿತ್ಯದ ಮಹತ್ವ ತಿಳಿಸಿ ಮುಂದಿನ ಪೀಳಿಗೆಗೆ ತಲುಪಿಸಬೇಕಾಗಿರುವುದು ತುರ್ತು ಅಗತ್ಯವಾಗಿದೆ ಎಂದು ತಿಳಿಸಿದರು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ವಚನಶ್ರೀ ಬಿ.ಎಸ್ ಮಾತನಾಡಿ, ಶಿಕಾರಿಪುರ ಶರಣರ ನಾಡು ವಚನ ಸಾಹಿತ್ಯವು ಯಾವುದೇ ಜಾತಿ ಮತ ಕುಲ ಗೋತ್ರಕ್ಕೆ ಸೀಮಿತವಾಗದೆ, ಎಲ್ಲವನ್ನು ಮೀರಿದೆ. ವಚನ ಸಾಹಿತ್ಯದ ಉಳಿವಿಗಾಗಿ ಇಂದಿನ ಮಕ್ಕಳು ನಾಳಿನ ಸಾಹಿತ್ಯ ಪ್ರಜೆಗಳು ಎನ್ನುವ ರೀತಿ ವಚನ ಸಾಹಿತ್ಯದ ಸಾರದ ಮಹತ್ವ ಅರಿತು ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಡಬೇಕೆಂದು ತಿಳಿಸಿದರು.

ಮೊಟ್ಟ ಮೊದಲು ಕನ್ನಡ ನೆಲದಲ್ಲಿ ಉದಯಿಸಿದ ಶರಣರ ಅನುಭವ ಹಾಗೂ ಅನುಭಾವದ ಮುಖಾಂತರ ಹೊರಹೊಮ್ಮಿದ ವಚನ ಸಾಹಿತ್ಯವನ್ನು ಎಲ್ಲಡೆ ಪಸರಿಸಬೇಕೆಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ಬಸವಾಶ್ರಮದ ಮಾತೆ ಶಿವಯೋಗಿಣಿ ಶರಣಾಂಬಿಕೆ ತಾಯಿ ಮಾತನಾಡಿ, ಶಿಕಾರಿಪುರದ ಮಣ್ಣಿನಲ್ಲಿ, ನೀರಿನಲ್ಲಿ, ಬೀಸುವ ಗಾಳಿಯಲ್ಲಿ, ಬೆಳೆಯುವ ಬೆಳೆಯಲ್ಲಿ ವಚನದ ಸಾರ ತುಂಬಿದ್ದು, ಅದನ್ನು ವಿಶ್ವದಾದ್ಯಂತ ಪಸರಿಸಬೇಕಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ತಾ.ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಕೆ ಶಶಿಧರ ಸ್ವಾಮಿ ಮಾತನಾಡಿ, ಮಕ್ಕಳ ಮನಸ್ಸು ಉಳುಮೆ ಮಾಡುವ ಭೂಮಿಯ ರೀತಿ ಮೃದುವಾಗಿದ್ದು, ಇಂತಹ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ನಡೆಸುವ ಮೂಲಕ ಭೂಮಿ ಬಿತ್ತುವ ಮುನ್ನ ಭೂಮಿಯನ್ನು ಹಸನಾಗಿ ಮಾಡಿ ಬೀಜ ಬಿತ್ತುವ ರೀತಿ ಹದವಾದ ಭೂಮಿಯಂತಿರುವ ಮಕ್ಕಳ ಮನಸ್ಸಿಗೆ ತಲುಪಿಸಬೇಕಾಗಿದೆ. ಈ ಕಾರಣದಿಂದ ಶಾಲಾ-ಕಾಲೇಜುಗಳಲ್ಲಿ ಆಯೋಜಿಸುವ ಉದ್ದೇಶ ಹೊಂದಿದ್ದು, ಬೀಜ ಮೊಳಕೆ ಒಡೆದು ಬೆಳೆಯಾಗಿ ಬೆಳೆದು ಉತ್ತಮ ಬೆಳೆಯ ರೀತಿ ವಚನ ಸಾಹಿತ್ಯವನ್ನು ಬೆಳೆಸಿ ಇತರರಿಗೆ ವಚನದ ಸ್ವಾದವನ್ನು ಮಕ್ಕಳು ಹರಡುವ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು.

ವಿದ್ಯಾರ್ಥಿನಿಯರಿಂದ ವಚನ ಪ್ರಾರ್ಥನೆ ನಡೆಯಿತು. ತಾ.ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಸುಬಾಶ್‌ಚಂದ್ರ ಸ್ಥಾನಿಕ್ ಮತ್ತಿತರರು ಉಪಸ್ಥಿತರಿದ್ದರು. ಶರಣು ಸಮರ್ಪಣೆಯನ್ನು ಅರ್ಪಿಸಿ ಕಾರ್ಯಕ್ರಮ ಅಂತ್ಯಗೊಳಿಸಲಾಯಿತು.