ವೈಕುಂಠ ಏಕಾದಶಿ: ಭಕ್ತರ ಪಾದಯಾತ್ರೆ

| Published : Dec 24 2023, 01:45 AM IST

ಸಾರಾಂಶ

ತುರುವೇಕೆರೆ ತಾಲೂಕಿನ ಇತಿಹಾಸ ಪ್ರಸಿದ್ಧ ಸಂಪಿಗೆ ಶ್ರೀನಿವಾಸ ಸ್ವಾಮಿದರ್ಶನಕ್ಕಾಗಿ ಪಾದಯಾತ್ರೆ ತೆರೆಳಿದ ಭಕ್ತಾದಿಗಳು

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕಿನ ನಿಟ್ಟೂರು, ಇಡಕನಹಳ್ಳಿ, ಸೋಮಲಾಪುರ, ತಿಮ್ಮಪ್ಪನ ಹಟ್ಟಿ, ಉದ್ದೆ ಹೊಸಕೆರೆ, ತೋಟದ ಪಾಳ್ಯ, ಮತ್ತಿಕೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತಾದಿಗಳು ವೈಕುಂಠ ಏಕಾದಶಿ ಅಂಗವಾಗಿ ತುರುವೇಕೆರೆ ತಾಲೂಕಿನ ಇತಿಹಾಸ ಪ್ರಸಿದ್ಧ ಸಂಪಿಗೆ ಶ್ರೀನಿವಾಸ ಸ್ವಾಮಿದರ್ಶನಕ್ಕಾಗಿ ಪಾದಯಾತ್ರೆಯಲ್ಲಿ ತೆರಳಿದರು. ದಾರಿಯುದ್ದಕ್ಕೂ ಭಜನೆ, ದೇವರನಾಮಗಳನ್ನು ಹಾಡುತ್ತಾ ಸಾಗುತ್ತಿದ್ದ ಭಕ್ತಾದಿಗಳಿಗೆ ದಾರಿ ಮಧ್ಯೆ ಗ್ರಾಮಸ್ಥರು ಫಲಹಾರ, ಹಣ್ಣಿನರಸ, ಪಾನಕ, ಮಜ್ಜಿಗೆ, ಕೋಸಂಬರಿ ನೀಡಿ ಸತ್ಕರಿಸಿದರು.

ಬರಿಕಾಲಿನಲ್ಲಿಯೇ ಸಾಗಿದ ಭಕ್ತಾದಿಗಳ ಗುಂಪಿನಲ್ಲಿ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ಯುವಕರು ಯಾವುದೇ ಜಾತಿ, ಪಂಥದ ತಾರತಮ್ಯವಿಲ್ಲದೆ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಅಂತಿಮವಾಗಿ ದೇವಾಲಯ ತಲುಪಿದ ಭಕ್ತರು ಸ್ವಾಮಿಯ ದರ್ಶನ ಪಡೆದು ವಿಶೇಷಪೂಜೆ ಸಲ್ಲಿಸುವ ಮೂಲಕ ಹರಕೆಯನ್ನು ತೀರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಭಕ್ತ ಗೋವಿಂದರಾಜು, ಸುಮಾರು 30 ವರ್ಷಗಳಿಂದಲೂ ವೈಕುಂಠ ಏಕಾದಶಿ ಅಂಗವಾಗಿ ಈ ಭಾಗದಿಂದ ಜನರು ಹರಿಕೆಯನ್ನು ತೀರಿಸಲು ಕಾಲುನಡಿಗೆಯಲ್ಲಿ ಹೋಗುತ್ತೇವೆ. ಇದರಿಂದ ಭಕ್ತಾದಿಗಳ ಇಷ್ಟಾರ್ಥ ನೆರವೇರುವ ಜೊತೆಗೆ ಕಷ್ಟಗಳು ಪರಿಹಾರವಾಗುವವು ಎಂಬ ನಂಬಿಕೆ ಇದೆ. ವೈಕುಂಠ ಏಕಾದಶಿ ಎಂದು ಶ್ರೀನಿವಾಸ ಸ್ವಾಮಿಗೆ ಹರಿಕೆ ತೀರಿಸುವ ಉದ್ದೇಶದಿಂದಲೇ ಭಕ್ತಾದಿಗಳು ಬರಿಗಾಲಲ್ಲಿ ದೇವಾಲಯಕ್ಕೆ ಪಾದಯಾತ್ರೆಯಲ್ಲಿ ತೆರಳುವ ರೂಢಿ ಈ ಭಾಗದಲ್ಲಿ ಇದೆ ಎಂದು ತಿಳಿಸಿದರು.