ವಾಜಪೇಯಿ ಕನಸು, ಮೋದಿಯಿಂದ ನನಸು

| Published : Mar 23 2024, 01:01 AM IST

ಸಾರಾಂಶ

ಅಟಲ್‌ ಬಿಹಾರಿ ವಾಜಪೇಯಿ ಅವರು ಕಂಡ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನನಸು ಮಾಡುತ್ತಿದ್ದಾರೆ. ಈ ಬಾರಿ ಬಿಜೆಪಿ 400 ಸ್ಥಾನ ಗೆಲುವು ಗುರಿ ಹೊಂದಿದೆ.

ಹೊಸಪೇಟೆ:

ಅಟಲ್‌ ಬಿಹಾರಿ ವಾಜಪೇಯಿ ಅವರು ಕಂಡ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನನಸು ಮಾಡುತ್ತಿದ್ದಾರೆ. ಈ ಬಾರಿ ಬಿಜೆಪಿ 400 ಸ್ಥಾನ ಗೆಲುವು ಗುರಿ ಹೊಂದಿದ್ದು ಕಾರ್ಯಕರ್ತರು ಮನೆ-ಮನೆಗೆ ತೆರಳಿ ಬಿಜೆಪಿಗೆ ಮತ ಹಾಕಿಸಬೇಕು ಎಂದು ವಿಧಾನ ಪರಿಷತ್‌ ಸಚೇತಕ ಎನ್‌. ರವಿಕುಮಾರ ಹೇಳಿದರು.ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಬೂತ್‌ ವಿಜಯ್‌ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಹಿಂದೆ ವಾಜಪೇಯಿ ಅವರು ಬರೀ ಒಂದೇ ಒಂದು ಮತದಿಂದ ಸೋಲನುಭವಿಸಿ ಪ್ರಧಾನಿ ಪಟ್ಟ ಕಳೆದುಕೊಂಡಿದ್ದರು. ಈ ವೇಳೆ ಕೋಟ್ಯಂತರ ಜನರು ಕಣ್ಣೀರು ಸುರಿಸಿದ್ದರು ಎಂದರು.1980ರಲ್ಲಿ ಜನಸಂಘ ಸ್ಥಾಪನೆಯಾದಾಗ ವಾಜಪೇಯಿ, ಲಾಲ್‌ ಕೃಷ್ಣ ಅಡ್ವಾಣಿ ಅವರು ಮಾತ್ರ ಆಯ್ಕೆಯಾಗಿದ್ದರು. ಮುಂಬೈನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ವಾಜಪೇಯಿ, ಮುಂದಿನ ಚುನಾವಣೆಗಳಲ್ಲಿ ಬಿಜೆಪಿ 2ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಗೆಲುವು ಸಾಧಿಸುವುದಿಲ್ಲ ಎಂದಿದ್ದರು. ಈ ಕನಸನ್ನು ಮೋದಿ ನನಸು ಮಾಡಿದ್ದಾರೆ. ಆದರೆ, ಆಗ ಕಾಂಗ್ರೆಸ್‌ ಹಗಲುಗನಸು ಎಂದು ಮೂದಲಿಸಿತ್ತು. ಈಗ ಬಿಜೆಪಿ 400 ಗುರಿ ಹೊಂದಿದೆ. ಆದರೆ, ಕಾಂಗ್ರೆಸ್‌ 40 ಸ್ಥಾನ ಗೆಲುವುದಿಲ್ಲ ಎಂದು ಸಮೀಕ್ಷೆಗಳೇ ಹೇಳುತ್ತಿವೆ ಎಂದು ಕುಟುಕಿದರು.ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಮಾತನಾಡಿ, ನಾವು ಈ ಮಟ್ಟಕ್ಕೆ ಬೆಳೆಯಲು ಅಂಬೇಡ್ಕರ್‌ ಕಾರಣ. ಮಾಜಿ ಸಚಿವ ಆನಂದ ಸಿಂಗ್ ಅವರು ಅಂಬೇಡ್ಕರ್‌ ಅವರ ಪಾರ್ಲಿಮೆಂಟ್‌ ಮಾದರಿ ಪ್ರತಿಮೆ ನಿರ್ಮಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಮಾದರಿ ಪ್ರತಿಮೆ ನಿರ್ಮಾಣ ಆಗಲಿ ಎಂಬ ಆಶಯ ಹೊಂದಿರುವೆ. ಆನಂದ ಸಿಂಗ್‌ ಅವರು ವಿಧಾನಸಭೆ ಚುನಾವಣೆ ಹಿನ್ನಡೆಯಿಂದ ಕುಗ್ಗಿದ್ದಾರೆ. ಹೃದಯವಂತ, ಮಾನವೀಯ ಗುಣವುಳ್ಳ ಮನುಷ್ಯನಿಗೆ ಈ ಸೋಲಾಗಬಾರದಿತ್ತು ಎಂದು ವಿಷಾಧಿಸಿದರು.ಈ ವೇಳೆ ಯುವ ಮುಖಂಡ ಸಿದ್ಧಾರ್ಥ ಸಿಂಗ್‌ ಭಾವುಕರಾದರು. ಕೂಡಲೇ ಶ್ರೀರಾಮುಲು ಅವರತ್ತ ತಿರುಗಿ "ನೀವು ಧೈರ್ಯ ತೆಗೆದುಕೊಳ್ಳಿ, ಖಂಡಿತ ಒಳ್ಳೆಯರಿಗೆ ಒಳ್ಳೆಯದಾಗುತ್ತದೆ. ಮುಂದಿನ ದಿನಗಳಲ್ಲಿ ಜನ ಕೈಬಿಡುವುದಿಲ್ಲ. ನಿಮ್ಮ ತಂದೆ ಅಭಿವೃದ್ಧಿ ಕಾರ್ಯಗಳನ್ನು ಹೊಸಪೇಟೆ ಜನತೆ ಮರೆತಿಲ್ಲ, ಕೆಟ್ಟ ದಿನಗಳು ಕಳೆದು, ಮುಂದೆ ಒಳ್ಳೆಯ ದಿನಗಳು " ಬರಲಿವೆ ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಚನ್ನಬಸವ ನಗೌಡ ಪಾಟೀಲ, ಯುವ ಮುಖಂಡ ಸಿದ್ಧಾರ್ಥ ಸಿಂಗ್, ಎಸ್‌.ಟಿ. ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತ, ಮುಖಂಡರಾದ ಚಂದ್ರಶೇಖರ ಪಾಟೀಲ ಹಲಗೇರಿ, ಪೂಜೆಪ್ಪ ಮಾತನಾಡಿದರು.

ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಮುಖಂಡರಾದ ಅಶೋಕ ಜೀರೆ, ಓದೋ ಗಂಗಪ್ಪ, ರಾಘವೇಂದ್ರ, ಕಾಸಟ್ಟಿ ಉಮಾಪತಿ, ಸಾಲಿಸಿದ್ದಯ್ಯ ಸ್ವಾಮಿ, ಆರ್.‌ಕೊಟ್ರೇಶ್, ರಾಮಣ್ಣ, ಪರಶುರಾಮ, ಶೇಕ್ಷಾವಲಿ, ಭಾರತಿ ಪಾಟೀಲ್, ಕಿಚಿಡಿ ಶ್ರೀನಿವಾಸ್, ಗೋಸಲ ಭರಮಪ್ಪ, ರೇಖಾರಾಣಿ, ಕಿಚಿಡಿ ಕೊಟ್ರೇಶ್, ಕವಿತಾ, ದೇವರಮನಿ ಶ್ರೀನಿವಾಸ್, ಶರಣುಸ್ವಾಮಿ ಮತ್ತಿತರರಿದ್ದರು.