ಜಿಲ್ಲಾ ಬಿಜೆಪಿಯಿಂದ ವಾಜಪೇಯಿ ಜನ್ಮ ಶತಾಬ್ಧಿ: ಸುಶಾಸನ ದಿನಾಚರಣೆ

| Published : Dec 27 2024, 12:47 AM IST

ಸಾರಾಂಶ

ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ಧಿ ದಿನ ಹಾಗೂ ಸುಶಾಸನ ದಿನವನ್ನು ಜಿಲ್ಲಾ ಬಿಜೆಪಿ ವತಿಯಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ಧಿ ದಿನ ಹಾಗೂ ಸುಶಾಸನ ದಿನವನ್ನು ಜಿಲ್ಲಾ ಬಿಜೆಪಿ ವತಿಯಿಂದ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ದೇಶ ಕಂಡ ಅಪ್ರತಿಮ ನಾಯಕ, ಅಜಾತಶತ್ರು, ಕವಿ ಹೃದಯದ ಅಟಲ್ ಬಿಹಾರಿ ವಾಜಪೇಯಿ ಅವರ ಮೌಲ್ಯಾಧಾರಿತ ರಾಜಕಾರಣ, ಮುತ್ಸದ್ದಿತನ, ಸುವರ್ಣ ಚತುಷ್ಪಥ ಯೋಜನೆಯಂತಹ ದೂರದರ್ಶಿತ್ವದ ಚಿಂತನೆಗಳು, ರಾಷ್ಟ್ರ ಪ್ರೇಮ ಸರ್ವಕಾಲಿಕ ಮಾದರಿಯಾಗಿದೆ. ಅವರ ಜನ್ಮ ದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲಾಗುತ್ತಿದೆ. ವಾಜಪೇಯಿ ಅವರ ಜೀವನಾದರ್ಶಗಳು ಪಕ್ಷದ ಕಾರ್ಯಕರ್ತರಿಗೆ ಸದಾ ಪ್ರೇರಣಾದಾಯಕ ಎಂದರು.ರಾಷ್ಟ್ರೀಯ ಮಹಿಳಾ ಆಯೋಗದ ನಿಕಟಪೂರ್ವ ಸದಸ್ಯೆ ಶಾಮಲಾ ಎಸ್. ಕುಂದರ್ ಮಾತನಾಡಿ, ದೇಶದ ಲೋಕತಂತ್ರ ಸದೃಢವಾಗಿರಬೇಕು, ದೇಶದ ಒಳಿತಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧರಾಗಿರಬೇಕು ಎಂಬ ಗಟ್ಟಿ ನಿಲುವು ಹೊಂದಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ದೇಶ ಭಕ್ತಿ, ತ್ಯಾಗ ಮನೋಭಾವ, ಸರಳತೆ ಹಾಗೂ ಮೇರು ವ್ಯಕ್ತಿತ್ವ ಎಲ್ಲರಿಗೂ ಆದರ್ಶ ಎಂದು ಹೇಳಿದರು.ಈ ಸಂದರ್ಭ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಾಜಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ನಿಕಟಪೂರ್ವ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಉಡುಪಿ ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಉಡುಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು, ಪ್ರಮುಖರಾದ ರವಿ ಅಮೀನ್, ರಾಘವೇಂದ್ರ ಕುಂದರ್, ಶ್ರೀನಿಧಿ ಹೆಗ್ಡೆ, ರಾಘವೇಂದ್ರ ಉಪ್ಪುರು ಸಹಿತ ಬಿಜೆಪಿ ಜಿಲ್ಲಾ ಮತ್ತು ಮಹಿಳಾ ಮೋರ್ಚಾ ಪದಾಧಿಕಾರಿಗಳು, ವಿವಿಧ ಪ್ರಕೋಷ್ಠಗಳ ಸಂಚಾಲಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಅನಿತಾ ಆರ್.ಕೆ. ವಂದಿಸಿದರು.