ಸಾರಾಂಶ
ಶಿವಮೊಗ್ಗ: ವೈಕುಂಠ ಏಕಾದಶಿ ಪ್ರಯುಕ್ತ ಶುಕ್ರವಾರ ಜಿಲ್ಲೆಯಾದ್ಯಂತ ವೆಂಕಟರಮಣ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆ ನೆರವೇರಿತು.
ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ. ಸಾಕ್ಷತ್ ಶ್ರೀವಿಷ್ಣುವೇ ಧರೆಗಿಳಿದು ಬಂದು ಭಕ್ತರನ್ನು ಆಶೀರ್ವಾದಿಸುತ್ತಾನೆ ಎಂಬ ನಂಬಿಕೆ ಇದ್ದು, ಜನರು ಭಕ್ತಿಯಿಂದ ವೈಕುಂಠ ಏಕಾದಶಿ ಆಚರಿಸಿದರು. ಭಕ್ತರು ಸರತಿ ಸಾಲಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.ಶಿವಮೊಗ್ಗದ ವೆಂಕಟೇಶ್ವರ ನಗರದ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಜಯನಗರದ ಶ್ರೀರಾಮ ಮಂದಿರ, ನವುಲೆಯ ವೆಂಕಟರಮಣ ದೇವಾಲಯ, ಕೋಟೆ ಶ್ರೀ ರಾಮಾಂಜನೇಯ ದೇವಾಲಯ, ಜಿ.ಎಸ್.ಕೆ.ಎಂ. ರಸ್ತೆಯ ವೆಂಕಟರಮಣ ದೇವಾಲಯ, ಅಶ್ವತ್ಥನಗರ, ದೇವಗಿರಿ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಸೇರಿ ಹಲವು ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಪೂಜೆ ಸಮರ್ಪಿಸಿದರು.ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನು ವೈಕುಂಠ ಏಕಾದಶಿ ಎನ್ನುತ್ತಾರೆ. ಶ್ರದ್ಧಾಭಕ್ತಿಯಿಂದ ಭಕ್ತರು ವಿಷ್ಣುವನ್ನು ಪೂಜಿಸುವ ಮಹತ್ವದ ದಿನವಿದು. ಈ ದಿನ ಏಕಾದಶಿ ವ್ರತ ಕೈಗೊಂಡು ದೇವರ ದರ್ಶನ ಪಡೆದಲ್ಲಿ ಮೋಕ್ಷ ಪ್ರಾಪ್ತಿ ಎಂಬ ಪ್ರತೀತಿ ಇದೆ.ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ಎಲ್ಲ ದೇವಾಲಯಗಳಲ್ಲೂ ಹಬ್ಬದ ವಾತಾವರಣ ಕಂಡು ಬಂದಿತು. ಬೆಳಗಿನ ಜಾವದಿಂದಲೇ ದೇವಾಲಯಗಳಿಗೆ ಭಕ್ತರು ನೂರಾರು ಸಂಖ್ಯೆಯಲ್ಲಿ ಬಂದು ವಿಶೇಷ ಪೂಜೆ ಸಲ್ಲಿಸಿದರು. ದೇವರ ದರ್ಶನದ ನಂತರ ಎಲ್ಲರಿಗೂ ಪ್ರಸಾದ ವಿತರಣೆ ಮಾಡಲಾಯಿತು.ವೈಕುಂಠ ಏಕಾದಶಿ ದಿನ ಭಕ್ತರ ಕೋರಿಕೆ ಈಡೇರಿಸಲು ಸಾಕ್ಷಾತ್ ವಿಷ್ಣುವೇ ಲಕ್ಷ್ಮೀ ಸಹಿತನಾಗಿ ಭೂಲೋಕಕ್ಕೆ ಬರುತ್ತಾನೆ ಎಂಬ ನಂಬಿಕೆ ಭಕ್ತ ಸಮೂಹದ್ದು, ಹೀಗಾಗಿ ದೇವರ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ಹಲವು ದೇವಾಲಯಗಳಲ್ಲಿ ವೈಕುಂಠ ದ್ವಾರವನ್ನು ಸಿದ್ಧಪಡಿಸಲಾಗಿತ್ತು. ನಗರದ ಹಲವಾರು ಭಜನಾ ಮಂಡಳಿಯಿಂದ ಎಲ್ಲಾ ದೇವಾಲಯಗಳಲ್ಲೂ ನಿರಂತರ ಭಜನೆ ನಡೆಯುತ್ತಿತ್ತು.