ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ನೂರನೇ ಜನ್ಮದಿನವನ್ನು ವರ್ಷ ಪೂರ್ತಿ ಸ್ಮರಣೀಯವಾಗಿ ಆಚರಿಸಲು ಬಿಜೆಪಿ ವಿವಿಧ ವಿಶೇಷ ಕಾರ್ಯಕ್ರಮ ಹಾಕಿಕೊಂಡಿದೆ. ಇದರ ಭಾಗವಾಗಿ ಅಟಲ್‌ಜಿ ಅವರ ಜನ್ಮ ಶತಾಬ್ದಿ ಅಂಗವಾಗಿ ವಾಜಪೇಯಿ ಅವರೊಂದಿಗೆ ಒಡನಾಟ ಹೊಂದಿದವರು, ಆಗಿನಿಂದ ಪಕ್ಷ ಸಂಘಟನೆಗೆ ದುಡಿದ ಹಿರಿಯರನ್ನು ಜಿಲ್ಲಾ ಬಿಜೆಪಿಯಿಂದ ಶುಕ್ರವಾರ ಗೌರವಿಸಲಾಯಿತು.ವಿಧಾನ ಪರಿಷತ್ ನ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿ ಸ್ವಾಮಿಯವರ ನೇತೃತ್ವದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಹಾಗೂ ಮುಖಂಡರು ವಾಜಪೇಯಿ ಅವರೊಂದಿಗೆ ಒಡನಾಟ ಹೊಂದಿದ್ದ ನಗರದ ಹಲವು ಹಿರಿಯರ ಮನೆಗೆ ಭೇಟಿ ನೀಡಿ ಅವರನ್ನು ಸನ್ಮಾನಿಸಿ ಅವರು ಪಕ್ಷಕ್ಕೆಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.ಮಾಜಿ ಸಂಸದ, ಲೋಕಸಭೆಯ ಮಾಜಿ ಉಪ ಸಭಾಪತಿ ದಿ.ಎಸ್.ಮಲ್ಲಿಕಾರ್ಜುನಯ್ಯ ಅವರ ಗಾಂಧಿನಗರ ನಿವಾಸಕ್ಕೆ ಭೇಟಿ ನೀಡಿ, ಮಲ್ಲಿಕಾರ್ಜುನಯ್ಯನವರ ಪತ್ನಿ ಜಯದೇವಮ್ಮ ಅವರನ್ನು ಗೌರವಿಸಿದರು. ತಮ್ಮ ಪತಿ ಲೋಕಸಭೆಯ ಉಪ ಸಭಾಪತಿಯಾಗಿದ್ದ ಅವಧಿಯಲ್ಲಿ ತಾವು ದೆಹಲಿಯಲ್ಲಿ ವಾಜಪೇಯಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದ ಸಂದರ್ಭವನ್ನು ಜಯದೇವಮ್ಮ ಸಂಭ್ರಮದಿಂದ ಹಂಚಿಕೊಂಡರು. ಈ ವೇಳೆ ಮಲ್ಲಿಕಾರ್ಜುನಯ್ಯನವರ ಮಗಳು ಎಂ.ನಾಗವೇಣಿ, ಅಳಿಯ, ವಕೀಲ ಟಿ.ಎಸ್.ನಿರಂಜನ್ ಹಾಜರಿದ್ದರು. ಅಟಲ್‌ಜೀ ಅವರ ಹೋರಾಟಗಳಿಂದ ಪ್ರೇರೇಪಿತರಾಗಿ ಪಕ್ಷದ ಹೋರಾಟಗಳಲ್ಲಿ ಭಾಗಿಯಾಗಿ ಬಿಜೆಪಿ ಸಂಘಟನೆಗೆ ಶ್ರಮಿಸಿದ್ದ ಕಾಂಡಿಮೆಂಟ್ ಶಿವಣ್ಣ ಅವರನ್ನು ಬಿಜೆಪಿ ಮುಖಂಡರು ಅವರ ಬಳಿಗೆ ಹೋಗಿ ಗೌರವಿಸಿದರು. ವಾಜಪೇಯಿ ಅವರು ತುಮಕೂರಿಗೆ ಆಗಮಿಸಿದ್ದ ಸಂದರ್ಭಗಳನ್ನು ನೆನಪಿಸಿಕೊಂಡ ಶಿವಣ್ಣನವರು, ಅದರ ನೆನಪಿನ ಫೋಟೋಗಳನ್ನು ಹಂಚಿಕೊಂಡರು.ಅಟಲ್ ಬಿಹಾರಿಯವರ ಕಟ್ಟಾಭಿಮಾನಿಯಾದ ಹಿರಿಯ ಮುಖಂಡ ನಂಜೇಗೌಡರ ಮನೆಗೆ ಮುಖಂಡರನ್ನು ಭೇಟಿ ನೀಡಿ, ಪಕ್ಷದ ಸೇವೆಗಾಗಿ ಅವರಿಗೆ ಗೌರವ ಸಲ್ಲಿಸಿದರು. ವಾಜಪೇಯಿ ಅವರೊಂದಿಗಿನ ಒಡನಾಟ, ತುಮಕೂರಿನಲ್ಲಿ ಅವರ ಕಾರ್ಯಕ್ರಮ ಆಯೋಜನೆಗೆ ತಾವು ಶ್ರಮಿಸಿದ್ದು, ಗುಬ್ಬಿಯಲ್ಲಿ ತಾವು ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡಿದ್ದಾಗ ವಾಜಪೇಯಿ ಅವರನ್ನು ಗುಬ್ಬಿಗೆ ಆಹ್ವಾನಿಸಿದ ಸಂದರ್ಭಗಳನ್ನು ನಂಜೇಗೌಡರು ಅಭಿಮಾನದಿಂದ ಮೆಲುಕು ಹಾಕಿದರು. ಹಿರಿಯ ಬಿಜೆಪಿ ಮುಖಂಡ ಪಿ.ಕೃಷ್ಣಪ್ಪಅವರ ಮಾರುತಿ ನಗರದ ನಿವಾಸಕ್ಕೆ ಭೇಟಿ ನೀಡಿದ ಡಾ.ಶಿವಯೋಗಿಸ್ವಾಮಿ, ಜ್ಯೋತಿಗಣೇಶ್, ರವಿಶಂಕರ್ ಹೆಬ್ಬಾಕ ಅವರ ತಂಡ, ಕೃಷ್ಣಪ್ಪ ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು. ವಾಜಪೇಯಿ ಅವರ ಆದರ್ಶ ನಾಯಕತ್ವವನ್ನು ಕೃಷ್ಣಪ್ಪ ಗುಣಗಾನ ಮಾಡಿದರು.ಮಾಜಿ ಸಂಸದ ಎಸ್.ಮಲ್ಲಿಕಾರ್ಜುನಯ್ಯನವರ ಒಡನಾಡಿಯಾಗಿ ಅವರೊಂದಿಗೆ ವಾಜಪೇಯಿಯವ ಸಂಪರ್ಕ ಹೊಂದಿ ಅಭಿಮಾನ ಬೆಳೆಸಿಕೊಂಡ ಪಿ.ಸದಾಶಿವಯ್ಯ ಅವರ ಮನೆಗೆ ಭೇಟಿಕೊಟ್ಟು ದಂಪತಿಯನ್ನು ಸನ್ಮಾನಿಸಿದರು. ವಾಜಪೇಯಿ ಅವರೊಂದಿಗಿನ ತಮ್ಮಒಡನಾಟ, ಅವರಕಾರ್ಯಕ್ರಮಗಳ ಸಂಬಂಧಿಸಿದ ತಾವು ಜೋಪಾನವಾಗಿ ಸಂಗ್ರಹಿಸಿರುವ ಫೋಟೊ, ಪತ್ರಿಕಾ ವರದಿ, ಮತ್ತಿತರ ದಾಖಲಾತಿಗಳನ್ನು ಬಿಜೆಪಿ ನಾಯಕರೊಂದಿಗೆ ಅಭಿಮಾನದಿಂದ ಹಂಚಿಕೊಂಡು ಸದಾಶಿವಯ್ಯ ಸಂಭ್ರಮಿಸಿದರು.ಹಿರಿಯರ ಭೇಟಿ, ಗೌರವಾರ್ಪಣೆ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್‌ಗೌಡ, ನಗರ ಅಧ್ಯಕ್ಷ ಧನುಷ್, ಮುಖಂಡರಾದ ಟಿ.ಹೆಚ್.ಹನುಮಂತರಾಜು, ನಂಜುಂಡಪ್ಪ(ದಾಸಣ್ಣ), ಬಿದರೆ ಪ್ರಕಾಶ್, ಜೆ.ಜಗದೀಶ್, ಲತಾ ಬಾಬು, ಗುರುಪ್ರಸಾದ್ ಮೊದಲಾದವರು ಭಾಗವಹಿಸಿದ್ದರು.