ವಚನವೆಂಬುದು ನೈತಿಕ, ಬೌದ್ಧಿಕ ಸಂಪತ್ತಾಗಿ ಮಾನವೀಯ ಮೌಲ್ಯಗಳನ್ನು ಗಟ್ಟಿಯಾಗಿ ಕಟ್ಟಿಕೊಡುವ ಅತ್ಯಂತ ಸರಳ ಅನುಭಾವ ಸಾಹಿತ್ಯವಾಗಿದೆ ಎಂದು ಬೊಮ್ಮನಹಳ್ಳಿಯ ಗುರುಪಾದೇಶ್ವರ ವಿರಕ್ತಮಠದ ಪೀಠಾಧಿಪತಿ ಶಿವಯೋಗೀಶ್ವರ ಮಹಾಸ್ವಾಮಿಗಳು ತಿಳಿಸಿದರು.

ಹಾನಗಲ್ಲ: ವಚನವೆಂಬುದು ನೈತಿಕ, ಬೌದ್ಧಿಕ ಸಂಪತ್ತಾಗಿ ಮಾನವೀಯ ಮೌಲ್ಯಗಳನ್ನು ಗಟ್ಟಿಯಾಗಿ ಕಟ್ಟಿಕೊಡುವ ಅತ್ಯಂತ ಸರಳ ಅನುಭಾವ ಸಾಹಿತ್ಯವಾಗಿದೆ ಎಂದು ಬೊಮ್ಮನಹಳ್ಳಿಯ ಗುರುಪಾದೇಶ್ವರ ವಿರಕ್ತಮಠದ ಪೀಠಾಧಿಪತಿ ಶಿವಯೋಗೀಶ್ವರ ಮಹಾಸ್ವಾಮಿಗಳು ತಿಳಿಸಿದರು.

ತಾಲೂಕಿನ ಬೊಮ್ಮನಹಳ್ಳಿಯ ಶ್ರೀ ಗುರುಪಾದೇಶ್ವರ ವಿರಕ್ತಮಠದಲ್ಲಿ, ಹಾವೇರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಆಯೋಜಿಸಿದ ಹಾವೇರಿ ಜಿಲ್ಲಾ ಮಟ್ಟದ ೭ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಚನ ಕಂಠಪಾಠ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ವಚನಗಳು ನಮ್ಮ ಭಾವಕೋಶವನ್ನು ಅತ್ಯಂತ ಸರಳವಾಗಿ ತಲುಪಿ ಬದುಕಿನ ಸತ್ಯವನ್ನು ಮೌಲಿಕವಾಗಿ ಅರುಹಿ ಆಚರಿಸಲು ಸಹಾಯ ಮಾಡುವ ನಿತ್ಯ ಸಂಜೀವಿನಿ. ಶರಣರ ಕಾಯಕ ಶ್ರೇಷ್ಠ ಬದುಕಿನ ದಾರಿಯಲ್ಲಿ ಕಂಡುಂಡ ಸಮಾಜ ವಿಘಟಕ ಸಂಗತಿಗಳಿಗೆ ತಿಲಾಂಜಲಿ ಹಾಡಿ, ಸತ್ಸಂಗದ ಸೌಖ್ಯ ಬದುಕಿಗೆ ಪ್ರೇರಣೆ ನೀಡುವ ಪ್ರಭಾವಿ ಸಾಹಿತ್ಯವಾಗಿದೆ. ಎಲ್ಲ ಕಾಲಕ್ಕೂ ಸಲ್ಲುವ ವಚನಗಳು ಸಮಾಜದಲ್ಲಿ ನಿತ್ಯ ನಿರಂತರ ಆಚರಣೆಗೆ ಬರುವಂತಾಗಬೇಕು ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪೂರ ಮಾತನಾಡಿ, ಜಾತಿ ಮತ ಪಂಥದ ಮೇರೆ ಮೀರಿ ಎಲ್ಲರೊಳಗೊಂದಾಗಿ ಬದುಕುವ ಜೀವನ ಸಂದೇಶಗಳು ವಚನ ಸಾಹಿತ್ಯದ ಶಕ್ತಿಯಾಗಿವೆ. ಎಲ್ಲ ಕಾಲಮಾನಕ್ಕೆ, ಎಲ್ಲರ ಮನಸ್ಸನ್ನು ಸುಲಭವಾಗಿ ತಟ್ಟಿ ಒಳಿತನ್ನು ಜಾಗೃತಗೊಳಿಸುವ ವಚನಗಳು ನಮ್ಮ ಮನೆ ಶಾಲೆ ಸಾರ್ವಜನಿಕವಾಗಿ ಪ್ರಚಾರ ಪ್ರಸಾರದ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧೆ ಯೋಚಿಸುವ ಮೂಲಕ ಮಕ್ಕಳಲ್ಲಿ ವಚನ ಸಂವೇದನೆಗಳನ್ನು ನೀಡುವ ಕೆಲಸವಾಗಿದೆ ಎಂದರು.

ಶಿಗ್ಗಾಂವಿ ಚನ್ನಪ್ಪ ಕುನ್ನೂರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಮುಖ್ಯ ಅತಿಥಿಯಾಗಿ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಸಂಸ್ಕಾರಗಳ ಕೊರತೆ ಕಾಣುತ್ತಿದೆ. ಅಂದು ಕೂಡು ಕುಟುಂಬಗಳಲ್ಲಿ ಮಕ್ಕಳಿಗೆ ಒಳ್ಳೆಯ ಆಚಾರ ವಿಚಾರಗಳನ್ನು ಬೋಧನೆ ಮಾಡುವುದು ಸಹಜವಾಗಿ ಕಾಣುತ್ತಿತ್ತು. ಇಂದಿನ ತಂತ್ರಜ್ಞಾನ ಯುಗದಲ್ಲಿ ಯಂತ್ರದಂತೆ ಬದುಕು ರೂಪಿಸಿಕೊಳ್ಳುತ್ತಿರುವ ಮನುಷ್ಯನಿಗೆ ಸಂಸ್ಕಾರ ಪ್ರಮುಖವಾಗುತ್ತಿಲ್ಲ. ಇದರ ಪರಿಣಾಮ ಮಾತ್ರ ಸಮಾಜದ ಮೇಲೆ ವ್ಯತಿರಕ್ತವಾಗಲಿದೆ. ಈಗಲಾದರೂ ಅತ್ಯಂತ ಸರಳವಾದ ವಚನಗಳು ನಮ್ಮ ಬದುಕಿನ ಮಾರ್ಗದರ್ಶನವಾಗಲಿ ಎಂದರು.

ಮಾಜಿ ಜಿಪಂ ಸದಸ್ಯ ಪದ್ಮನಾಭ ಕುಂದಾಪೂರ, ಅಶೋಕ ದಾಸರ್, ದೀಪು ನೆಲವಿಗಿ, ಪ್ರೊ.ಶಿವಪ್ರಕಾಶ ಬಳಿಗಾರ, ಪ್ರೊ.ಆನಂದ ಇಂದೂರ, ಪ್ರೊ.ಸಿದ್ದೇಶ ಹುಣಸಿಕಟ್ಟಿ, ಪ್ರೊ.ಸುಮಂಗಲಾ ಅತ್ತೀಗೇರಿ, ಜಿ.ಎಂ.ಅರಗೋಳ, ಗಣ್ಯರಾದ ಈರಣ್ಣ ಚಿಕ್ಕಣಗಿ, ಸುರೇಶ ಮುದಕಣ್ಣನವರ, ಜಿ.ಸಿ. ಪಾಟೀಲ, ದೀಪಾ ನೆಲವಿಗಿ, ಶವಬಸಪ್ಪ ಹೊಳಲದ, ಮಲ್ಲಣ್ಣ ಹುಕ್ಕೇರಿ, ಬಸಯ್ಯ ಹಿರೇಮಠ, ಮುಖ್ಯೋಪಾಧ್ಯಾಯ ಹಮಗಿ, ಸಿದ್ದನಗೌಡ ಹಂಚಿನಮನಿ, ಶಿಲ್ಪಾ ಹಂಚಿನಮನಿ, ಉದ್ಯಮಿಗಳಾದ ಮೋಹನ ಪುರೋಹಿತ, ಕಾಂತಿಲಾಲ ಪುರೋಹಿತ, ಗಣಪತಿ ಪುರೋಹಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಮೃತ ಓಣಿಕೇರಿ ಪ್ರಾರ್ಥನೆ ಹಾಡಿದರು.

ಬಹುಮಾನ: ಜಿಲ್ಲಾ ಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ಹಾನಗಲ್ಲ ತಾಲೂಕು ಶಿವಪುರದ ಅಮೃತಾ ಓಣೀಕೇರಿ ಪ್ರಥಮ, ರಾಣಿಬೆನ್ನೂರಿನ ನಮ್ರತಾ ಗುಡದಳ್ಳಿ ದ್ವಿತೀಯ, ಅಕ್ಕಿಆಲೂರಿನ ದರ್ಶಿನಿ ಯಳ್ಳೂರ ತೃತೀಯ, ಹುಣಸಿಕಟ್ಟಿಯ ಹರ್ಷಿತಾ ಪ್ಯಾಟಿ ಹಾಗೂ ಅಕ್ಕಿಆಲೂರಿನ ಸ್ಫೂರ್ತಿ ಕರಿನಾಗಣ್ಣನವರ ಸಮಾಧಾನಕರ ಬಹುಮಾನ ಪಡೆದರು. ಹಾವೇರಿ ಜಿಲ್ಲೆಯಾದ್ಯಂತ ೨೬ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು.