ಇರಿದು ವೈಷ್ಣೋದೇವಿ ದೇಗುಲ ಪೂಜಾರಿಯ ಹತ್ಯೆ

| Published : Jul 22 2024, 01:22 AM IST

ಸಾರಾಂಶ

ಇಲ್ಲಿನ ಈಶ್ವರನಗರದ ವೈಷ್ಣೋದೇವಿ ದೇವಸ್ಥಾನದ ಪೂಜಾರಿ (ಅರ್ಚಕ) ಯನ್ನು ಚಾಕುವಿನಿಂದ ಯರ್ರಾಬಿರ್ರಿಯಾಗಿ ಇರಿದು ಕೊಲೆ ಮಾಡಿದ ಘಟನೆ ಭಾನುವಾರ ಸಂಜೆ ನಡೆದಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ವಾಣಿಜ್ಯ ನಗರಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಇಲ್ಲಿನ ಈಶ್ವರನಗರದ ವೈಷ್ಣೋದೇವಿ ದೇವಸ್ಥಾನದ ಪೂಜಾರಿ (ಅರ್ಚಕ) ಯನ್ನು ಚಾಕುವಿನಿಂದ ಯರ್ರಾಬಿರ್ರಿಯಾಗಿ ಇರಿದು ಕೊಲೆ ಮಾಡಿದ ಘಟನೆ ಭಾನುವಾರ ಸಂಜೆ ನಡೆದಿದೆ. ಈ ಕೊಲೆ ಪ್ರಕರಣದಿಂದ ಇಡೀ‌ ನಗರವೇ ಬೆಚ್ವಿಬಿದ್ದಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ.

ಇಲ್ಲಿಯ ವಿದ್ಯಾನಗರದ ನಿವಾಸಿ ಹಾಗೂ ಪೂಜಾರಿ ದೇವೇಂದ್ರಪ್ಪಜ್ಜ ಹೊನ್ನಾಳಿ ಕುಸುಗಲ್ (60) ಕೊಲೆಯಾದವರು. ಎಂದಿನಂತೆ ದೇವಸ್ಥಾನದ ಪೂಜೆ, ಪುನಃಸ್ಕಾರ ಮುಗಿಸಿಕೊಂಡು ಮನೆಯತ್ತ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನದ ಆವರಣದಲ್ಲಿದ್ದ ಕಾರು ಹತ್ತಲು ಹೋದಾಗ ಏಕಾಏಕಿ ಬಂದ ದುಷ್ಕರ್ಮಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಒಬ್ಬನೇ ಬಂದು ಈ ಕೃತ್ಯ ಎಸಗಿ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದ್ದು, ಕೊಲೆ ಮಾಡಿದ ಆರೋಪಿ ಗುರುತು ಸಿಕ್ಕಿಲ್ಲ. ಮನಸೋ ಇಚ್ಛೆ ಚಾಕುವಿನಿಂದ ಇರಿದು ಓಡಿ ಹೋಗಿದ್ದಾನೆ‌. ಇದರಿಂದ ತೀವ್ರವಾಗಿ ಗಾಯಗೊಂಡ ದೇವೇಂದ್ರಪ್ಪಜ್ಜ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತ ದೇಹವನ್ನು ಕಿಮ್ಸ್‌ಗೆ ರವಾನಿಸಲಾಗಿದೆ.

30 ವರ್ಷಕ್ಕಿಂತಲೂ ಹೆಚ್ಚಿನ ಸಮಯದಿಂದ ದೇವಪ್ಪಜ್ಜ ವೈಷ್ಞೋದೇವಿ ದೇವಸ್ಥಾನದ ಪೂಜಾರಿಯಾಗಿದ್ದರು. ನವರಾತ್ರಿ ಸೇರಿದಂತೆ‌ ವಿವಿಧ ವಿಶೇಷ ಸಂದರ್ಭದಲ್ಲಿ ವಿಶೇಷ ಪೂಜೆ, ಪುನಸ್ಕಾರಗಳಿಂದ ಗಮನ ಸೆಳದಿದ್ದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಡಿಸಿಪಿ ಮಹಾಲಿಂಗಪ್ಪ ನಂದಗಾವಿ ಹಾಗೂ ನವನಗರ ಠಾಣೆ ಪಿಐ ಪರಿಶೀಲನೆ ನಡೆಸಿ ಮಾಹಿತಿ ಪಡೆದರು. ಅದರಂತೆ ಸುತ್ತಲಿನ ಪ್ರದೇಶದಲ್ಲಿರುವ ಸಿಸಿಟಿವಿ ಪರಿಶೀಲ‌ನೆ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಕೊಲೆಗೆ ಕಾರಣವೇನೆಂಬುದು ಗೊತ್ತಾಗಿಲ್ಲ.

ಬೆಚ್ಚಿಬಿದ್ದ ನಗರ

ಕಳೆದ ಕೆಲ ದಿನಗಳಿಂದ ಕೊಲೆ, ಕೊಲೆ ಯತ್ನ ಪ್ರಕರಣಗಳು ನಗರದಲ್ಲಿ ಜಾಸ್ತಿಯಾಗಿವೆ. ಹೀಗಾಗಿಯೇ ಪೊಲೀಸ್ ಕಮಿಷನರ್ ಬದಲಿಸುವಂತೆ ಆಗ್ರಹಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದುಂಟು. ಇದೀಗ ಸರ್ಕಾರ ಹೊಸ ಕಮಿಷನರ್ ಅವರನ್ನು ವರ್ಗಾಯಿಸಿತ್ತು. ಹೊಸ ಕಮಿಷನರ್ ಶಶಿಕುಮಾರ ಆಗಮಿಸಿ 10-15 ದಿನವಷ್ಟೇ ಕಳೆದಿದೆ. ಅಷ್ಟರಲ್ಲೇ ಇದೀಗ ಕೊಲೆ ನಡೆದಿರುವುದು ನಗರವನ್ನೇ ಕಂಗೆಡೆಸಿದೆ. ಮಹಾನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಮಿಷನರೇಟ್ ಕಟ್ಟುನಿಟ್ಟಿನ ಕ್ರಮಮ ಕೈಗೊಳ್ಳಬೇಕೆಂಬುದು ಸಾರ್ವಜನಕರ ಒಕ್ಲೊರಲಿನ ಆಗ್ರಹ.