ವಾಲ್ಮೀಕಿ ನಿಗಮದ ಅವ್ಯವಹಾರ: ಬಿಜೆಪಿಯಿಂದ ಡಿಸಿ ಕಚೇರಿ ಮುತ್ತಿಗೆ

| Published : Jun 27 2024, 01:11 AM IST

ಸಾರಾಂಶ

ಪಕ್ಷದ ನೂರಾರು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಪ್ರಯತ್ನಿಸಿದರು. ಈ ಸಂದರ್ಭ ಪೊಲೀಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯ ಸರ್ಕಾರದಿಂದ ವಾಲ್ಮೀಕಿ ನಿಗಮದ 187 ಕೋಟಿ ರು.ಗಳ ದುರ್ಬಳಕೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಯಿತು.

ಬಿಡದೇ ಸುರಿಯುತ್ತಿದ್ದ ಮಳೆಯಲ್ಲಿಯೇ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ನೇತೃತ್ವದಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಪ್ರಯತ್ನಿಸಿದರು. ಇದಕ್ಕೆ ಮೊದಲೇ ಸಿದ್ದರಾಗಿದ್ದ ಪೊಲೀಸರು ಅವರನ್ನು ಜಿಲ್ಲಾಧಿಕಾರಿ ಕಚೇರಿಯ ಆವರಣದ ಗೇಟು ಮುಚ್ಚಿ ತಡೆದರು.

ಈ ಸಂದರ್ಭ ಪೊಲೀಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಗ್ವಾದ ಕೂಡ ನಡೆಯಿತು. ಕೊನೆಗೆ ಪಕ್ಷದ ಪ್ರತಿನಿಧಿಗಳನ್ನು ಮಾತ್ರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಅವಕಾಶ ನೀಡಲಾಯಿತು.

ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಕೊಡೆಗಳನ್ನು ಹಿಡಿದು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ನುಗ್ಗಲೆತ್ನಿಸಿದಾಗ ಗೊಂದಲ ಉಂಟಾಯಿತು, ನೂಕುನುಗ್ಗಲಿಂದ ಕೊಡಗಳಿದ್ದರೂ ಮಳೆಯಿಂದಾಗಿ ಪೊಲೀಸರು ಕಾರ್ಯಕರ್ತರು ತೊಯ್ದು ತೊಪ್ಪೆಯಾದರು.

ರಾಜ್ಯ ಬಿಜೆಪಿ ರೈತ ಮೋರ್ಚ ಪ್ರ.ಕಾರ್ಯದರ್ಶಿ ಡಾ.ನವೀನ್ ಕುಮಾರ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ಜಿಲ್ಲಾ ಪ್ರ,ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಟ್ಟಾರ್ ರತ್ನಾಕರ ಹೆಗ್ಡೆ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಪಕ್ಷದ ನಾಯಕರಾದ ವಿಖ್ಯಾತ್ ಶೆಟ್ಟಿ, ವಿಜಯ ಕೊಡವೂರು, ಶ್ರೀಕಾಂತ್ ನಾಯಕ್, ಶ್ರೀಶಾ ನಾಯಕ್, ನಯನಾ ಗಣೇಶ್, ವೀಣಾ ಶೆಟ್ಟಿ, ಪ್ರಥ್ವಿರಾಜ್ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.