ಸಾರಾಂಶ
ಗದಗ-ಬೆಟಗೇರಿ ವಿವಿಧ ಸಂಘ-ಸಂಸ್ಥೆಗಳಿಂದ ನಗರಸಭೆ ಎದುರು ಪ್ರತಿಭಟನೆ
ಗದಗ: ಗದಗ ಹೃದಯ ಭಾಗದಲ್ಲಿರುವ ವಕಾರ ಸಾಲು (ಖಾಲಿ ನಿವೇಶನ) ಜಾಗೆಯನ್ನು ಖಾಸಗಿಯವರೆಗೆ ಪರಭಾರೆ ಮಾಡಬಾರದೆಂದು ಆಗ್ರಹಿಸಿ ವಕಾರ ಸಾಲು ಅಭಿವೃದ್ಧಿ ಹೋರಾಟ ಸಮಿತಿ ಹಾಗೂ ಅವಳಿ ನಗರದ ವಿವಿಧ ಸಂಘ ಸಂಸ್ಥೆಗಳಿಂದ ಸೋಮವಾರ ನಗರಸಭೆಯ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.ಗದಗ-ಬೆಟಗೇರಿ ನಗರಸಭೆಯ ಮಾಲೀಕತ್ವದ ೫೪ ವಕಾರದ 34 ಎಕರೆ 32 ಗುಂಟೆ ಅತ್ಯಮೂಲ್ಯ ಜಮೀನು ನೂರು ವರ್ಷಕ್ಕೂ ಹೆಚ್ಚು ಲೀಜ್‌ನಲ್ಲಿತ್ತು. ಈ ಆಸ್ತಿಯನ್ನು ಒಳಗೊಳಗೆ ೫೦/೫೦ ಮಾಡಿ ಮಾರಾಟ ಮಾಡಲು ನಡೆಸಿದ ಹುನ್ನಾರವನ್ನು ಅರಿತ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ನಗರಸಭೆ ೧೩-೭-೨೦೧೯ರಲ್ಲಿ ೨ದಿನಗಳ ಕಾಲ ನಿರಂತರವಾಗಿ ವಕಾರ ಸಾಲು ಮಳಿಗೆಗಳನ್ನು ನೆಲಸಮಗೊಳಿಸಿ ನಗರಸಭೆ ಕಬ್ಜಾಕ್ಕೆ ತೆಗೆದುಕೊಂಡಿತು.
ಆದರೆ ಮತ್ತೇ ಈಗ ಈ ವಕಾರ ಸಾಲನ್ನು ಈ ಹಿಂದೆ ಲೀಜ್ ಪಡದಿದ್ದ ಮಾಲೀಕರಿಗೆ, ಖಾಸಗಿಯವರಿಗೆ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮತ್ತೆ ಲೀಜ್ ಕೊಡುವ ಒಳ ಸಂಚು ನಡೆದಿದೆ ಎನ್ನುವ ಆತಂಕ ಮೂಡಿದೆ. ೨೦೨೩ ಅ. ೩೦ರಂದು (ಇಂದು) ನಗರಸಭೆಯ ಸರ್ವ ಸದಸ್ಯರ ಸಭೆ ನಡೆದಿದ್ದು, ಈ ಸಭೆಯಲ್ಲಿ ಆಜೆಂಡಾದಲ್ಲಿರುವ ವಿಷಯಗಳನ್ನು ಚರ್ಚಿಸಿದ ನಂತರ ಅಧ್ಯಕ್ಷರ ಅಪ್ಪಣೆ ಮೇರೆಗೆ ಒಂದಿಷ್ಟು ವಿಷಯಗಳಿದ್ದು, ಈ ವಿಷಯಗಳಲ್ಲಿ ವಕಾರ ಸಾಲಿನ 34 ಎಕರೆ 32 ಗುಂಟೆ ಜಮೀನನ್ನು ಮತ್ತೇ ಕಬ್ಜಾ ಕೊಡಲು ಬಹುಮತದೊಂದಿಗೆ ಠರಾವು ಮಾಡುವ ಸಾಧ್ಯತೆ ಇದೆ ಎಂಬ ಭಯ ಕಾಡುತ್ತಿದೆ. ನೂರಾರು ಕೋಟಿ ಬೆಲೆ ಬಾಳುವ ನಗರಸಭೆಯ ಆಸ್ತಿಯನ್ನು ಕಂಡವರ ಪಾಲು ಮಾಡಲು ಗದಗ-ಬೆಟಗೇರಿ ನಗರಸಭೆಯ ಉಪಾಯ ಮಾಡಿದೆಯಂತೆ ಎನಿಸುತ್ತಿದೆ. ಇದರ ಹಿಂದೆ ಯಾವೂದೋ ದೊಡ್ಡ ಕೈಲಾಬಿ ನಡೆಸಿದ್ದು, ಬಂಡವಾಳಶಾಹಿಗಳ ಕೈಗೆ ಈ ಜಾಗ ಹೋಗುವ ಆತಂಕ ಇದ್ದು ಯಾವುದೇ ಕಾರಣಕ್ಕೂ ನಗರಸಭೆ ಆಸ್ತಿ ಲೀಜ್ ಕೊಡಬಾರದು. ಸರ್ಕಾರವೇ ಬೃಹತ್ ಮಾಲ್ ನಿರ್ಮಾಣ ಮಾಡಬೇಕು. ಇದರಿಂದ ನಗರಸಭೆಗೆ ಕೋಟ್ಯಂತರ ಆದಾಯವು ಬರುತ್ತದೆ. ಅವಳಿ ನಗರದ ಅಭಿವೃದ್ಧಿಗೆ ಅನುಕೂಲವು ಆಗುತ್ತದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ನಗರಸಭೆಯ ವಕಾರ ಸಾಲಿನ ಜಾಗೆಯಲ್ಲಿ ಬೃಹತ್ ಮಾಲ್‌ಗಳು ನಿರ್ಮಾಣ ಮಾಡಿ, ವಾಣಿಜ್ಯ ಸಂಕೀರ್ಣ ಸೇರಿದಂತೆ ಸಾರ್ವಜನಿಕ ಬಳಕೆಯ ಅವಳಿ ನಗರದ ಅಂದ ಹೆಚ್ಚಿಸುವ ನಿಟ್ಟಿನಲ್ಲಿ ಚಿಂತನೆ ಮಾಡಿ. ವಕಾರ ಸಾಲ ಜಾಗೆಯೆ ಎರಡನೇ ಹಾಗೂ ಮೂರನೇ ಮಹಡಿಯಲ್ಲಿ ಬಡವರಿಗೆ, ಪೌರಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಬೇಕು. ಬೀದಿ ಬದಿ ವ್ಯಾಪಾರಸ್ಥರಿಗೆ ಕರ ವಸೂಲಿ ವಿಷಯ ಕೈ ಬಿಡಬೇಕು, ಇದು ಕಾನೂನು ಬಾಹಿರ. ಅವಳಿ ನಗರದಲ್ಲಿ ಅಟೋ ಸ್ಟ್ಯಾಂಡ್ ನಿರ್ಮಾಣ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದರು.
ಈ ವೇಳೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ಚಂದ್ರಕಾಂತ್ ಚವಾಣ, ಶರಣು ಗೋಡಿ, ಭಾಷಾಸಾಬ ಮಲ್ಲಸಮುದ್ರ, ವಿಜಯ ಕಲ್ಮನಿ, ಗಣೇಶ ಹುಬ್ಬಳ್ಳಿ, ರಾಘವೇಂದ್ರ ಪರಾಪೂರ, ಮಂಜುನಾಥ ಪರ್ವತಗೌಡ್ರ, ರಾಘು ಪೂಜಾರ, ರಫೀಕ್ ತೋರಗಲ, ಬಸವರಾಜ ಮಾದುಗುಂಡಿ, ದಾವಲ ಮುಳಗುಂದ ಸೇರಿದಂತೆ ಪ್ರಮುಖರು ಇದ್ದರು.