ಸಾರಾಂಶ
ದೇವಾಲಯಗಳನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿದ್ದು, ಉಪವಾಸ ವ್ರತ ಕೈಗೊಂಡ ಸಾವಿರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಶುಕ್ರವಾರ ಮಂಗಳೂರು ಸೇರಿದಂತೆ ದ.ಕ. ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿತು. ದೇವಾಲಯಗಳನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿದ್ದು, ಉಪವಾಸ ವ್ರತ ಕೈಗೊಂಡ ಸಾವಿರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ಮಂಗಳೂರಿನ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಏಳನೇ ವರ್ಷದ ವೈಕುಂಠ ಏಕಾದಶಿ ಆಚರಣೆ ನಡೆಯಿತು. ಶ್ರೀ ದೇವರ ಸಾನಿಧ್ಯದಲ್ಲಿ ಚೈತನ್ಯಾಭಿವೃದ್ಧಿ ಹಾಗೂ ಲೋಕಕಲ್ಯಾಣ ಪ್ರಾಪ್ತಿಯ ಸಂಕಲ್ಪದೊಂದಿಗೆ ನಾಮತ್ರಯ ಮಹಾಮಂತ್ರ ಜಪಯಜ್ಞ, ಡೊಂಗರಕೇರಿ ಕಟ್ಟೆಯಿಂದ ಪುಷ್ಪಯಾಗದ ಹೂವಿನ ವಿಶೇಷ ಮೆರವಣಿಗೆ, ಪುಷ್ಪಯಾಗ ಮತ್ತು ಅಷ್ಟಾವಧಾನ ಸೇವೆ ನಡೆಯಿತು. ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ದೇವಳವನ್ನು ವಿಶೇಷವಾಗಿ ಸಾವಯವ ಕೃಷಿಯ ಸಸಿಗಳಿಂದ ಅಲಂಕರಿಸಲಾಗಿತ್ತು. ಹರಿವೆ, ಪಾಲಕ್ ಸೊಪ್ಪು, ಕೆಂಪು ತುಳಸಿ ಸಹಿತ ವಿವಿಧ ಸಸಿಗಳನ್ನು ಅಲಂಕಾರಕ್ಕೆ ಬಳಸಲಾಗಿತ್ತು. ಆಗಮಿಸಿದ ಭಕ್ತರಿಗೆ ಸಸಿಗಳನ್ನು ಪ್ರಸಾದ ರೂಪದಲ್ಲಿ ನೀಡಲಾಯಿತು. ಪಾಲಕ್, ಹರಿವೆ, ಬೀನ್ಸ್, ಅಲಸಂಡೆ, ಬೆಂಡೆ ಸಹಿತ ಒಟ್ಟು ೧೦ ಸಾವಿರ ಗಿಡಗಳನ್ನು ಸಿದ್ದಪಡಿಸಲಾಗಿತ್ತು.ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ಕೊಡಿಯಾಲ್‌ಬೈಲ್‌ನ ಇಸ್ಕಾನ್ ಮಂದಿರದಲ್ಲಿ ದೇವರಿಗೆ ವಿಶೇಷ ಅಲಂಕಾರ ಸಹಿತ ಪೂಜೆ ನೆರವೇರಿತು. ವೈಕುಂಠ ದ್ವಾರ ಪೂಜೆ, ಶೃಂಗಾರ ಆರತಿ, ಪುಷ್ಪಾರ್ಚನೆ, ವೈಕುಂಠ ಏಕಾದಶಿ ಹೋಮ, ಶಯನ ಆರತಿ, ಮಹಾಪ್ರಸಾದ ವಿತರಣೆ ನಡೆಯಿತು.ನಗರದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲೂ ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನೆರವೇರಿತು. ಸಾವಿರಾರು ಭಕ್ತರು ಭೇಟಿ ನೀಡಿದರು. ವಳಚ್ಚಿಲ್‌ನ ಶ್ರೀನಿವಾಸ ವಿಶ್ವವಿದ್ಯಾಲಯದ ಆವರಣದಲ್ಲೂ ವೈಕುಂಠ ಏಕಾದಶಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.