ಪೊಲೀಸ್ ರಕ್ಷಣೆಯಲ್ಲಿ ಪಾಂಡವಪುರಕ್ಕೆ ಆಗಮಿಸಿದ ವೈರಮುಡಿ, ರಾಜಮುಡಿ ಕಿರೀಟ

| Published : Apr 08 2025, 12:34 AM IST

ಪೊಲೀಸ್ ರಕ್ಷಣೆಯಲ್ಲಿ ಪಾಂಡವಪುರಕ್ಕೆ ಆಗಮಿಸಿದ ವೈರಮುಡಿ, ರಾಜಮುಡಿ ಕಿರೀಟ
Share this Article
  • FB
  • TW
  • Linkdin
  • Email

ಸಾರಾಂಶ

ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿ ಅಲಂಕಾರಕ್ಕಾಗಿ ಜಿಲ್ಲಾ ಖಜಾನೆಯಿಂದ ಮೈಸೂರಿನ ಪರಕಾಲ ಮಠದ ವಾಹನದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಶ್ರೀರಂಗಪಟ್ಟಣದ ಕಿರಂಗೂರಿನ ಮೂಲಕ ಪಾಂಡವಪುರಕ್ಕೆ ಆಗಮಿಸಿದ ವಜ್ರ ಖಚಿತ ವೈರಮುಡಿ ಹಾಗೂ ರಾಜಮುಡಿ ಕಿರೀಟಗಳನ್ನು ಸಂಪ್ರದಾಯದಂತೆ ತಾಲೂಕು ಆಡಳಿತ ಮತ್ತು ಶಾಸಕ ದರ್ಶನ್ ಪುಟ್ಟಣ್ಣಯ್ಯ ಬರಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ವೈರಮುಡಿ ಬ್ರಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾ ಖಜಾನೆಯಿಂದ ಪೊಲೀಸ್ ರಕ್ಷಣೆಯಲ್ಲಿ ಆಗಮಿಸಿದ ವೈರಮುಡಿ, ರಾಜಮುಡಿ ಕಿರೀಟಗಳನ್ನು ತಾಲೂಕಿನ ಗಡಿಭಾಗ ಪಿಎಸ್‌ಎಸ್‌ಕೆ ಕಾರ್ಖಾನೆ ಬಳಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬರಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸಿದರು.

ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿ ಅಲಂಕಾರಕ್ಕಾಗಿ ಜಿಲ್ಲಾ ಖಜಾನೆಯಿಂದ ಮೈಸೂರಿನ ಪರಕಾಲ ಮಠದ ವಾಹನದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಶ್ರೀರಂಗಪಟ್ಟಣದ ಕಿರಂಗೂರಿನ ಮೂಲಕ ಪಾಂಡವಪುರಕ್ಕೆ ಆಗಮಿಸಿದ ವಜ್ರ ಖಚಿತ ವೈರಮುಡಿ ಹಾಗೂ ರಾಜಮುಡಿ ಕಿರೀಟಗಳನ್ನು ಸಂಪ್ರದಾಯದಂತೆ ತಾಲೂಕು ಆಡಳಿತ ಮತ್ತು ಶಾಸಕ ದರ್ಶನ್ ಪುಟ್ಟಣ್ಣಯ್ಯ ಬರಮಾಡಿಕೊಂಡರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕಿರೀಟದ ಬುತ್ತಿಯನ್ನು ತಲೆ ಮೇಲೆ ಹೊತ್ತು ತಂದು ವಿಶೇಷ ಪೂಜೆ ಸಲ್ಲಿಸಿದರು. ಪಟ್ಟಣಕ್ಕೆ ಆಗಮಿಸಿದಾಗ ತಾಲೂಕು ಆಡಳಿತ ಪರ ಎಡೀಸಿ ಬಿ.ಸಿ.ಶಿವಾನಂದಮೂರ್ತಿ, ಎಸಿ ಕೆ.ಆರ್.ಶ್ರೀನಿವಾಸ್ ಮತ್ತು ತಹಸೀಲ್ದಾರ್ ಎಸ್.ಸಂತೋಷ್ ಸಂಪ್ರದಾಯದಂತೆ ಬರಮಾಡಿಕೊಂಡರು.

ಪಿಎಸ್‌ಎಸ್‌ಕೆ ಕಾರ್ಖಾನೆ ಮುಂಭಾಗ, ಕೆನ್ನಾಳು, ಹರಳಹಳ್ಳಿ, ಪಟ್ಟಣದ ಲಾಲ್‌ ಬಹುದ್ದೂರು ಟಾಕೀಸ್ ಎದುರು, ತಾಲೂಕು ಕಚೇರಿ, ಕುಂಟೇಗೌಡರ ಮಿಲ್, ಸಿದ್ದಿಮಂಟಪ, ಮಳವಳಯ್ಯನ ಛತ್ರ, ಬೀರಶೆಟ್ಟಹಳ್ಳಿ, ಬನ್ನಘಟ್ಟ, ಕೆ.ಹೊಸೂರು ಗೇಟ್, ಟಿ.ಎಸ್.ಛತ್ರ, ಮಹದೇಶ್ವರಪುರ, ನೀಲನಹಳ್ಳಿ ಗೇಟ್, ಮಾಣಿಕ್ಯನಹಳ್ಳಿ, ಜಕ್ಕನಹಳ್ಳಿ ಮೂಲಕ ಚಲುವನಾರಾಯಣಸ್ವಾಮಿ ದೇವಸ್ಥಾನ ತಲುಪವವರೆಗೂ ಮಾರ್ಗದುದ್ದಕ್ಕೂ ಹಲವು ಕಡೆಗಳಲ್ಲಿ ಸ್ವಾಮಿ ಕೀರೀಟಕ್ಕೆ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.

ಈ ವೇಳೆ ಸಾವಿರಾರು ಭಕ್ತಿಗಳು ಕೀರಿಟವನ್ನು ಸ್ಪರ್ಶಿಸಿ ಭಕ್ತಿ ಸಮರ್ಪಿಸಿದರು. ತಾಲೂಕು ಕಚೇರಿಗೆ ಬಳಿಗೆ ಆಗಮಿಸಿದ ಕಿರೀಟಗಳನ್ನು ತಹಸೀಲ್ದಾರ್ ಎಸ್.ಸಂತೋಷ್ ಮಂಗಳಕರ ವಾದ್ಯ, ವೀರಭದ್ರ ಕುಣಿತ, ಡೊಳ್ಳು ಸದ್ದಿನೊಂದಿಗೆ ಬರಮಾಡಿಕೊಂಡು ಅಧಿಕಾರಿಗಳೊಂದಿಗೆ ಕಚೇರಿ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಮನ ಸಲ್ಲಿಸಿದರು.

ನಿಗಧಿತ ಸ್ಥಳಗಳಲ್ಲಿ ಶ್ರೀಚೆಲುವನಾರಾಯಣನ ಕಿರೀಟಕ್ಕೆ ಭಕ್ತರು ಪೂಜೆ ಸಲ್ಲಿಸಿದ ಬಳಿಕ ತಾಲೂಕು ಕಚೇರಿ ಆವರಣ, ಸಿದ್ಧಿಮಂಟಪ ಸೇರಿದಂತೆ ಹಲವು ಕಡೆ ಭಕ್ತರು ಮತ್ತು ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ ಹಾಗೂ ಕೊಸಂಬರಿ ವಿತರಿಸಲಾಯಿತು.

ವೈರಮುಡಿ ಉತ್ಸವದಲ್ಲಿ ಎಚ್ಡಿಕೆ, ಸಿಆರ್ ಎಸ್ ಸೇರಿದಂತೆ ರಾಜಕೀಯ ಗಣ್ಯರು ಭಾಗಿ

ಮೇಲುಕೋಟೆ:

ವೈರಮುಡಿ ಉತ್ಸವಕ್ಕೆ ಕೃಷಿ ಸಚಿವ ಚಲುವರಾಯಸ್ವಾಮಿ, ಪತ್ನಿ ಧನಲಕ್ಷ್ಮಿ, ಪುತ್ರ ಸಚ್ಚಿನ್ ಚಲುವರಾಯಸ್ವಾಮಿ, ಪತ್ನಿ ಆಕಾಂಕ್ಷ, ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ, ಪತ್ನಿ ಸುಮತಿ, ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಬಂದಿದ್ದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅಪ್ಪಾಜಿಗೌಡ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸೇರಿದಂತೆ ಹಲವು ರಾಜಕೀಯ ಗಣ್ಯರು ಪಾಲ್ಗೊಂಡಿದ್ದರು.

ವೈರಮುಡಿ ಉತ್ಸವದ ಹಿನ್ನೆಲೆಯಲ್ಲಿ ದೇಗುಲಕ್ಕೆ ಭೇಟಿ ನೀಡಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ದೇವರ ದರ್ಶನ ಪಡೆದು ವಾಪಸ್ ಆದ 5 ನಿಮಿಷದಲ್ಲಿ ಚಲುವರಾಯಸ್ವಾಮಿ ದೇವಸ್ಥಾನದೊಳಗೆ ಪ್ರವೇಶಿಸಿದರು. ಈ ಹಿನ್ನೆಲೆಯಲ್ಲಿ ರಾಜ್ಯ ಕೃಷಿ ಸಚಿವ ಹಾಗೂ ಕೇಂದ್ರ ಕೈಗಾರಿಕೆ ಸಚಿವರು ಪರಸ್ಪರ ಮುಖಾಮುಖಿಯಾಗಲು ಸಾಧ್ಯವಾಗಲಿಲ್ಲ.