ಮಳೆ ಬಿದ್ದಾಗ ನೀರು ಹರಿದುಹೋಗದಂತೆ ಹಿಡಿದಿಡುವುದು, ಹಿಡಿದ ನೀರನ್ನು ಭೂಮಿಗೆ ಇಂಗಿಸುವುದು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವುದು. ಈ ಮೂರು ಸೂತ್ರಗಳ ಮೂಲಕ ಧಾರವಾಡದ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ (ವಾಲ್ಮಿ) ಜಲಸಂರಕ್ಷಣೆಯಲ್ಲಿ ಮಾದರಿ ಹೆಜ್ಜೆ ಇಟ್ಟಿದೆ.

- ಜಲಭದ್ರತೆಗೆ ಮಾದರಿ ಹೆಜ್ಜೆಯಿಟ್ಟ ವಾಲ್ಮಿ- ಕೆರೆ, ಇಂಗುಕೆರೆ, ಮಳೆನೀರು ಚರಂಡಿ, ರೀಚಾರ್ಜ್ ಗುಂಡಿಗಳ ಮೂಲಕ 1,000 ಲಕ್ಷ ಲೀಟರ್‌ಗೂ ಅಧಿಕ ಜಲಸಂರಕ್ಷಣೆ

ಅಜೀಜಅಹ್ಮದ ಬಳಗಾನೂರ

ಕನ್ನಡಪ್ರಭ ವಾರ್ತೆ ಧಾರವಾಡ

ಮಳೆ ಬಿದ್ದಾಗ ನೀರು ಹರಿದುಹೋಗದಂತೆ ಹಿಡಿದಿಡುವುದು, ಹಿಡಿದ ನೀರನ್ನು ಭೂಮಿಗೆ ಇಂಗಿಸುವುದು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವುದು. ಈ ಮೂರು ಸೂತ್ರಗಳ ಮೂಲಕ ಧಾರವಾಡದ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ (ವಾಲ್ಮಿ) ಜಲಸಂರಕ್ಷಣೆಯಲ್ಲಿ ಮಾದರಿ ಹೆಜ್ಜೆ ಇಟ್ಟಿದೆ.

ಬೇಲೂರು ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ವಾಲ್ಮಿ ಸಂಸ್ಥೆಯ 55.40 ಹೆಕ್ಟೇರ್ (137 ಎಕರೆ) ವಿಸ್ತೀರ್ಣದ ಆವರಣದಲ್ಲಿ ವೈಜ್ಞಾನಿಕ ಮಳೆನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಆವರಣದಲ್ಲಿ ವಾರ್ಷಿಕ ಸರಾಸರಿ 619ರಿಂದ 1,303 ಮಿ.ಮೀ. ಮಳೆ ಬೀಳುತ್ತಿದ್ದು, ಮಳೆನೀರಿನ ಪ್ರತಿಯೊಂದು ಹನಿಯನ್ನೂ ಸಂರಕ್ಷಿಸುವ ಉದ್ದೇಶದಿಂದ ಹಲವು ಘಟಕಗಳನ್ನು ನಿರ್ಮಿಸಲಾಗಿದೆ.

ಕೆರೆ ಪುನಃಶ್ಚೇತನ:

ಆವರಣದಲ್ಲಿದ್ದ ಕೆರೆಯ ಹೂಳು ತೆಗೆದು ಆಳ-ಅಗಲ ಹೆಚ್ಚಿಸಿ, ಏರಿ ಬಲಪಡಿಸಲಾಗಿದೆ. ಮಧ್ಯಭಾಗದಲ್ಲಿ ದ್ವೀಪ ನಿರ್ಮಿಸುವ ಮೂಲಕ ಕೆರೆಯ ಜಲಸಂಗ್ರಹ ಸಾಮರ್ಥ್ಯ ಹೆಚ್ಚಿಸಲಾಗಿದೆ. 90 ಲಕ್ಷ ಲೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಕೆರೆ, ಅಂತರ್ಜಲ ಮರುಪೂರಣದ ಜತೆಗೆ ಜೀವವೈವಿದ್ಯಕ್ಕೂ ಆಶ್ರಯವಾಗಿದೆ.

ಇದರ ಜತೆಗೆ 5 ಲಕ್ಷ ಲೀಟರ್ ಸಾಮರ್ಥ್ಯದ ಮೂರು ಇಂಗುಕೆರೆಗಳನ್ನು ನಿರ್ಮಿಸಲಾಗಿದೆ. ಇಂಗುಕೆರೆಗಳಲ್ಲಿ ಸಂಗ್ರಹವಾಗುವ ನೀರನ್ನು ಕೃತಕ ಕೊಳವೆ ಬಾವಿಗಳ ಮೂಲಕ ಭೂಮಿಗೆ ಇಂಗಿಸಲಾಗುತ್ತದೆ.

ಚಾವಣಿ ನೀರು ಮರುಬಳಕೆ:

ವಾಲ್ಮಿ ಆವರಣದ ಕಟ್ಟಡಗಳ ಚಾವಣಿಗೆ ಬೀಳುವ ಮಳೆನೀರನ್ನು ತೊಟ್ಟಿಗಳಲ್ಲಿ ಸಂಗ್ರಹಿಸಿ, ಕೃತಕ ಕೊಳವೆ ಬಾವಿಗಳ ಮೂಲಕ ನೇರವಾಗಿ ಭೂಮಿಗೆ ಇಂಗಿಸುವ ವ್ಯವಸ್ಥೆ ಮಾಡಲಾಗಿದೆ. ಒಟ್ಟು 9 ಘಟಕಗಳಿಂದ 73 ಲಕ್ಷ ಲೀಟರ್ ನೀರು ಸಂರಕ್ಷಿಸುವ ಸಾಮರ್ಥ್ಯ ಸೃಷ್ಟಿಸಲಾಗಿದೆ.

138 ಮರುಪೂರಣ ಗುಂಡಿ:

ಹೆಚ್ಚುವರಿ ಮಳೆನೀರು ಸುರಕ್ಷಿತವಾಗಿ ಹರಿಯಲು 3,100 ಮೀಟರ್ ಉದ್ದದ ಮಳೆನೀರು ಚರಂಡಿ ನಿರ್ಮಿಸಲಾಗಿದೆ. ಚರಂಡಿಗಳ ತಳಭಾಗದಲ್ಲಿ ನಿರ್ದಿಷ್ಟ ಅಂತರದಲ್ಲಿ 138 ಮರುಪೂರಣ ಗುಂಡಿಗಳನ್ನು ನಿರ್ಮಿಸಿದ್ದು, ಇವುಗಳ ಮೂಲಕ ನೀರು ನಿಧಾನವಾಗಿ ಮಣ್ಣಿನೊಳಗೆ ಇಂಗುತ್ತದೆ. ಈ ಘಟಕಗಳಿಂದ ಸುಮಾರು 20 ಲಕ್ಷ ಲೀಟರ್ ಜಲಸಂರಕ್ಷಣಾ ಸಾಮರ್ಥ್ಯ ಲಭ್ಯವಾಗಿದೆ.

ಕೆಳಭಾಗದಲ್ಲಿ ಉಂಟಾಗುತ್ತಿದ್ದ ಜವಳು ಸಮಸ್ಯೆ ನಿವಾರಣೆಗೆ ಅಂತರ್ಗತ ಬಸಿಗಾಲುವೆ ನಿರ್ಮಿಸಲಾಗಿದ್ದು, ಸುಮಾರು 10 ಎಕರೆ ಭೂಮಿಗೆ ಇದರ ಪ್ರಯೋಜನವಾಗಿದೆ.

ಹೀಗೆ ಕೆರೆ, ಇಂಗುಕೆರೆ, ಚಾವಣಿ ಮಳೆನೀರು ಕೊಯ್ಲು, ಚರಂಡಿ ಹಾಗೂ ಮರುಪೂರಣ ಗುಂಡಿಗಳ ಸಮನ್ವಯದಿಂದ ವಾಲ್ಮಿ ಆವರಣದ ಒಟ್ಟಾರೆ ಜಲಸಂಗ್ರಹ ಸಾಮರ್ಥ್ಯ 1,000 ಲಕ್ಷ ಲೀಟರ್‌ಗೂ ಅಧಿಕವಾಗಿದೆ. ಜಲಸಂರಕ್ಷಣೆಯ ತಂತ್ರಜ್ಞಾನವನ್ನು ತನ್ನದೇ ಆವರಣದಲ್ಲಿ ಅಳವಡಿಸಿ, ರೈತರು ಹಾಗೂ ತರಬೇತಿದಾರರಿಗೆ ಪ್ರಾಯೋಗಿಕ ಮಾದರಿಯಾಗಿ ವಾಲ್ಮಿ ರೂಪುಗೊಂಡಿದೆ.ಮಳೆಯ ಪ್ರತಿಯೊಂದು ಹನಿಯನ್ನೂ ಸಂರಕ್ಷಿಸಿ, ಭೂಮಿಗೆ ಇಂಗಿಸುವುದೇ ವಾಲ್ಮಿಯ ಜಲಸಂರಕ್ಷಣಾ ಮಾದರಿಯ ಉದ್ದೇಶ. ಇದರಿಂದ ಅಂತರ್ಜಲ ಮರುಪೂರಣಕ್ಕೆ ಹೆಚ್ಚಿನ ನೆರವಾಗಿದೆ ಎನ್ನುತ್ತಾರೆ ವಾಲ್ಮಿ ನಿರ್ದೇಶಕ ಡಾ. ಗಿರೀಶ್ ಎನ್. ಮರಡ್ಡಿ.