ಸಾರಾಂಶ
ಕನಕಗಿರಿ:
ತಾಲೂಕಿನ ಕರಡೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡಕಿ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗದ ಭಯ ಶುರುವಾಗಿದ್ದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶಗೊಂಡಿದ್ದಾರೆ.ಕಳೆದ ಎಂಟತ್ತು ತಿಂಗಳ ಹಿಂದೆ ಗ್ರಾಮದಲ್ಲಿ ಜಲ ಜೀವನ್ ಮಷಿನ್ ಯೋಜನೆಯಡಿ ಪೈಪ್‌ಲೈನ್ ಅಳವಡಿಸಲು ತೆಗೆದಿದ್ದ ಕಾಮಗಾರಿಯಲ್ಲಿ ಚರಂಡಿ ನೀರು ಹರಿಯುತ್ತಿದೆ. ಹೀಗೆ ಹಲವು ತಿಂಗಳಿಂದ ನೀರು ಹರಿಯುತ್ತಿದ್ದು ಗ್ರಾಮದ ತುಂಬೆಲ್ಲ ಪಾಚಿಗಟ್ಟಿದೆ. ಇದರಿಂದ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿದ್ದು ಹಲವು ಓಣಿಗಳಲ್ಲಿ ದುರ್ವಾಸನೆ ಬೀರುತ್ತಿದೆ. ಇದರಿಂದ ಗ್ರಾಮಸ್ಥರು ಸಾಂಕ್ರಾಮಿಕ ರೋಗ ಹರಡುವ ಆತಂಕದಲ್ಲಿದ್ದಾರೆ.
ಗ್ರಾಮಸ್ಥರು ದುರ್ವಾಸನೆಯಿಂದ ಬೇಸತ್ತಿದ್ದು ಮೂಗು ಮುಚ್ಚಿಕೊಂಡು ಓಡಾಡುತ್ತಿರುವುದು ಸಾಮಾನ್ಯವಾಗಿದೆ. ಗ್ರಾಮದಲ್ಲಿ ಎಸ್‌ಸಿ ಹಾಗೂ ಎಸ್‌ಟಿ ಕಾಲನಿಗಳಲ್ಲಂತೂ ಹೇಳದ ಸ್ಥಿತಿಯಾಗಿದೆ. ಗ್ರಾಮಸ್ಥರ ಮನವಿಗೆ ಪಿಡಿಒ, ಗ್ರಾಪಂ ಸದಸ್ಯರು ಸ್ಪಂದಿಸುತ್ತಿಲ್ಲವಾದ್ದರಿಂದ ಕೊಳಚೆ ನೀರಿನ ಸ್ವಚ್ಛತೆ ವಿಳಂಬವಾಗುತ್ತಿದೆ.ಕೊಳಚೆ ನೀರು ಮತ್ತು ಗ್ರಾಮದ ಸ್ವಚ್ಛತೆಗೆ ತಾಪಂ ಇಒ ರಾಜಶೇಖರ ಅವರು ಪಿಡಿಒ ನಾಗಲಿಂಗಪ್ಪಗೆ ನೋಟಿಸ್ ನೀಡಿದರೂ ಕ್ರಮಕೈಗೊಂಡಿಲ್ಲ. ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವಾದ್ದರಿಂದ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಇತ್ತ ಅರೆಬರೆ ಕಾಮಗಾರಿ ಮಾಡಿರುವ ಗುತ್ತಿಗೆದಾರರು ಬಿಲ್ ಎತ್ತುವಳಿ ಮಾಡಿಕೊಂಡಿದ್ದು, ವಾಪಸ್ ಗ್ರಾಮದ ಕಡೆ ಸುಳಿದಿಲ್ಲ. ರೋಗಗಳ ಗೂಡಾಗಿರುವ ಗ್ರಾಮದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಲಕ್ಷ್ಮೀಕಾಂತ ಬೊಮ್ಮನಾಳ ಆಗ್ರಹಿಸಿದ್ದಾರೆ.ವಡಕಿ ಗ್ರಾಮದಲ್ಲಿ ಕೊಳಚೆ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲು ಪಿಡಿಒಗೆ ನೋಟಿಸ್ ನೀಡಲಾಗಿದೆ. ಗ್ರಾಮಸ್ಥರ ತೊಂದರೆ ನಿವಾರಿಸಲು ಕೂಡಲೇ ಕ್ರಮಕೈಗೊಳ್ಳುತ್ತೇನೆ ಎಂದು ತಾಲೂಕು ಪಂಚಾಯಿತಿ ಇಒ ರಾಜಶೇಖರ ಹೇಳಿದರು.