ವೈದ್ಯನಾಥಪುರ ಡೇರಿ ಚುನಾವಣೆ: ಘರ್ಷಣೆ, ಲಘು ಲಾಠಿ ಪ್ರಹಾರ

| Published : Dec 23 2024, 01:01 AM IST

ಸಾರಾಂಶ

ಗ್ರಾಮದ ಸಂಘದ ನಿರ್ದೇಶಕರ ಸ್ಥಾನದ ಚುನಾವಣೆ ಮುನ್ನ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ 275 ಸದಸ್ಯರಲ್ಲಿ ಕೇವಲ 76 ಸದಸ್ಯರಿಗೆ ಮಾತ್ರ ಮತದಾನದ ಹಕ್ಕು ನೀಡಿ ಉಳಿದವರನ್ನು ಮತದಾನದಿಂದ ಕೈ ಬಿಡಲಾಗಿತ್ತು. ಇದರಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತರ ನಡುವೆ ವಿವಾದ ಉಂಟಾದ ಕಾರಣ ಕಳೆದ ಸೆ.19 ರಂದು ನಿಗದಿಯಾಗಿದ್ದ ಸರ್ವ ಸದಸ್ಯರ ಸಭೆ ರದ್ದುಗೊಳಿಸಲಾಗಿತ್ತು.

ಕನ್ನಡಪ್ರಭ ವಾತೆ ಮದ್ದೂರು

ತಾಲೂಕಿನ ವೈದ್ಯನಾಥಪುರದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಹೈಕೋರ್ಟ್ ಆದೇಶದಂತೆ ಚುನಾವಣೆ ನಡೆಸುವ ವಿಚಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲಿತ ಎರಡು ಗುಂಪುಗಳ ನಡುವೆ ಮತದಾನ ಕೇಂದ್ರದ ಬಳಿ ಘರ್ಷಣೆ ನಡೆದಿದ್ದು, ಅದನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ ಘಟನೆ ಭಾನುವಾರ ಜರುಗಿದೆ.

ಇದೇ ವೇಳೆ ಒಂದು ಗುಂಪು ಪೊಲೀಸರ ಎದುರೇ ಚುನಾವಣಾ ಅಧಿಕಾರಿಯ ಮೇಲೆ ಹಲ್ಲೆಗೆ ವಿಫಲ ಯತ್ನ ನಡೆಸಿ ಮತ ಪೆಟ್ಟಿಗೆಯನ್ನು ಅಪಹರಿಸಲು ಮುಂದಾದ ಪ್ರಸಂಗ ಜರುಗಿತು. ಲಾಠಿ ಪ್ರಹಾರದಲ್ಲಿ ಪೊಲೀಸರು ಸೇರಿದಂತೆ ಹಲವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಗ್ರಾಮದ ಸಂಘದ ನಿರ್ದೇಶಕರ ಸ್ಥಾನದ ಚುನಾವಣೆ ಮುನ್ನ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ 275 ಸದಸ್ಯರಲ್ಲಿ ಕೇವಲ 76 ಸದಸ್ಯರಿಗೆ ಮಾತ್ರ ಮತದಾನದ ಹಕ್ಕು ನೀಡಿ ಉಳಿದವರನ್ನು ಮತದಾನದಿಂದ ಕೈ ಬಿಡಲಾಗಿತ್ತು. ಇದರಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತರ ನಡುವೆ ವಿವಾದ ಉಂಟಾದ ಕಾರಣ ಕಳೆದ ಸೆ.19 ರಂದು ನಿಗದಿಯಾಗಿದ್ದ ಸರ್ವ ಸದಸ್ಯರ ಸಭೆ ರದ್ದುಗೊಳಿಸಲಾಗಿತ್ತು.

ವಿವಾದದ ನಡುವೆಯೂ ಸಹ ಕಳೆದ ಆಗಸ್ಟ್ 25ರಂದು ಡೇರಿ ಸಂಘದ ನಿರ್ದೇಶಕರ ಚುನಾವಣೆ ನಡೆಸುವಂತೆ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಆದೇಶ ಹೊರಡಿಸಿದ್ದರು. ಸಂಘದ 76 ಮಂದಿಗೆ ಮಾತ್ರ ಮತದಾನದ ಹಕ್ಕು ನೀಡಿ ಉಳಿದವರನ್ನು ಕೈಬಿಟ್ಟ ಬಗ್ಗೆ ರೊಚ್ಚಿಗೆದ್ದ ಒಂದು ಗುಂಪು ಕಳೆದ ಆ.19ರಂದು ರಾತ್ರಿ ನಿರ್ದೇಶಕರ ಸ್ಥಾನದ ಚುನಾವಣೆಯ ನಾಮಪತ್ರ ದಾಖಲೆ ಸಮೇತ ಅಪಹರಿಸಲಾಗಿತ್ತು.

ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ನಿರ್ದೇಶಕರ ಚುನಾವಣೆಯನ್ನು ಮುಂದೂಡಲಾಗಿತ್ತು.

ನಿರ್ದೇಶಕರ ಚುನಾವಣೆ ಮುಂದೂಡಿರುವ ಕ್ರಮ ಪ್ರಶ್ನಿಸಿ ಜೆಡಿಎಸ್ ಬೆಂಬಲಿತ ವಿ.ಆರ್.ಸಿದ್ದಪ್ಪ ಮತದಾನದಿಂದ ವಂಚಿತರಾಗಿರುವ ಸುಮಾರು 200 ಸದಸ್ಯರಿಗೂ ಮತದಾನದ ಹಕ್ಕು ನೀಡಿ ಚುನಾವಣೆ ನಡೆಸುವಂತೆ ಕೋರಿ ಹೈಕೋರ್ಟ್ ನಲ್ಲಿ ತಮ್ಮ ಪರ ವಕೀಲರ ಮೂಲಕ ರಿಟ್ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಡ್‌ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಸೂರಜ್ ಗೋವಿಂದ ಅವರು ನವಂಬರ್ 5ರಂದು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಚುನಾವಣೆ ನಡೆಸುವಂತೆ ಸಹಕಾರ ಸಂಘಗಳ ಉಪನಿಬಂಧಕ ರಾಧಾ ರೇಖಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದರು.

ಅದರಂತೆ ಡಿ.22ರಂದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಘದ ಚುನಾವಣೆ ನಡೆಯುವ ವೇಳೆ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಘರ್ಷಣೆ ನಡೆಯುವ ಸಾಧ್ಯತೆ ಇರುವುದರಿಂದ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದ ನಂತರ ಪೊಲೀಸರು ಬಂದೋಬಸ್ತ್‌ನಲ್ಲಿ ಚುನಾವಣೆ ಮುಂದುವರೆಯಿತು.

ಡೇರಿ ಚುನಾವಣೆ ಅಪ್ಪು ಪಿ.ಗೌಡ ತಂಡಕ್ಕೆ ಜಯಭೇರಿ:

ಮದ್ದೂರು: ವೈದ್ಯನಾಥಪುರದ ಡೇರಿ ಸಂಘದ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಪ್ಪು ಪಿ.ಗೌಡ ತಂಡಕ್ಕೆ ಜಯಭೇರಿ ಬಾರಿಸಿದೆ.

ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ನಡೆದ ಕುತೂಹಲಕಾರಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಪ್ಪು ಪಿ.ಗೌಡ, ವಿ.ಎನ್.ಕೃಷ್ಣ, ವಿ.ಕೆ.ನಾಣಯ್ಯ, ವಿ.ಎ.ನಾರಾಯಣ, ಎಸ್.ಶಂಕರ್, ವಿ.ಆರ್.ಸಿದ್ದಪ್ಪ ಹಾಗೂ ಸುರೇಶ್ ಚುನಾಯಿತರಾಗಿದ್ದಾರೆ. ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ರತ್ನಮ್ಮ ವಿಶಾಲಾಕ್ಷಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ ಏಳು ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಪರಾಜಿತರಾಗಿದ್ದಾರೆ. ಚುನಾವಣೆ ಅಧಿಕಾರಿಯಾಗಿ ಸಹಕಾರ ಸಂಘಗಳ ತ್ಯಾಗರಾಜ ಸಹಾಯಕರಾಗಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ನಿಶ್ಚಿತ ಕಾರ್ಯ ನಿರ್ವಹಿಸಿದ್ದರು.