ಸಾರಾಂಶ
ಸಚಿವರು ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಸ್ಫೋಟ್, ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವ ಬಗ್ಗೆ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರ ಮೇಲೆ ಆರೋಪ ಮಾಡಿದ್ದಾರೆ.
ಭಟ್ಕಳ:
ಚುನಾವಣೆ ಹತ್ತಿರ ಬಂದಾಗ ಬಿಜೆಪಿಯವರು ಬಾಂಬ್ ಸ್ಫೋಟಿಸಿ ಬೇರೆಯವರ ಮೇಲೆ ಹಾಕುತ್ತಾರೆ ಎಂಬ ಸಚಿವ ಮಂಕಾಳ ವೈದ್ಯ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಬಿಜೆಪಿ ಲೋಕಸಭಾ ಚುನಾವಣೆ ಉಸ್ತುವಾರಿ ಗೋವಿಂದ ನಾಯ್ಕ, ಸಚಿವರು ತಮ್ಮ ಘನತೆಗೆ ತಕ್ಕಂತೆ ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಮಾತನಾಡಲಿ ಎಂದು ಹೇಳಿದ್ದಾರೆ.ಪಟ್ಟಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಸ್ಫೋಟ್, ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವ ಬಗ್ಗೆ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರ ಮೇಲೆ ಆರೋಪ ಮಾಡಿದ್ದಾರೆ. ಸಚಿವರಿಗೆ ಭಟ್ಕಳದ ಬಗ್ಗೆ ಹೆಚ್ಚಿನ ಅರಿವು ಇದ್ದಂತಿಲ್ಲ. ಚುನಾವಣೆಯಲ್ಲಿ 1.3 ಲಕ್ಷ ಮತಗಳ ಪೈಕಿ 80 ಸಾವಿರ ಹಿಂದೂಗಳ ಮತ ಪಡೆದು ಗೆದ್ದಿದ್ದಾರೆ ಎನ್ನುವುದು ಗೊತ್ತಿರಲಿ ಎಂದು ತಿರುಗೇಟು ನೀಡಿದರು.ಸಚಿವರು ತಂಝೀಂ ನಿಯೋಗದೊಂದಿಗೆ ಗೋಹತ್ಯೆ ಕಾಯ್ದೆ ಮತ್ತು ಮತಾಂತರ ಕಾಯ್ದೆ ನಿಷೇಧ ಮಾಡಲು ಮುಖ್ಯಮಂತ್ರಿಗೆ ಮನವಿ ನೀಡಲು ಸಾಥ್ ನೀಡಿದ್ದಾರೆ. ಬಿಜೆಪಿ, ಹಿಂದೂ ಸಮಾಜದ ವಿರುದ್ಧ ಪದೇ ಪದೇ ಹೇಳಿಕೆ ಕೊಡುತ್ತಿದ್ದು, ಇದು ನಿಲ್ಲಬೇಕು. ಇಲ್ಲದಿದ್ದರೆ ಯಾವ ರೀತಿಯಲ್ಲಿ ಹೋರಾಟ ಮಾಡಬೇಕು ಎಂದು ನಮಗೆ ಗೊತ್ತಿದೆ ಎಂದು ಎಚ್ಚರಿಕೆ ನೀಡಿದರು.ಬಾಂಬ್ ಸ್ಫೋಟದಲ್ಲಿ ಬಿಜೆಪಿಯವರ ಕೈವಾಡವಿದೆ ಎಂಬುದನ್ನು ಸಚಿವರು ಸಾಬೀತುಪಡಿಸಬೇಕು. ಇಲ್ಲದಿದ್ದರೆ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸವಾಲು ಹಾಕಿದರು.ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸುಬ್ರಾಯ ದೇವಡಿಗ ಮಾತನಾಡಿ, ಸಚಿವರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಬಿಜೆಪಿ ಎಂದಿಗೂ ಭಯೋತ್ಪಾದಕರ ಪರ ನಿಲ್ಲುವುದಿಲ್ಲ. ಸಚಿವರು ಆರೋಪಿಸಿದಂತೆ ಬಿಜೆಪಿಯವರು ಈ ಕೃತ್ಯದಲ್ಲಿ ಭಾಗಿಯಾಗಿದ್ದರೆ ಸರ್ಕಾರ ಕಠಿಣ ಕ್ರಮಕೈಗೊಳ್ಳಲಿ. ಅಲ್ಪಸಂಖ್ಯಾತರನ್ನು ಓಲೈಸಲು ಸಚಿವರು ಇಂತಹ ಹೇಳಿಕೆ ನೀಡುತ್ತಿದ್ದು, ಇದು ತೀರಾ ಖಂಡನೀಯವಾಗಿದೆ ಎಂದರು.ಹಿಂದಿನ ಬಿಜೆಪಿ ಸರ್ಕಾರ ಗೋಹತ್ಯೆ ಮತ್ತು ಮತಾಂತರ ಕಾಯ್ದೆ ನಿಷೇಧ ಮಾಡಿತ್ತು. ಆದರೆ ಮತಾಂತರ ಕಾಯ್ದೆ ನಿಷೇಧದಿಂದ ತಂಝೀಂಗೆ ಏನು ತೊಂದರೆ ಆಗಿದೆ ಎನ್ನುವುದು ನಮ್ಮ ಪ್ರಶ್ನೆ ಎಂದ ಅವರು, ಸಚಿವರು ಬಿಜೆಪಿಯವರು ಬಡವರಿಗೆ ಏನು ಮಾಡಿದ್ದಾರೆ ಎಂದು ಕೇಳುತ್ತಿದ್ದಾರೆ. ನಾವು ಏನು ಮಾಡಿದ್ದೇವೆ. ಸರ್ಕಾರದ ಯೋಜನೆಯಿಂದ ಎಷ್ಟು ಜನರಿಗೆ ಪ್ರಯೋಜನವಾಗಿದೆ ಎನ್ನುವುದು ಜನತೆಗೆ ಗೊತ್ತಿದೆ ಎಂದು ಹೇಳಿದರು.ಬಿಜೆಪಿ ಮಂಡಳಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಮಾತನಾಡಿ, ಒಬ್ಬ ಸಚಿವ ಸ್ಥಾನದಲ್ಲಿರುವವರು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ. ಇನ್ನಾದರೂ ಸಚಿವರು ಯೋಚಿಸಿ, ಚಿಂತಿಸಿ ಹೇಳಿಕೆ ಕೊಡಲಿ ಎಂದರು.ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಿವಾನಿ ಶಾಂತರಾಮ ಮಾತನಾಡಿ, ಸಚಿವರು ತಮ್ಮ ಹಾಸ್ಯಾಸ್ಪದ ಹೇಳಿಕೆಯಿಂದಲೇ ಪ್ರಸಿದ್ಧಿ ಪಡೆದಿದ್ದಾರೆ. ಇವರ ಇಲ್ಲಸಲ್ಲದ ಹೇಳಿಕೆಯಿಂದ ಬಿಜೆಪಿ ಧಮನಿಸಲು ಆಗುವುದಿಲ್ಲ. ಇನ್ನಾದರೂ ತಮ್ಮ ಸ್ಥಾನಕ್ಕೆ ತಕ್ಕಂತೆ ತೂಕದ ಮಾತುಗಳನ್ನಾಡಲಿ ಎಂದು ಸಲಹೆ ನೀಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಭಾಸ್ಕರ ದೈಮನೆ, ಶ್ರೀಕಾಂತ ನಾಯ್ಕ, ಮೋಹನ ನಾಯ್ಕ, ಚಂದ್ರುಗೊಂಡ ಸುದ್ದಿಗೋಷ್ಠಿಯಲ್ಲಿ ಇದ್ದರು.ಕೇಸು ಬೀಳುವುದು ಹೊಸದಲ್ಲ..
ಭಟ್ಕಳದ ತೆಂಗಿನಗುಂಡಿಯಲ್ಲಿ ಭಗವಾಧ್ವಜ ಮತ್ತು ಸಾವರ್ಕರ್ ಫಲಕ ಹಾಕಿದ ಬಗ್ಗೆ ಪ್ರಕರಣ ಸಂಸದ ಅನಂತಕುಮಾರ ಹೆಗಡೆ ಸೇರಿದಂತೆ 21 ಜನರ ವಿರುದ್ಧ ದಾಖಲಾದ ಪ್ರಕರಣದ ಬಗ್ಗೆ ಮಾತನಾಡಿದ ಗೋವಿಂದ ನಾಯ್ಕ, ಬಿಜೆಪಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಕೇಸ್ ಹೊಸದೇನಲ್ಲ. ಇದೊಂದು ನಮಗೆ ಗೌರವವಾಗಿದೆ. ಈ ಕೇಸಿನಿಂದ ನಾವು ವಿಚಲಿತರಾಗುವ ಪ್ರಶ್ನೇಯೇ ಇಲ್ಲ. ನಮ್ಮ ಮೇಲೆ ಹಿಂದೂ ಸಮಾಜ ಮತ್ತು ಉತ್ತಮ ಕೆಲಸಕ್ಕೋಸ್ಕರ ಕೇಸ್ ಬಿದ್ದಿದೆ. ಇದಕ್ಕೆ ನಾವು ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.