ಜನರ ಬದುಕನ್ನು ಬದಲಿಸಲು ಹುಟ್ಟಿದ್ದೇ ವಚನ ಸಾಹಿತ್ಯ

| Published : Sep 02 2024, 02:00 AM IST

ಸಾರಾಂಶ

ವಚನ ಚಳವಳಿಯ ಕಾಲದಲ್ಲಿ ಜನರು ದೇಶ, ವಿದೇಶಗಳಿಂದಲೂ ಕಲ್ಯಾಣದತ್ತ ಬರತೊಡಗಿದರು

ಗದಗ: ಜನರ ಬದುಕು ಬದಲಿಸಲು ಹುಟ್ಟಿದ್ದೇ ವಚನ ಸಾಹಿತ್ಯವಾಗಿದೆ. ಅದನ್ನು ಪ್ರತಿಯೊಬ್ಬರು ಅರಿತುಕೊಂಡು ಬಾಳಬೇಕಾಗಿದೆ ಎಂದು ಉಪನ್ಯಾಸಕ ಸಿದ್ಧಲಿಂಗೇಶ ಸಜ್ಜನಶೆಟ್ರ ಹೇಳಿದರು.

ಸತತ ತಿಂಗಳ ಕಾಲ ವಚನ ಶ್ರಾವಣದ ಅಂಗವಾಗಿ ಹಮ್ಮಿಕೊಂಡು ಮನೆ ಮನೆಗೆ ಶರಣರ ಸಂದೇಶ ಬಿತ್ತರಿಸಿದ ಬಸವದಳ-ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘದ ಕಾರ್ಯ ಪ್ರಶಂಶನೀಯವಾದದ್ದು. 12ನೇ ಶತಮಾನ ಈ ನಾಡಿನ ಬದಲಾವಣೆಗಳ ಪರ್ವಕಾಲವಾಗಿದೆ. ಪರಂಪರೆಯ ಹೆಸರಿನಲ್ಲಿದ್ದ ಹಲವು ಅನಿಷ್ಟಗಳ ವಿರುದ್ಧ ಬಸವಾದಿ ಶರಣರು ಬಂಡಾಯದ ಧ್ವನಿ ಎತ್ತಿದ ಕಾಲವಾಗಿದೆ. ವಚನ ಸಾಹಿತ್ಯವು ಜನಸಾಮಾನ್ಯರಿಂದ, ಜನಸಾಮಾನ್ಯರಿಗೋಸ್ಕರ ರಚಿತವಾದ ಸಾಹಿತ್ಯವಾಗಿದೆ. ಅಲ್ಲದೇ ವಚನಗಳು ಅತೀ ಸರಳ ಭಾಷೆಯಲ್ಲಿದ್ದು ಎಂಥ ಸಾಮಾನ್ಯನೂ ಅರಿತುಕೊಳ್ಳಬಹುದಾಗಿದೆ. ಈ ಕಾರಣ ವಚನ ಚಳವಳಿಯ ಕಾಲದಲ್ಲಿ ಜನರು ದೇಶ, ವಿದೇಶಗಳಿಂದಲೂ ಕಲ್ಯಾಣದತ್ತ ಬರತೊಡಗಿದರು. ಅನುಭವ ಮಂಟಪ ಶರಣರ ಕೇಂದ್ರ ಸ್ಥಳವಾಗಿತ್ತು. ಅನೇಕ ಶರಣರು ಇಲ್ಲಿದ್ದರು ಎಂದರು.

ಎಸ್.ಎ.ಸೋಮಗೊಂಡ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕರು ಸಿದ್ಧರಾಮೇಶ್ವರರ ವಚನ ಚಿಂತನೆ ನಡೆಸಿದರು. ಕಲ್ಲನಗೌಡ್ರ ಗುರುಗಳು ಹಾಗೂ ಅಶೋಕ ಬರಗುಂಡಿ ಮುಂತಾದವರು ಮಾತನಾಡಿದರು. ಬಸವದಳದ ಶರಣೆಯರಿಂದ ವಚನ ಪ್ರಾರ್ಥನೆ ನಡೆಯಿತು. ಡಾ. ಅರುಣ ಸೋಮಗೊಂಡ ಸ್ವಾಗತಿಸಿದರು. ಎಸ್.ಎ.ಮುಗದ ನಿರೂಪಿಸಿದರು. ಶಂಕರಪ್ಪ ಸೋಮಗೊಂಡ ದಂಪತಿಗಳು. ಶಿಲ್ಪಾ ಶ್ರೀಧರ ಧರ್ಮಾಯತ, ದೀಪಾ ಬಸವರಾಜ ಧರ್ಮಾಯತ, ವಿದ್ಯಾವತಿ ಮಲ್ಲಿಕಾರ್ಜುನ ಪಾಟೀಲ ಮುಂತಾದವರನ್ನು ಸನ್ಮಾನಿಸಲಾಯಿತು. ಸೋಮಗೊಂಡ ಬಂಧುಗಳು, ಓಣಿಯ ಜನರು ಬಸವದಳ -ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘದ ಸದಸ್ಯರು ಪಾಲ್ಗೊಂಡಿದ್ದರು.