ಸಾರಾಂಶ
- ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ವಾರ್ಷಿಕ ಮಹಾಸಭೆಯಲ್ಲಿ ತೋಂಟದ ಶ್ರೀ ಅಭಿಮತ
- - - ಕನ್ನಡಪ್ರಭ ವಾರ್ತೆ ದಾವಣಗೆರೆಕನ್ನಡ ಭಾಷೆ, ಸಂಸ್ಕೃತಿಯ ಗೌರವವನ್ನು ಹೆಚ್ಚಿಸುವ ಕೆಲಸ ವಚನ ಸಾಹಿತ್ಯವು ಮಾಡಿದೆ. ಕನ್ನಡ ಸಾಹಿತ್ಯದಿಂದ ವಚನ ಸಾಹಿತ್ಯವನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಗದಗಿನ ತೋಂಟದ ಶ್ರೀ ಸಿದ್ಧರಾಮ ಸ್ವಾಮೀಜಿ ನುಡಿದರು.
ನಗರದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಭಾನುವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರ 30ನೇ ವಾರ್ಷಿಕ ಮಹಾಸಭೆ ಸಾನಿಧ್ಯ ವಹಿಸಿ ಅವರ ಮಾತನಾಡಿದರು. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಗೌರವವನ್ನು ಹೆಚ್ಚಿಸಿದ ವಚನ ಸಾಹಿತ್ಯವು ಅತ್ಯಂತ ಮಹತ್ವದ್ದಾಗಿದೆ ಎಂದರು.ವಚನ ಪ್ರಚುರಪಡಿಸುವುದು ಸಹ ಸಮಾಜ ಸೇವೆಯಾಗಿದೆ. ಇಂತಹ ಕಾರ್ಯವು ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರಿಗೆ ಮಾತ್ರವೇ ಸೀಮಿತವಾಗಿಲ್ಲ. ಜೀವನಕ್ಕೆ ಸನ್ಮಾರ್ಗ ತೋರಿದ, ವಿಶ್ವಮನ್ನಣೆ ಪಡೆದ ಸಾಹಿತ್ಯಕ್ಕೆ ಇಂದು ಹೆಚ್ಚು ಪ್ರೋತ್ಸಾಹ ಸಿಗಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಶರಣ ಸಾಹಿತ್ಯ ಪರಿಷತ್ತು ಯುವ ಸಮೂಹವನ್ನು ಹೆಚ್ಚು ಹೆಚ್ಚಾಗಿ ಆಕರ್ಷಿಸಬೇಕಿದೆ. ಮುಂದಿನ ಪೀಳಿಗೆಗೆ ವಚನ ಸಾಹಿತ್ಯವನ್ನು ಕಲ್ಪಿಸುವ ಜವಾಬ್ದಾರಿ ಸಂಸ್ಥೆಯ ಮೇಲಿದೆ. ಸಾಹಿತ್ಯವನ್ನು ಓದುವ ಹವ್ಯಾಸವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕಾಗಿದೆ ಎಂದು ಹೇಳಿದರು.ಸರ್ಕಾರವೇ ಸೂಚಿಸಿದೆ:
ಪರಿಷತ್ತು ರಾಜ್ಯಾಧ್ಯಕ್ಷ ಸಿ.ಸೋಮಶೇಖರ ಮಾತನಾಡಿ, ಶಾಲಾ-ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಚನಕಾರರ ಜೀವನದ ಬಗ್ಗೆ ಕಾರ್ಯಕ್ರಮ ನಡೆಸುವಂತೆ ಸರ್ಕಾರ ಸೂಚನೆಯೇ ಇದೆ. ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ನಿಮ್ಮ ಭಾಗದ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ, ಇಂತಹ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು.ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವಣ್ಣ, 12ನೇ ಶತಮಾನದ ಬಸವಾದಿ ಶಿವ ಶರಣ-ಶರಣೆಯರ ಅನುಭವದ ಜೀವನ ಮೌಲ್ಯಗಳನ್ನು ಒಳಗೊಂಡ ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಿಳಿಸುವ, ತಲುಪಿಸುವ ಸಂಕಲ್ಪದೊಂದಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆರಂಭವಾಗಿದೆ. ಪರಿಷತ್ತಿನ 30ನೇ ವಾರ್ಷಿಕ ಮಹಾಸಭೆ ಇದೇ ಮೊದಲ ಬಾರಿಗೆ ದಾವಣಗೆರೆಯಲ್ಲಿ ನಡೆಯುತ್ತಿದೆ ಎಂದರು.
ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಸಚಿವರಾದ ಎಸ್.ಎಸ್. ಪಾಟೀಲ್. ಲೀಲಾದೇವಿ ಆರ್.ಪ್ರಸಾದ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಪರಿಷತ್ತಿನ ಗೌರವ ಸಲಹೆಗಾರ ಗೊ.ರು. ಚನ್ನಬಸಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಶಿ. ಗಾಂಜಿ, ಉಪಾಧ್ಯಕ್ಷ ಅಪ್ಪಾ ರಾವ್ ಅಕ್ಕೊಣೆ, ಹೊನ್ನಲಿಂಗಯ್ಯ, ರಾಜ್ಯ ಕೋಶಾಧಿಕಾರಿ ಎಸ್.ಎಂ. ಹಂಪಯ್ಯ, ರಾಜ್ಯ ಕದಳಿ ವೇದಿಕೆ ಸಂಚಾಲಕಿ ಸುಶೀಲಾ ಸೋಮಶೇಖರ, ಗಾಯತ್ರಿ ವಸ್ತ್ರದ್, ಡಾ.ಶಿವರಾಜ ಕಬ್ಬೂರು, ಲಿಂಗಾನಂದ ಕಮ್ಮತ್ತಹಳ್ಳಿ, ಭರಮಪ್ಪ ಮೈಸೂರು, ಆರ್.ಸಿದ್ದಪ್ಪ, ಬಿ.ಟಿ.ಪ್ರಕಾಶ, ಜಿ.ಎಂ.ಕುಮಾರಪ್ಪ, ಬುಳ್ಳಾಪುರ ಮಲ್ಲಿಕಾರ್ಜುನ ಸ್ವಾಮಿ ಇತರರು ಇದ್ದರು.- - -
ಬಾಕ್ಸ್ * ಸಮುದಾಯ ಭವನ ನೀಡಿದಕ್ಕಾಗಿ ಕೃತಜ್ಞತೆ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ ಮಾತನಾಡಿ, ರಾಜ್ಯ, ಅನ್ಯರಾಜ್ಯಗಳಲ್ಲಿ ಸುಮಾರು 16,500 ಆಜೀವ ಸದಸ್ಯರು, ದಾವಣಗೆರೆಯಲ್ಲಿ ಸುಮಾರು 1500 ಆಜೀವ ಸದಸ್ಯರಿರುವ ಪರಿಷತ್ತಿನ ವಾರ್ಷಿಕ ಮಹಾಸಭೆಗೆ ರಾಜ್ಯ, ಹೊರ ರಾಜ್ಯಗಳಿಂದಲೂ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಪದಾಧಿಕಾರಿಗಳು ಭಾಗವಹಿಸಿದ್ದಾರೆ. ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಹಾಸಭೆಗಾಗಿ ಸಮುದಾಯ ಭವನವನ್ನು ಉಚಿತವಾಗಿ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.- - - -15ಕೆಡಿವಿಜಿ98, 99:
ದಾವಣಗೆರೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರ 30ನೇ ವಾರ್ಷಿಕ ಮಹಾಸಭೆಯನ್ನು ಗದಗಿನ ತೋಂಟದ ಶ್ರೀ ಸಿದ್ಧರಾಮ ಸ್ವಾಮೀಜಿ ಸಾನಿಧ್ಯದಲ್ಲಿ ಉದ್ಘಾಟಿಸಲಾಯಿತು.