ವಾಲ್ಮೀಕಿ ನಿಗಮ ಅಕ್ರಮ - ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಸಚಿವ ಜಾರ್ಜ್

| Published : Jul 12 2024, 01:41 AM IST / Updated: Jul 12 2024, 10:59 AM IST

ವಾಲ್ಮೀಕಿ ನಿಗಮ ಅಕ್ರಮ - ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಸಚಿವ ಜಾರ್ಜ್
Share this Article
  • FB
  • TW
  • Linkdin
  • Email

ಸಾರಾಂಶ

ಹಗರಣದಲ್ಲಿ ಭಾಗಿಯಾದವರು ಯಾರು ಎಂಬುದನ್ನು ಪತ್ತೆ ಹಚ್ಚಲೆಂದೇ ಎಸ್‌ಐಟಿ ರಚನೆ ಮಾಡಿದ್ದೇವೆ.

ಬಳ್ಳಾರಿ: ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಖಂಡಿತ ಶಿಕ್ಷೆಯಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಗರಣದಲ್ಲಿ ಭಾಗಿಯಾದವರು ಯಾರು ಎಂಬುದನ್ನು ಪತ್ತೆ ಹಚ್ಚಲೆಂದೇ ಎಸ್‌ಐಟಿ ರಚನೆ ಮಾಡಿದ್ದೇವೆ. ಈಗಾಗಲೇ ಎಸ್ಐಟಿ ತನಿಖೆ ಆರಂಭಿಸಿದೆ. ರಿಪೋರ್ಟ್ ಬರೋವರೆಗೂ ಕಾಯೋಣ. ತನಿಖೆಯ ವರದಿ ಬಂದಮೇಲೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಈ ವಿಚಾರದಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ. ಈ ಪ್ರಕರಣದಿಂದ ಸರ್ಕಾರಕ್ಕೆ ಯಾವುದೇ ಮುಜುಗರವೂ ಇಲ್ಲ ಎಂದು ಹೇಳಿದರು.

ವಾಲ್ಮೀಕಿ ನಿಗಮದ ಹಗರಣ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಬಿಜೆಪಿಯವರು ಒತ್ತಾಯಿಸುತ್ತಿರುವುದರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಜಾರ್ಜ್, ನಮ್ಮ ಅಧಿಕಾರಿಗಳು ದಕ್ಷ ಅಧಿಕಾರಗಳಲ್ವಾ? ಅವರೇಕೆ ಸಿಬಿಐಗೆ ನೀಡುವಂತೆ ಕೇಳುತ್ತಿದ್ದಾರೆ ? ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಹೀಗಾಗಿಯೇ ಅವರು ಸಿಬಿಐಗೆ ನೀಡಿ ಎಂದು ಒತ್ತಾಯಿಸುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ನಮ್ಮ ರಾಜ್ಯದ ಅಧಿಕಾರಿಗಳು ದಕ್ಷರಿದ್ದು ಪ್ರಕರಣವನ್ನು ಭೇದಿಸುತ್ತಾರೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು.

ಬಿಜೆಪಿ ನಾಯಕರ ಮೇಲೆ ಕೇಸುಗಳಿವೆ. ಆ ಪಕ್ಷದ ಬಹಳಷ್ಟು ಜನ ಬೇಲ್‌ ಮೇಲೆ ಓಡಾಡುತ್ತಿದ್ದಾರೆ. ಅವರು ಭ್ರಮೆಯಲ್ಲಿದ್ದಾರೆ. ಸರ್ಕಾರ ಬೀಳುತ್ತದೆ ಎಂದು ಹಗಲು ಕನಸು ಕಾಣುತ್ತಿದ್ದಾರೆ. ಅವರು ಹೇಳಿದ ಮಾತ್ರಕ್ಕೆ ಸರ್ಕಾರ ಬೀಳುವುದಿಲ್ಲ. ನಮಗೆ ಜನ ಬೆಂಬಲ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.

ಮುಡಾ ಹಗರಣ ಬಿಜೆಪಿಯವರ ಕಾಲದ್ದು. ಈಗ ಅವರೇ ಹೋರಾಟ ಮಾಡುತ್ತಿದ್ದಾರೆ. ಮುಡಾದಲ್ಲಿ ಯಾರು ತಪ್ಪು ಮಾಡಿದರು ಎಂಬುವುದನ್ನು ತನಿಖೆಯಿಂದ ಬಹಿರಂಗವಾಗಲಿದೆ ಎಂದು ತಿಳಿಸಿದರು.

ಸಿಎಂ ಬದಲಾವಣೆ ಬಿಜೆಪಿಗೆ ಮಾತ್ರ ಬೇಕಿದೆ. ಶಾಸಕರಾದವರು ಅನುದಾನ ಕೇಳುತ್ತಿದ್ದು, ಅದು ಅವರ ಕೆಲಸ. ಗ್ಯಾರಂಟಿ ಯೋಜನೆಯಿಂದ ಯಾವುದೇ ಸಮಸ್ಯೆ ಇಲ್ಲ. ಗ್ಯಾರಂಟಿ ಫಲಾನುಭವಿಗಳು ಮಹಿಳೆಯರೇ ಹೆಚ್ಚಿದ್ದಾರೆ. ಗ್ಯಾರಂಟಿ ಹಣ ಜನರಿಗೆ ಅಲ್ವಾ ನಾವು ಕೊಡೋದು. ನಾವು ಜನರಿಗೆ ಯಾವ ಭರವಸೆ ಕೊಟ್ಟಿದ್ವೋ ಅದನ್ನು ಈಡೇರಿಸಿದ್ದೇವೆ. ಆದರೆ, ಬಿಜೆಪಿಯವರು ಪ್ರತಿಯೊಂದಕ್ಕೂ ಆರೋಪ ಮಾಡುತ್ತಿದ್ದಾರೆ. ವಿನಾಕಾರಣದ ಆರೋಪಗಳಿಗೆ ಹೆಚ್ಚು ಅರ್ಥ ಇರುವುದಿಲ್ಲ ಎಂದು ಜಾರ್ಜ್‌ ಪ್ರತಿಕ್ರಿಯಿಸಿದರು.

ವಿದ್ಯುತ್ ದರ ಹೆಚ್ಚಳ ಮಾಡಲ್ಲ: ರಾಜ್ಯದಲ್ಲಿ ವಿದ್ಯುತ್‌ ದರ ಹೆಚ್ಚಳ ಮಾಡುವುದಿಲ್ಲ. ಸದ್ಯಕ್ಕೆ ದರ ಹೆಚ್ಚಳ ಕುರಿತು ಯಾವುದೇ ಚರ್ಚೆ ಮಾಡಿಲ್ಲ. ರಾಜ್ಯದಲ್ಲಿ ಹೆಚ್ಚು ವಿದ್ಯುತ್ ಉತ್ಪಾದನೆ ಆಗುತ್ತಿದೆ. ನಮ್ಮ ರಾಜ್ಯಕ್ಕೆ ವಿದ್ಯುತ್ ಬಳಕೆ ಮಾಡಿ ಬೇರೆಡೆ ಮಾರಾಟ ಮಾಡುವಷ್ಟು ವಿದ್ಯುತ್ ಉತ್ಪಾದನೆ ಇದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.