ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಇತಿಹಾಸ ಪ್ರಸಿದ್ಧವಾದ ಸಂಪಿಗೆಯ ಶ್ರೀ ಶ್ರೀನಿವಾಸಸ್ವಾಮಿ ದೇವಾಲಯದಲ್ಲಿ ಜ ೧೦ ರ ಶುಕ್ರವಾರದಂದು ಅದ್ಧೂರಿಯಾಗಿ ವೈಕುಂಠ ಏಕಾದಶಿ ಮಹೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ ಎಂದು ಆಚರಣಾ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.ಜ ೧೦ ರ ಬೆಳಗ್ಗೆ ೫ ಗಂಟೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗುವುದು. ಬೆಳಗ್ಗೆ ಅಭಿಷೇಕ, ಗೋಪೂಜೆ, ವೈಕುಂಠದ್ವಾರ ಪ್ರವೇಶ ನಡೆಯಲಿದೆ. ಮಧ್ಯಾಹ್ನ ೨ ಗಂಟೆಗೆ ಸಪ್ತದ್ವಾರಗಳ ಮೂಲಕ ದಿವ್ಯ ದರ್ಶನ, ಬೆಳಗ್ಗೆಯಿಂದ ರಾತ್ರಿಯವರೆಗೂ ಜಿಲ್ಲೆಯ ಹತ್ತಾರು ಭಜನಾ ಮಂಡಳಿಗಳ ವತಿಯಿಂದ ಭಜನಾ ಸಂಕೀರ್ತನಾ ಕಾರ್ಯಕ್ರಮ ನಡೆಯಲಿದೆ. ಸಂಜೆ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನವಿರುತ್ತದೆ. ನಿಟ್ಟೂರು ಮತ್ತು ತುರುವೇಕೆರೆ ಕಡೆಯಿಂದ ಕೆ ಎಸ್ ಆರ್ ಟಿ ಸಿ ಬಸ್ ನ ಬಸ್ ಸೌಲಭ್ಯ ಇರಲಿದೆ. ಈ ಸಂದರ್ಭದಲ್ಲಿ ಶ್ರೀ ಶ್ರೀನಿವಾಸಸ್ವಾಮಿ ಮತ್ತು ಅಮ್ಮನವರಿಗೆ ನೂತನ ವಜ್ರಾಂಗಿ ಅಲಂಕಾರವನ್ನು ನೆರವೇರಿಸಲಾಗುವುದು. ಜ .10 ರ ವೈಕುಂಠ ಏಕಾದಶಿಯಂದು ಸುಮಾರು ಐವತ್ತು ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಎಲ್ಲ ಭಕ್ತಾದಿಗಳಿಗೂ ಲಘು ಉಪಾಹಾರ ಮತ್ತು ಪ್ರಸಾದವಾಗಿ ಲಾಡು ವಿತರಿಸಲಾಗುತ್ತದೆ. ಸೂಕ್ತ ಪೊಲೀಸ್ ಬಂದೋಬಸ್ತ್ ಇರಲಿದೆ. ತಾಲೂಕಿನಲ್ಲಿ ಪೌರಾಣಿಕ ನಾಟಕಗಳನ್ನು ಕಲಿಸುವ ಸುಮಾರು ಐವತ್ತಕ್ಕೂ ಹೆಚ್ಚು ಹಾರ್ಮೋನಿಯಂ ಕಲಾವಿದರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಗುವುದು. ದಾಸಪ್ಪ ಮತ್ತು ಸಂಗಡಿಗರಿಂದ ಸಾಮೂಹಿಕ ಶಂಖ ಉದ್ಘೋಷ ನಡೆಯಲಿದೆ. ಸಂಪಿಗೆ ಮತ್ತು ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರಿಂದ ಹೆಜ್ಜೆ ಈಡುಗಾಯಿ ಸೇವೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ದೇವಾಲಯ ವ್ಯವಸ್ಥಾಪನಾ ಸಮಿತಿಯ ಪದಾದಿಕಾರಿಗಳಾದ ಹರೀಶ್, ಬ್ಯಾಂಕ್ ಶ್ರೀನಿವಾಸ್, ಯೋಗೀಶ್, ಕುಮಾರ್, ಕೃಷ್ಣಮೂರ್ತಿ, ನಂಜುಂಡಯ್ಯ, ಜಯ್ಯಣ್ಣ, ವಿಜಯಕುಮಾರ್ ಇದ್ದರು.