ಸಾರಾಂಶ
ಕಿಕ್ಕೇರಿ: ಧಾರ್ಮಿಕ ವರ್ಷಾಚರಣೆಯಲ್ಲಿ ಪುಣ್ಯಕಾಲ ದಿನವಾದ ವೈಕುಂಠ ಏಕಾದಶಿಯಂದು ವಿಷ್ಣು ದೇವಾಲಯಗಳಲ್ಲಿ ವಿವಿಧ ಪೂಜಾ ಕೈಂಕರ್ಯ, ಅಭಿಷೇಕಗಳು ಜರುಗಿದವು.
ಶುಕ್ರವಾರ ಮುಂಜಾನೆ ಭಕ್ತರು ದೇಗುಲಕ್ಕೆ ತೆರಳಿ ದೇಗುಲದ ಪ್ರವೇಶದ್ವಾರವನ್ನು ಭಕ್ತಿಯಿಂದ ನಮಿಸಿ ಒಳಪ್ರವೇಶಿಸಿದರು.ಪಟ್ಟಣದ ಸಿದ್ಧಾರೂಢಸ್ವಾಮಿ ಮಠ, ನರಸಿಂಹಸ್ವಾಮಿ ದೇಗುಲ, ವೀರಾಂಜನೇಯ ದೇಗುಲದಲ್ಲಿ ಭಕ್ತರು ಅಧಿಕವಾಗಿ ಸೇರಿದ್ದರು. ದೇಗುಲಗಳಲ್ಲಿ ನಿರ್ಮಿಸಲಾಗಿದ್ದ ವೈಕುಂಠ ಉತ್ತರದ್ವಾರ ಬಾಗಿಲು ಮೂಲಕ ಪ್ರವೇಶಿಸಿ ದೇವರ ದರ್ಶನ ಪಡೆದು ಪುನೀತರಾದರು.
ಗೋವಿಂದ, ನಾರಾಯಣ ಎಂಬ ಜಯಘೋಷದೊಂದಿಗೆ ದೇಗುಲದಲ್ಲಿ ಶಂಖನಾದ ಮೊಳಗಿತು.ಅರ್ಚಕ ವೃಂದದವರು ದೇವರಿಗೆ ಪಂಚಾಮೃತ ಅಭಿಷೇಕ, ವಿವಿಧ ಪೂಜಾಲಂಕಾರ ಸೇವೆಗಳನ್ನು ಮಾಡಿ ಲೋಕ ಕಲ್ಯಾಣಾರ್ಥ ಪ್ರಾರ್ಥಿಸಿದರು. ದೇವರಿಗೆ ವಿವಿಧ ಪರಿಮಳದ ಪುಷ್ಪ, ಆಭರಣಗಳಿಂದ ಅಲಂಕರಿಸಲಾಗಿತ್ತು. ಸರತಿಯಲ್ಲಿ ನಿಂತು ದೇವರ ದರ್ಶನ ಪಡೆಯಲು ಭಕ್ತರು ಉತ್ಸುಕರಾಗಿದ್ದರು.
ಕುರುಹಿನಶೆಟ್ಟಿ ಸಮುದಾಯದ ಸಿದ್ಧಾರೂಢ ಮಠದಲ್ಲಿ ಲಕ್ಷ್ಮೀವೆಂಕಟೇಶ್ವರಸ್ವಾಮಿಗೆ ವಿಶೇಷವಾಗಿ ಸೇವಂತಿಗೆ ಅಲಂಕಾರ ಮಾಡಲಾಗಿತ್ತು.ಸಮಾಜದ ಮಹಿಳೆಯರು ಚಿತ್ತಾಕರ್ಷಕವಾದ ರಂಗೋಲಿ ಬಿಡಿಸಿ ಭಕ್ತರನ್ನು ಸ್ವಾಗತಿಸಿದರು. ವಿವಿಧ ದೇಗುಲಗಳಲ್ಲಿ ಸಿಹಿಬೂಂದಿ, ಲಡ್ಡು, ಮೊಸರನ್ನ, ರಸಾಯನ, ಪುಳಿಯೋಗರೆ, ತೀರ್ಥ, ಪ್ರಸಾದವನ್ನು ಭಕ್ತರಿಗೆ ನೀಡಲಾಯಿತು.
ಗದ್ದೆಹೊಸೂರುವಿನ ಅಭಯ ವೆಂಕಟರಮಣಸ್ವಾಮಿ, ಗೋವಿಂದನಹಳ್ಳಿ ವೇಣುಗೋಪಾಲಸ್ವಾಮಿ, ಕೃಷ್ಣಾಪುರದ ಚಲುವನಾರಾಯಣಸ್ವಾಮಿ, ಚಿಕ್ಕಳಲೆ ಲಕ್ಷ್ಮೀನರಸಿಂಹಸ್ವಾಮಿ, ಬೋಳಮಾರನಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ, ಮಾರುತಿ ದೇಗುಲಗಳಲ್ಲಿ ವಿಶೇಷ ಪೂಜೆಗಳು ಶ್ರದ್ಧಾ- ಭಕ್ತಿಯಿಂದ ನೆರವೇರಿದವು.-----------
10ಕೆಎಂಎನ್ ಡಿ16,17ಕಿಕ್ಕೇರಿ ಸಿದ್ಧಾರೂಢಸ್ವಾಮಿ ಮಠದಲ್ಲಿ ವೈಕುಂಠ ಏಕಾದಶಿಯ ಶುಕ್ರವಾರ ಉತ್ತರ ವೈಕುಂಠದ್ವಾರದ ಮೂಲಕ ಭಕ್ತರು ದೇವರ ದರ್ಶನ ಪಡೆದರು.
ಕುರುಹಿನಶೆಟ್ಟಿ ಸಮಾಜದ ಮಹಿಳೆಯರು ವೈಕುಂಠ ಏಕಾದಶಿ ಪ್ರಯುಕ್ತ ಶುಕ್ರವಾರ ವರ್ಣರಂಜಿತ ರಂಗೋಲಿ ಬಿಡಿಸಿ ಭಕ್ತರನ್ನು ಸ್ವಾಗತಿಸಿದರು.