ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಜಮೀನಿಗೆ ತೆರಳುವ ದಾರಿ ವಿಚಾರವಾಗಿನ ವಿವಾದದಲ್ಲಿ ಜಾತಿನಿಂದನೆ (ಅಟ್ರಾಸಿಟಿ) ಪ್ರಕರಣ ದಾಖಲಿಸಿ, ಜೈಲಿಗಟ್ಟುವುದಾಗಿ ದಲಿತ ಸಮುದಾಯದ ಕೆಲವರು ಬೆದರಿಕೆ ಹಾಕಿದ್ದರಿಂದ, ಮನನೊಂದಿದ್ದನೆನ್ನಲಾದ 19 ವರ್ಷದ ಯುವಕನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು, ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ವರದಿಯಾಗಿದೆ. ಇತ್ತ, ಮಗನ ಸಾವು ಕಣ್ಣಾರೆ ಕಂಡು ಆಘಾತಕ್ಕೊಳಗಾದ ತಂದೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಂದೆ-ಮಗನ ಇಂತಹ ದುರಂತದ ಸಾವು ಇಡೀ ಕುಟುಂಸ್ಥರ ಆಕ್ರೋಶ- ಆಕ್ರಂದನಕ್ಕೆ ಸಾಕ್ಷಿಯಾಗಿದೆ.ಜಮೀನಿಗೆ ತೆರಳುವ ದಾರಿ ವಿಚಾರವಾಗಿ, ದಲಿತ ಸಮುದಾಯದ ನಿಂಗಪ್ಪ ಕುಟುಂಬ ಮತ್ತು ಸೈಯದ್ ಅಲಿ ಮುಲ್ಲಾ ಅವರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಗ್ರಾಮದ ಹಿರಿಯರ ಸಮ್ಮುಖದಲ್ಲಿ ಸಂಧಾನ ಪಂಚಾಯಿತಿ ನಡೆಸಿ, ಸಮಾಧಾನಪಡಿಸಿ ಇಬ್ಬರಿಗೂ ಬುದ್ಧಿಮಾತು ಹೇಳಿದ್ದರು.
ಮಂಗಳವಾರ ಮೆಹಬೂಬ್ ತಮ್ಮ ಹೊಲಕ್ಕೆ ಟ್ರ್ಯಾಕ್ಟರ್ ತೆಗೆದುಕೊಂಡು ಕೆಲಸಕ್ಕೆ ತೆರಳುವ ಸಮಯದಲ್ಲಿ ದಲಿತ ಸಮುದಾಯದ ನಿಂಗಪ್ಪನ ಸಂಬಂಧಿ ಈಶಪ್ಪ ನಾಯ್ಕಲ್ ಎಂಬಾತ ಈ ಯುವಕನ ಜೊತೆ ಜಗಳ ತೆಗೆದು ಟ್ರ್ಯಾಕ್ಟರ್ ಮತ್ತು ಯುವಕನನ್ನು ಪೊಲೀಸ್ ಠಾಣೆಗೆ ಕರೆತಂದು, ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಕೇಸ್ ಹಾಕುವುದಾಗಿ ಹೇಳಿದ್ದ. ಆದರೆ, ವಡಗೇರಾ ಹೊರಭಾಗದ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೆಹಬೂಬ್ ಅಲಿ ಮುಲ್ಲಾ ( 19)ನ ಶವ ಪತ್ತೆಯಾಗಿತ್ತು. ಅಟ್ರಾಸಿಟಿ ಕೇಸ್‌ಗೆ ಬೆದರಿ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.ಹದಿಹರೆಯದ ಮಗನ ಸಾವು ಕಣ್ಣಾರೆ ಕಂಡ ತಂದೆ ಸೈಯದ್ ಅಲಿ ಮುಲ್ಲಾ (45) ಆಘಾತಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಕಲಬುರಗಿ ಜಯದೇವ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಅವರು ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಂದೆ-ಮಗನನ್ನು ಕಳೆದುಕೊಂಡ ಇಡೀ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.
ಆತ್ಮಹತ್ಯೆ ಅಲ್ಲ, ಕೊಲೆ : ಕುಟುಂಬಸ್ಥರಿಂದ ಆರೋಪತಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆತನನ್ನು ನೇಣು ಬಿಗಿದು ಕೊಲೆ ಮಾಡಲಾಗಿದೆ ಎಂದು ಆರೋಪಿಸಿರುವ ಕುಟುಂಬಸ್ಥರು, ವಡಗೇರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಮೃತರ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಪೊಲೀಸರು ಪ್ರಮುಖ ಆರೋಪಿ ಈಶಪ್ಪ ನಾಯ್ಕಲ್ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.