ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಶರಣರು ತಮ್ಮ ಜೀವಿತಾವಧಿಯಲ್ಲಿ ಅಧಿಕಾರ ಮತ್ತು ಸಂಪತ್ತನ್ನು ಶಾಶ್ವತ ಸಂಪತ್ತು ಎಂದು ಭಾವಿಸಿರಲಿಲ್ಲ. ಪರಮಾರ್ಥ ಬದುಕು ಮಾತ್ರ ನಿತ್ಯ ಶಾಂತಿ ನೀಡುವಂತಹದ್ದು ಎಂದು ಭಾವಿಸಿ ಜೀವನ ನಡೆಸುತ್ತಿದ್ದರು ಎಂದು ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.ಸೋಮವಾರ ಪಟ್ಟಣದ ಕಾನುಕೇರಿ ಮಠದಲ್ಲಿ ಅಕ್ಕನ ಬಳಗದಿಂದ ಶ್ರಾವಣ ಮಾಸ ಪರ್ಯಂತರವಾಗಿ ಆಯೋಜಿಸಿರುವ ಶ್ರಾವಣ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿ, ಶರಣರಾರು ಸಾಮಾನ್ಯರಾಗಿರಲಿಲ್ಲ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದು, ಗೌರವವನ್ನು ಗಳಿಸಿದವರಿದ್ದರು. ಬದುಕಿನಲ್ಲಿ ಶ್ರೇಷ್ಠತೆ ಹೊಂದಿದ್ದರು. ಆದರೆ ಅವರಾರು ಲೌಕಿಕ ಸುಖಕ್ಕೆ ಅಂಟಿಕೊಂಡಿರಲಿಲ್ಲ. ಅವರು ಸುಖಕ್ಕೆ ಅಂಟಿಕೊಂಡಿದ್ದರೆ ಶರಣರಾಗುತ್ತಿರಲಿಲ್ಲ. ಲೌಕಿಕ ಧನ ಕನಕ ವಸ್ತು ವಾಹನಗಳು ನಮ್ಮಲ್ಲಿದ್ದರೂ ನಾವು ಎಷ್ಟು ಅನುಭವಿಸುತ್ತೇವೆ. ಬದುಕಿನ ಪೂರ್ತಿ ಅನುಭವಿಸಲು ಆಗುತ್ತದೆಯೇ? ಆಗುವುದಿಲ್ಲ. ಅವು ಕೇವಲ ನಮ್ಮ ಕ್ಷಣಿಕದ ಆಸೆ ಪೂರೈಸಲು ಇರುವ ಸಾಧನಗಳು. ಅವುಗಳ ಸಂಗ್ರಹವೇ ಜೀವನದ ಗುರಿಯಾಗಬಾರದು. ಶಾಶ್ವತ ಸತ್ಯ ಅರಿಯುವ ಪ್ರಯತ್ನ ಮಾಡುವುದು ಎಲ್ಲರ ಗುರಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ವೀರೇಶ್ ಮೇಸ್ತ್ರಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ ಹಾಗೂ ಸಂಸ್ಕಾರ ನೀಡುತ್ತವೆ. ನಾವು ನಮ್ಮ ಆತ್ಮ ಶುದ್ಧಿ ಮಾಡಿಕೊಳ್ಳಲು ಈ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಆದ್ದರಿಂದ ಸುನಡತೆ ದಾರಿಗೆ ದೀವಿಗೆಯಾಗುವ ಶರಣರ ವಚನ ಪಾಲಿಸುವ ಔದಾರ್ಯ ನಮ್ಮಲ್ಲಿ ಬೆಳೆಯಬೇಕು ಮತ್ತು ಯುವ ಜನತೆ ವಚನಗಳ ಅರ್ಥವತ್ತತೆ ಅರಿಯುವ ಅಗತ್ಯವಿದೆ ಎಂದರು.ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ ಹಾಗೂ ಶಿಕ್ಷಕರಾದ ಷಣ್ಮುಖಚಾರ್ ನುಡಿ ಸೇವೆ ಸಲ್ಲಿಸಿದರು. ರೇಖಾ ಶ್ರೀನಿವಾಸ ನಾವಡ ಸೇವಾ ಕೈಂಕರ್ಯದಲ್ಲಿ ಸೊರಬದ ದೈವಜ್ಞ ಸಮಾಜದ ಸದ್ಭಕ್ತರು ಭಜನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಚಂದ್ರಶೇಖರ ನಿಜಗುಣ, ಲಿಂಗರಾಜ ದೂಪದಮಠ, ಡಿ. ಶಿವಯೋಗಿ, ಉದ್ಯಮಿ ನಾಗರಾಜ ಗುತ್ತಿ ಸೇರಿದಂತೆ ಅಕ್ಕನ ಬಳಗದ ಮಾತೆಯರು ಟೌನ್ ವೀರಶೈವ ಸಮಾಜದ ಸದಸ್ಯರು ಹಾಗೂ ಕಾನುಕೇರಿ ಮಠದ ಸದ್ಭಕ್ತರು ಉಪಸ್ಥಿತರಿದ್ದರು.