ವಿಜಯನಗರ ಜಿಲ್ಲೆಯಲ್ಲಿ ವೈಕುಂಠ ಏಕಾದಶಿ ವಿಶೇಷ ಪೂಜೆ

| Published : Dec 24 2023, 01:45 AM IST

ಸಾರಾಂಶ

ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹಲವೆಡೆ ವೆಂಕಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಹೋಮ, ಹವನಗಳು ನಡೆದವು. ದೇವರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.

ಹೊಸಪೇಟೆ: ವೈಕುಂಠ ಏಕಾದಶಿ ಪ್ರಯುಕ್ತ ವಿಜಯನಗರ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ, ಹವನ ಶನಿವಾರ ನೆರವೇರಿಸಲಾಯಿತು.ಜಿಲ್ಲೆಯ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹೂವಿನ ಹಡಗಲಿ ಮತ್ತು ಹರಪನಹಳ್ಳಿ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಶ್ರೀವೆಂಕಟೇಶ್ವರ ಸ್ವಾಮಿಗೆ ಅಭಿಷೇಕ, ಅಲಂಕಾರ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು.

ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ಪ್ರಾಂಗಣದ ಶ್ರೀ ವೆಂಕಟೇಶ್ವರ ಸ್ವಾಮಿ ಹಾಗೂ ವೆಂಕಟಾಪುರ ಕ್ಯಾಂಪ್ ಬಳಿ ಮತ್ಸ್ಯಾವತಾರ ಗುಡ್ಡದ ತಿಮ್ಮಪ್ಪ ದೇವಸ್ಥಾನದ ಮತ್ಸಾವತಾರ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಸಲಾಯಿತು. ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಭಕ್ತರು, ತಿಮ್ಮಪ್ಪ ದರ್ಶನ ಪಡೆದು, ಹೂ, ಹಣ್ಣು, ಕಾಣಿಕೆ ಸಲ್ಲಿಸಿದರು.

ನಗರದ ಅಮರಾವತಿಯ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಸ್ಥಾಪಿಸಲಾಗಿದ್ದ ವೈಕುಂಠದ ದ್ವಾರದ ಮೂಲಕ ಸಹಸ್ರಾರು ಭಕ್ತರು ಶ್ರೀ ವೆಂಕಟೇಶ್ವರ ಹಾಗೂ ಪದ್ಮಾವತಿ ದೇವಿ ದರ್ಶನ ಪಡೆದರು.

ವಡಕರಾಯ ರಂಗನಾಥ ಸ್ವಾಮಿ ಪ್ರಾಂಗಣದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಶ್ರೀ ವೆಂಕಟೇಶ್ವರನಿಗೆ ಅಭಿಷೇಕ, ಲಕ್ಷ ತುಳಸಿ ಅರ್ಚನೆ. ಭಕ್ತರಿಂದ ಸಹಸ್ರ ವಿಷ್ಣುನಾಮ ಪಠಣೆ ನಡೆಯಿತು. ಬಳಿಕ ಭಕ್ತರಿಗೆ 15 ಸಾವಿರಕ್ಕೂ ಹೆಚ್ಚು ಲಾಡುಗಳನ್ನು ವಿತರಿಸಲಾಯಿತು. ಹಂಪಿ ರಸ್ತೆಯಲ್ಲಿರುವ ವಾಸವಿ ಕಲ್ಯಾಣ ಮಂಟಪದ ಆವರಣದಲ್ಲಿರುವ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ನಗರದ ಮುಖ್ಯರಸ್ತೆಯಲ್ಲಿರುವ ಸಣ್ಙ ವೆಂಕಟೇಶ್ವರ ದೇವಾಲಯ, ನಗರೇಶ್ವರ ದೇವಾಲಯದ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ನಸುಕಿನಲ್ಲಿ ದೇವಾಲಯಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು. ದೇವರ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆಯನ್ನು ದೇವಸ್ಥಾನ ಸಮಿತಿಗಳು ಕಲ್ಪಿಸಿದ್ದವು. ಜಿಲ್ಲೆಯ ವಿವಿಧ ವಿಷ್ಣು ದೇವಾಲಯಗಳಲ್ಲಿ ಭಕ್ತರು ಗೋವಿಂದ ನಾಮಸ್ಮರಣೆ ಮಾಡಿದರು.