ಸಾರಾಂಶ
ಧಾರವಾಡ:
ವಾಲ್ಮಿ ಸಂಸ್ಥೆಯು ಸುಸ್ಥಿರ ಜಲ ಮತ್ತು ನೆಲ ನಿರ್ವಹಣೆಯ ಕ್ಷೇತ್ರದಲ್ಲಿ ದೇಶದಲ್ಲಿಯೇ ಆಶಾಕಿರಣವಾದ ಸಂಸ್ಥೆ ಎಂದು ಪುಣೆಯ ರಾಷ್ಟ್ರೀಯ ಜಲ ಅಕಾಡೆಮಿ ನಿರ್ದೇಶಕ ಮಿಲಿಂದ ಪಾನಪಾಟೀಲ ಹೇಳಿದರು.ಇಲ್ಲಿಯ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ಯಲ್ಲಿ ಗುರುವಾರ ನಡೆದ 39ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಾಲ್ಮಿ ಜಲ ಮತ್ತು ನೆಲ ಕುರಿತು ತರಬೇತಿ, ಸಂಶೋಧನೆ, ಸಮುದಾಯ ಸಂಘಟನೆ, ಜಲ ಜಾಗೃತಿ ಕುರಿತು ರಾಜ್ಯಕ್ಕೆ ಅಗಾಧ ಸೇವೆ ನೀಡಿದೆ. ಜಲ ಮತ್ತು ನೆಲ ಸಂಪನ್ಮೂಲಗಳು ನಾಗರಿಕತೆಯ ಭದ್ರ ಬುನಾದಿಯಾಗಿವೆ. ಜನಸಂಖ್ಯಾ ಬೆಳವಣಿಗೆ, ನಗರೀಕರಣ ಮತ್ತು ಇತ್ತೀಚಿನ ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಜಲ, ನೆಲ ನಿರ್ವಹಣೆ ಅತ್ಯಂತ ಪ್ರಮುಖ ಸವಾಲಾಗಿದೆ. ಈ ನಿಟ್ಟಿನಲ್ಲಿ ಧಾರವಾಡ ವಾಲ್ಮಿಯು ರಾಷ್ಟ್ರದ ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿ ಕಾರ್ಯ ಸೂಚಿಗಳಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ ಎಂದರು.ವಾಲ್ಮಿ ಸಂಸ್ಥೆಯು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಜಲ ಶಕ್ತಿ ಯೋಜನೆ, ಅಟಲ್ ಭೂ ಜಲ ಯೋಜನೆ, ರಾಷ್ಟ್ರೀಯ ಜಲ ಆಂದೋಲನ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಕಾರಣೀಭೂತವಾಗಿದೆ. ಬರುವ ದಿನಗಳಲ್ಲಿ ಹವಾಮಾನ ವೈಪರೀತ್ಯದ ಪರಿಣಾಮಗಳು, ಜಲ ಸುಭದ್ರತೆ ಸುಸ್ಥಿರ ಭೂ ನಿರ್ವಹಣೆ, ತಂತ್ರಜ್ಞಾನ ಆವಿಷ್ಕಾರ ಮುಂತಾದ ವಿಷಯಗಳಲ್ಲಿ ವಿಶೇಷ ಪ್ರಯತ್ನಗಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಪುಣೆಯ ರಾಷ್ಟ್ರೀಯ ಜಲ ಅಕಾಡೆಮಿ ವಿವಿಧ ಭಾಗೀದಾರರ ಸಾಮರ್ಥ್ಯವರ್ಧನೆಗೆ ಧಾರವಾಡದ ವಾಲ್ಮಿ ಜೊತೆಗೆ ಕೈಜೋಡಿಸಲು ಸಿದ್ಧವಾಗಿದೆ ಎಂದು ಹೇಳಿದರು.
ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ. ಎಂ. ಚಂದ್ರ ಪೂಜಾರಿ ಮಾತನಾಡಿ, ಕೃಷಿ ಮತ್ತು ಗ್ರಾಮೀಣ ಬದುಕು ಅತ್ಯಂತ ಕಠಿಣ ಸಮಸ್ಯೆ ಎದುರಿಸುತ್ತಿದೆ. ಇದಕ್ಕೆ ಮೂಲ ಕಾರಣ ಜಲ ಮತ್ತು ನೆಲ ಸಮಸ್ಯೆ. ಜತೆಗೆ ಯುವಕರು ಕೃಷಿ ತೊರೆಯುತ್ತಿರುವುದು ಕಳವಳಕಾರಿ. ಈ ಎಲ್ಲ ಸಮಸ್ಯೆಗಳು ಹವಾಮಾನ ವೈಪರಿತ್ಯದಿಂದ ಇನ್ನಷ್ಟು ಉಲ್ಬಣಗೊಂಡಿವೆ. ಜಲ ನೆಲ ನಿರ್ವಹಣೆ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ಕೇವಲ ಸರ್ಕಾರಿ ಸಂಸ್ಥೆಗಳು ಶ್ರಮಿಸಿದರೆ ಸಾಧ್ಯವಾಗದು, ಇದು ಒಂದು ಜನಾಂದೋಲನವಾಗಿ ರೂಪುಗೊಳ್ಳಬೇಕೆಂದರು.ಕೃಷಿ ವಿವಿ ಆಡಳಿತಾಧಿಕಾರಿ ಡಾ. ಎಂ.ವಿ. ಮಂಜುನಾಥ, ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಜಲ ನೆಲ ಸಂರಕ್ಷಣೆ ಅತ್ಯಂತ ದೊಡ್ಡ ಸವಾಲಾಗಿ ಉದ್ಭವಿಸಿದೆ. ಈ ಸಮಸ್ಯೆಗಳು ಮತ್ತು ಅವುಗಳ ಪರಿಹಾರಗಳು ವಾಲ್ಮಿ ಸಂಸ್ಥೆ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉದ್ದೇಶಗಳಿಗೆ ಸಮಾನ ಆಗಿರುವುದರಿಂದ ಎರಡೂ ಸಂಸ್ಥೆಗಳು ಕೈ ಜೋಡಿಸಿ ರೈತ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಅಧ್ಯಕ್ಷತೆ ವಹಿಸಿ, ಮುಂಬರುವ ದಿನಗಳಲ್ಲಿ ಜಾಗತಿಕ ಜಲ ಸಂಕಷ್ಠದಿಂದ ಪಾರಾಗಲು ವಾಲ್ಮಿಯ ಪಾತ್ರ ಬಹು ನಿರ್ಣಾಯಕ. ವಾಲ್ಮಿ ಸಂಸ್ಥೆಯನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ವಾಲ್ಮಿ ಸಂಸ್ಥೆಯನ್ನು ಜಲ ನಿರ್ವಹಣೆಯಲ್ಲಿ ಉನ್ನತ ಕೇಂದ್ರ (ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ವಾಟರ್ ಮ್ಯಾನೇಜ್‌ಮೆಂಟ್) ಎಂದು ಘೋಷಿಸಿದೆ ಎಂದರುವಿವಿಧ ಕ್ಷೇತ್ರಗಳ ತಜ್ಞರಾದ ಡಾ. ಮಂಜುನಾಥ ಘಾಟೆ, ಅಶೋಕ ವಾಸನದ, ಆರ್. ನಾಗಣ್ಣ, ಅಭಿಯಂತರರು, ಕಾಡಾ ಇಲಾಖೆಯ ಅಧಿಕಾರಿಗಳು, ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷರು, ಪದಾಧಿಕಾರಿಗಳು, ಬೋಧಕರು, ಸಮಾಲೋಚಕರು ಇದ್ದರು.
;Resize=(128,128))
;Resize=(128,128))
;Resize=(128,128))