ವಚನಗಳು ಆಧುನಿಕ ಸಮಸ್ಯೆಗೆ ದಿವ್ಯೌಷಧಿಯಿದ್ದಂತೆ: ವಿಶ್ರಾಂತ ಪ್ರಾಧ್ಯಾಪಕ ಡಾ. ತಳವಾರ

| Published : Mar 07 2025, 12:45 AM IST

ವಚನಗಳು ಆಧುನಿಕ ಸಮಸ್ಯೆಗೆ ದಿವ್ಯೌಷಧಿಯಿದ್ದಂತೆ: ವಿಶ್ರಾಂತ ಪ್ರಾಧ್ಯಾಪಕ ಡಾ. ತಳವಾರ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯರು ಇಂದಿನ ಜನ ಮಾನಸಿಕ ಕ್ಷೋಭೆಗೆ ಒಳಗಾಗಿದ್ದಾರೆ, ಜೀವನದ ಜಂಜಾಟ ಮತ್ತು ಒತ್ತಡಕ್ಕೆ ಸಿಲುಕಿ ಅಸುಖಿಗಳಾಗಿದ್ದಾರೆ, ಆಧುನಿಕ ಮನುಷ್ಯನ ಈ ಸಮಸ್ಯೆಗಳಿಗೆ ಶರಣರ ವಚನಗಳು ಮದ್ದಿನ ರೂಪದಲ್ಲಿ ಕೆಲಸ ಮಾಡುತ್ತವೆ.

ಕನ್ನಡಪ್ರಭ ವಾರ್ತೆ ಮೈಸೂರು

ಎಲ್ಲವೂ ಬೇಕು ಎಂದು ಬಯಸುವ ಮಾನವನಿಗೆ ಆ ಬಯಕೆಗಳೇ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿವೆ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಎನ್.ಎಂ. ತಳವಾರ ಅಭಿಪ್ರಾಯಪಟ್ಟರು.

ಕುವೆಂಪು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಮತ್ತು ಮೈಸೂರು ವಿವಿ ಶ್ರೀ ಬಸವೇಶ್ವರ ಸಂಶೋಧನೆ ಅಧ್ಯಯನ ಹಾಗೂ ವಿಸ್ತರಣಾ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ದೇವರ ದಾಸಿಮಯ್ಯ ಅವರ ವಚನಗಳ ಚಿಂತನೆ ಕುರಿತ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

12ನೇ ಶತಮಾನದ ದೇವರ ದಾಸಿಮಯ್ಯ ಮೊದಲಾದ ಶಿವಶರಣರು ಎಲ್ಲಾ ಬಗೆಯ ಲೌಕಿಕ ಭೋಗ ಭಾಗ್ಯಗಳನ್ನು ನಿರಾಕರಿಸಿ ಅರಿವಿನ ವಿಸ್ತರಣೆಗೆ ಕಾರಣವಾಗುವ ಶರಣರ ವಚನಗಳು ತಮ್ಮ ಇಷ್ಟದೈವ ಶಿವನಿಗೆ ಸಮ ಎಂದು ಭಾವಿಸಿದ್ದರು. ವಿಭಿನ್ನ ಜೀವರಾಶಿಗಳಿಂದ ತುಂಬಿರುವ ಈ ಲೋಕದ ಹಿತ ಕಾಯುವುದು ಶಿವತತ್ವ, ಆ ಶಿವತತ್ವವನ್ನು ಅರಿತರೆ ಮನುಷ್ಯ ಮೃಗತ್ವದಿಂದ ಮಾನವನಾಗುತ್ತಾನೆ ಎಂದರು.

ಬಸವಣ್ಣ ಮತ್ತು ಕುವೆಂಪು ಅವರು ಸಾರಿದ ವಿಶ್ವಮಾನವತ್ವ ಸಾಧ್ಯವಾಗುತ್ತದೆ, ಇದು ಇಂದಿನ ಅಗತ್ಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಮೈಲಹಳ್ಳಿ ರೇವಣ್ಣ ಅವರು, ವಚನಗಳ ಮೂಲಕ ಸಮಾನತೆ ಮತ್ತು ಸಮ ಸಂಸ್ಕೃತಿಯನ್ನು ಸಾಧಿಸುವುದು ಶರಣರ ಧ್ಯೇಯವಾಗಿತ್ತು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪುಟ್ಟರಾಜ ಮಾತನಾಡಿ, ಮನುಷ್ಯರು ಇಂದಿನ ಜನ ಮಾನಸಿಕ ಕ್ಷೋಭೆಗೆ ಒಳಗಾಗಿದ್ದಾರೆ, ಜೀವನದ ಜಂಜಾಟ ಮತ್ತು ಒತ್ತಡಕ್ಕೆ ಸಿಲುಕಿ ಅಸುಖಿಗಳಾಗಿದ್ದಾರೆ, ಆಧುನಿಕ ಮನುಷ್ಯನ ಈ ಸಮಸ್ಯೆಗಳಿಗೆ ಶರಣರ ವಚನಗಳು ಮದ್ದಿನ ರೂಪದಲ್ಲಿ ಕೆಲಸ ಮಾಡುತ್ತವೆ ಎಂದು ಹೇಳಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪಿ. ಬೆಟ್ಟೇಗೌಡ, ಡಾ.ಆರ್. ಗುರುಸ್ವಾಮಿ, ಡಾ. ಮುರಳೀಧರ, ಪ್ರೊ. ಶೋಭಾರಾಣಿ, ಡಾ. ಯಲ್ಲವ್ವ ಹೆಬ್ಬಳ್ಳಿ ಮೊದಲಾದವರು ಇದ್ದರು.