ಸಾರಾಂಶ
ಕಂಪ್ಲಿ: ಪಟ್ಟಣದ ಗಂಗಾ ಸಂಕಿರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್‌ನಿಂದ ಸೋಮವಾರ 172ನೇ ಮಹಾಮನೆ ಕಾರ್ಯಕ್ರಮ ನಡೆಯಿತು.ಎಮ್ಮಿಗನೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಬಿ. ವೀರೇಶ ವಚನ ಸಾಹಿತ್ಯ ಮತ್ತು ವಚನಕಾರರು ಕುರಿತು ಮಾತನಾಡಿ, ವಚನ ಸಾಹಿತ್ಯ ಜಾಗತಿಕ ಸಾಹಿತ್ಯಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ. ಹನ್ನೆರಡನೆಯ ಶತಮಾನದ ವಚನ ಪರಂಪರೆಯು ಇಂದಿಗೂ ಪ್ರಗತಿಯಲ್ಲಿದ್ದು, ಆಧುನಿಕ ವಚನಕಾರರು ಶರಣ ಸಂಸ್ಕೃತಿಯನ್ನು ಮುನ್ನಡೆಸುತ್ತಿದ್ದಾರೆ. ಭಕ್ತಿ ಭಾವಶುದ್ಧತೆಯ ಪ್ರತೀಕವಾಗಿದ್ದು, ಶರಣರು, ಭಕ್ತಿ ಮತ್ತು ಕಾಯಕವನ್ನು ಪ್ರಮುಖವಾಗಿ ಬೋಧಿಸಿದರು. ಜಗವನ್ನು ಪರಿವರ್ತಿಸುವ ಅಂತರ್ ದೃಷ್ಟಿ ವಚನ ಸಾಹಿತ್ಯಕ್ಕಿದೆ. ಪ್ರಜ್ಞೆಯೇ ಅಂತರಂಗದ ದೇವರಾಗಿದ್ದಾನೆ. ನಮ್ಮಲ್ಲಿಯೇ ದೇವರನ್ನು ಕಂಡಾಗ ಸಮಾನತೆ ಸಾಧಿಸಲು ಸಾಧ್ಯ. ಕಾಯಕ ನಿಷ್ಠೆ ಅಳವಡಿಸಿಕೊಂಡಲ್ಲಿ ಜನ ಕಚೇರಿಗೆ ಅಲೆಯುವುದು ತಪ್ಪುತ್ತದೆ. ಜಗವನ್ನು ಪರಿವರ್ತಿಸುವ ಅಂತರ್‌ದೃಷ್ಟಿ ವಚನ ಸಾಹಿತ್ಯದಲ್ಲಿ ಅಡಗಿದೆ ಎಂದರು.
ಡಾ. ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ಸಂಚಾಲಕ ಬಡಿಗೇರ ಜಿಲಾನ್‌ಸಾಬ್ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲಿಯೇ ವಚನ ಕಂಠಪಾಠ ಮಾಡಿಸುವ, ಅರ್ಥೈಸುವಿಕೆಯನ್ನು ಪ್ರೇರೇಪಿಸಬೇಕಿದೆ ಎಂದರು.ತಾಲೂಕು ಲಿಂಗಾಯತ ಮಹಾಸಭಾದ ಪದಾಧಿಕಾರಿ ಬಿ.ಎಂ. ರುದ್ರಯ್ಯ ಮಾತನಾಡಿ, ಬಸವ ತತ್ವಗಳು ಸರಳ ಜೀವನವನ್ನು ರೂಪಿಸುತ್ತವೆ. ಜೀವನ ಜಂಜಾಟದಿಂದ ಪಾರಾಗಲು, ಆದರ್ಶ ಜೀವನ ಸಾಗಿಸಲು ಬಸವ ತತ್ವ ಅಳವಡಿಕೆ ಅಗತ್ಯ ಎಂದರು.
ಪರಿಷತ್ ತಾಲೂಕು ಅಧ್ಯಕ್ಷ ಜಿ. ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿತ್ಯ ಜೀವನದಲ್ಲಿ ಲಿಂಗಪೂಜೆ ಮರೆಯಬಾರದು. ಗಳಿಕೆಗಾಗಿಯೇ ಬದುಕದೆ, ಬದುಕಿಗಾಗಿ ಹಿತಮಿತವಾಗಿ ಗಳಿಸಬೇಕು ಎಂದರು.ಈ ಸಂದರ್ಭದಲ್ಲಿ ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪ್ರಮುಖರಾದ ಎಸ್.ಡಿ. ಬಸವರಾಜ, ಎಸ್. ಶಾಮಸುಂದರರಾವ್, ಅಶೋಕ ಕುಕನೂರು, ಎಚ್. ನಾಗರಾಜ, ಕೆ. ಚಂದ್ರಶೇಖರ, ಸಂತೋಷ್ ಸೋಗಿ, ಸಜ್ಜೇದ ವೀರಭದ್ರಪ್ಪ, ಎಲಿಗಾರ ವೆಂಕಟರೆಡ್ಡಿ, ಎಸ್. ರಾಮಪ್ಪ, ಅರುಣ್‌ಕುಮಾರ್, ಯು.ಎಂ. ವಿದ್ಯಾಶಂಕರ, ಕೆ. ಸಂಗಮೇಶ, ಮಡಿವಾಳ ಹುಲುಗಪ್ಪ ಸೇರಿ ಇತರರಿದ್ದರು.