ವಚನಕಾರರು ಕನ್ನಡ ಭಾಷೆಗೆ ಹೊಸ ಆಯಾಮ ತಂದುಕೊಟ್ಟಿದ್ದಾರೆ: ಟಿ.ಎಸ್. ನಾಗಾಭರಣ

| Published : Aug 30 2025, 01:00 AM IST

ಸಾರಾಂಶ

ಚಿಕ್ಕಮಗಳೂರು, ವಚನಾಕಾರರು ಕನ್ನಡಕ್ಕೆ ಬಹಳ ದೊಡ್ಡ ಕೊಡುಗೆಯನ್ನು 12ನೇ ಶತಮಾನದಲ್ಲೇ ನೀಡಿದ್ದಾರೆ. ಜಗಜ್ಯೋತಿ ಬಸವಣ್ಣನವರ ಬದುಕಿನ ಅನುಭವಗಳು ಅನುಭಾವವಾಗಿ ಜನರ ಆಡುಭಾಷೆಯಲ್ಲಿ ಸಾಹಿತ್ಯ ರಚಿಸಿ ಇಡೀ ಜಗತ್ತಿಗೆ ನೈತಿಕ ಜಾಗೃತಿ ಕೊಟ್ಟ ಪರಿಣಾಮ ಕನ್ನಡ ಭಾಷೆಗೆ ಹೊಸ ಆಯಾಮ ದೊರೆಯಿತು ಎಂದು ನಟ, ನಿರ್ದೇಶಕ, ಟಿ.ಎಸ್. ನಾಗಾಭರಣ ಹೇಳಿದರು.

ಬಸವತತ್ತ್ವ ಪೀಠದಲ್ಲಿ ಶಿವಾನುಭವಗೋಷ್ಠಿ- 49 । ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಚನಾಕಾರರು ಕನ್ನಡಕ್ಕೆ ಬಹಳ ದೊಡ್ಡ ಕೊಡುಗೆಯನ್ನು 12ನೇ ಶತಮಾನದಲ್ಲೇ ನೀಡಿದ್ದಾರೆ. ಜಗಜ್ಯೋತಿ ಬಸವಣ್ಣನವರ ಬದುಕಿನ ಅನುಭವಗಳು ಅನುಭಾವವಾಗಿ ಜನರ ಆಡುಭಾಷೆಯಲ್ಲಿ ಸಾಹಿತ್ಯ ರಚಿಸಿ ಇಡೀ ಜಗತ್ತಿಗೆ ನೈತಿಕ ಜಾಗೃತಿ ಕೊಟ್ಟ ಪರಿಣಾಮ ಕನ್ನಡ ಭಾಷೆಗೆ ಹೊಸ ಆಯಾಮ ದೊರೆಯಿತು ಎಂದು ನಟ, ನಿರ್ದೇಶಕ, ಟಿ.ಎಸ್. ನಾಗಾಭರಣ ಹೇಳಿದರು.

ಕಲ್ಯಾಣ ನಗರದ ಬಸವತತ್ತ್ವ ಪೀಠದಲ್ಲಿ ನಡೆದ ಶಿವಾನುಭವ ಗೋಷ್ಠಿ- 49, ಸಾಧಕ ಪ್ರಶಸ್ತಿ ಪ್ರದಾನ ಹಾಗೂ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಐಸಿರಿ ಸಾಧಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಇಂದಿಗೂ ಕನ್ನಡ ಭಾಷೆ ವರ್ಚಸ್ಸನ್ನು ಹೊಂದಿರುವುದಕ್ಕೆ ವಚನಾಕಾರರು ಕೊಟ್ಟ ಸಾಹಿತ್ಯ ಪ್ರಮುಖ ಕಾರಣ. ಪ್ರಜಾ ಸಾಹಿತ್ಯ ಎಂದು ಕರೆಯಲ್ಪಡುವುದೇ ವಚನ ಸಾಹಿತ್ಯ. ಸಾದಾ ಸೀದವಾಗಿ ಕೇಳಿದ ತಕ್ಷಣವೇ ಪರಿವರ್ತನೆಗೊಳ್ಳುವ ವಚನ ಸಾಹಿತ್ಯ ಬದುಕು ಕಟ್ಟಿಕೊಳ್ಳಲು ಪೂರಕವಾಗಿದೆ ಎಂದು ವಿಶ್ಲೇಷಿಸಿದರು.

ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಬಸವ ತತ್ತ್ವ ಪೀಠದಲ್ಲಿ ಡಾ. ಬಸವ ಮರುಳಸಿದ್ದ ಸ್ವಾಮಿ ಪೀಠಾಧ್ಯಕ್ಷರಾದ ಬಳಿಕ ಈ ಭಾಗದಲ್ಲಿ ಸಾಮಾಜಿಕ, ಧಾರ್ಮಿಕ ಮತ್ತು ಪರಿಸರ ರಕ್ಷಣೆಗೆ ಎಲ್ಲರನ್ನೂ ಒಗ್ಗೂಡಿಸಿ ಸಂಘಟಿತ ಪ್ರಯತ್ನ ಮಾಡಿದ ಹಿನ್ನೆಲೆಯಲ್ಲಿ ಶ್ರೀಗಳು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಸಾರ್ವಜನಿಕರು ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬಂತೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.ಐಸಿರಿ ಫೌಂಡೇಶನ್ ಅಧ್ಯಕ್ಷ ರೋಹನ್ ಭಾರ್ಗವಪುರಿ ಮಾತನಾಡಿ, ಭರವಸೆ ಮತ್ತು ಸುಧಾರಣೆ ಗುರಿ ಹೊಂದಿರುವ ಐಸಿರಿ ಫೌಂಡೇಶನ್, ಸ್ವ ವಿಕಸನಕ್ಕಾಗಿ, ಹಸಿರು ಸಮರ್ಥನೀಯ ಭವಿಷ್ಯಕ್ಕಾಗಿ ಹಾಗೂ ಜವಾಬ್ದಾರಿಯುವ ನಾಗರಿಕ ನಿರ್ಮಾಣ ಎಂಬ ಮೂರು ಆಯಾಮದಡಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ತನ್ನ ಕಾರ್ಯಾರಂಭ ಪ್ರಾರಂಭಿಸಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಬಸವತತ್ತ್ವ ಪೀಠದ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿ, ಶಿಕ್ಷಣ ಎಲ್ಲಾ ದಿಕ್ಕಿನಿಂದ ಒಳ್ಳೆ ವಿಚಾರಗಳು ಬಂದು ಸೇರಿ ಮುಕ್ತ ಹೃದಯ ಬೆಳೆಸ ಬೇಕು. ಇದು ಎಡ ಮತ್ತು ಬಲ ಪಂಥೀಯ ಪುಸ್ತಕಗಳಿಂದ ದೊರೆಯುವುದಿಲ್ಲ. ಕಲಿಯುವಿಕೆಯನ್ನು ಕೇಂದ್ರವಾಗಿರುವ ವಿದ್ಯಾರ್ಥಿಗಳಲ್ಲಿ ಕಲಿಕೆ ಹಂಬಲ ಮೂಡಿಸಬೇಕಾಗಿದೆ ಎಂದರು.

ಲೈಫ್‌ಲೈನ್ ಫೀಡ್ಸ್‌ನ ಸಂಸ್ಥಾಪಕ ಕಿಶೋರ್ ಕುಮಾರ್ ಹೆಗ್ಡೆ ಮಾತನಾಡಿ, ಐಸಿರಿ ಫೌಂಡೇಶನ್ ಪರಿಸರದ ಬಗ್ಗೆ ಅವರ ಕಾಳಜಿ, ನಿಮ್ಮೆಲ್ಲರ ಸಹಕಾರ ಅಭಿನಂದನೀಯ ಎಂದರು. ಸಾಹಿತಿ ನಾಗಶ್ರೀ ತ್ಯಾಗರಾಜ್ ’ಪದ್ಮಪತ್ರೆ’ ಮತ್ತು ಹುಳಿಗೆರೆ ಮಲ್ಲಿಕಾರ್ಜುನ್ ಅವರ ’ಒನ್ ಮಿನಿಟ್ ಪ್ರೀಸ್’ ಕೃತಿಗಳು ಲೋಕಾರ್ಪಣೆಗೊಂಡವು.

ಇದೇ ಸಂದರ್ಭದಲ್ಲಿ ಐಸಿರಿ ಫೌಂಡೇಶನ್ ಕೊಡಮಾಡುವ ಸಾಧಕ ಪ್ರಶಸ್ತಿಯನ್ನು ಟಿ.ಎಸ್. ನಾಗಾಭರಣ, ಅದಮ್ಯ ಚೇತನ ಸಂಸ್ಥೆ ತೇಜಸ್ವಿನಿ ಅನಂತಕುಮಾರ್, ಸಮನ್ವಯ ಸಂಸ್ಥೆಯ ಸಮನ್ವಯ ಕಾಶಿ, ನೈಸರ್ಗಿಕ ಕೃಷಿಕ ಚಂದ್ರಶೇಖರ್ ನಾರಣಾಪುರ, ವೈಲ್ಡ್‌ಕ್ಯಾಟ್-ಸಿ ಸಂಸ್ಥಾಪಕ ಡಿ.ವಿ ಗಿರೀಶ್‌ರವರಿಗೆ ನೀಡಿ ಗೌರವಿಸಲಾಯಿತು.

ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರಸಭಾ ಆಯುಕ್ತ ಬಿ.ಸಿ. ಬಸವರಾಜು, ಎಚ್.ಸಿ. ಕಲ್ಮರುಡಪ್ಪ, ಸೋಮಶೇಖರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಪತ್ರಕರ್ತ ಕೆ.ಕೆ. ಕಲ್ಯಾಣ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ.ಎಸ್ ರಾಘವೇಂದ್ರ ಉಪಸ್ಥಿತರಿದ್ದರು. ನಾಗಾಭರಣ ಅವರ ಧರ್ಮಪತ್ನಿ ನಾಗಿಣಿ ಭರಣ, ನಗರಸಭೆ ಸದಸ್ಯರಾದ ಶಾದಬ್, ಅರುಣ್ ಕುಮಾರ್, ಉದ್ಯಮಿ ನಂಜೇಶ್ ಬೆಣ್ಣೂರ್, ಕೆ.ಎಂ. ಅನುಷಾ ಉಪಸ್ಥಿತರಿದ್ದರು. 29 ಕೆಸಿಕೆಎಂ 5ಚಿಕ್ಕಮಗಳೂರಿನ ಬಸವತತ್ತ್ವ ಪೀಠದಲ್ಲಿ ನಡೆದ ಶಿವಾನುಭವಗೋಷ್ಠಿ- 49, ಸಾಧಕ ಪ್ರಶಸ್ತಿ ಪ್ರದಾನ ಹಾಗೂ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ಡಾ. ಬಸವ ಮರುಳಸಿದ್ದ ಸ್ವಾಮೀಜಿ ಉದ್ಘಾಟಿಸಿದರು. ಶಾಸಕ ಎಚ್‌.ಡಿ. ತಮ್ಮಯ್ಯ, ಟಿ.ಎಸ್‌. ನಾಗಭರಣ, ಕಿಶೋರ್‌ಕುಮಾರ್‌ ಹೆಗ್ಡೆ, ಬಿ.ಪಿ. ಬಸವರಾಜ್‌ ಉಪಸ್ಥಿತರಿದ್ದರು.