ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ವಾಲ್ಮೀಕಿ ಸೇವಾ ಸಮಿತಿ ರಾಜ್ಯಾಧ್ಯಕ್ಷ ಕೆಲ್ಲಂಬಳ್ಳಿ ಸೋಮನಾಯಕ ಒತ್ತಾಯಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಹಗರಣ ನಡೆದಿರುವುದು ನಾಯಕ ಸಮಾಜಕ್ಕೆ ತುಂಬಾ ಅನ್ಯಾಯ ಉಂಟಾಗಿದೆ. ಸಚಿವ ನಾಗೇಂದ್ರ ಅವರನ್ನು ಹಣ ವರ್ಗಾವಣೆ ಮಾಡುವಂತೆ ಹೇಳಿರುತ್ತಾರೆ. ಅವರ ಮೇಲೆ ವಿಚಾರಣೆಯಾಗಿ ಅವರನ್ನು ಬಂಧಿಸಿ ಶಿಸ್ತುಕ್ರಮಕೈಗೊಳ್ಳಬೇಕು. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೈವಾಡದಿಂದ ಇಂತಹ ಪ್ರಕರಣ ಜರುಗಲು ಸಾಧ್ಯವಾಗಿದೆ. ಮೊದಲು ಅವರನ್ನು ಬಂಧಿಸಿ, ನಂತರ ಸಚಿವರ ಮೇಲೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ಪರಿಶಿಷ್ಟ ಪಂಗಡ ಸಮುದಾಯದ ನಿವೃತ್ತ ನ್ಯಾಯಾಧೀಶರನ್ನು ನೇಮಿಸಿ ಹಗರಣವನ್ನು ತನಿಖೆ ಮಾಡಿಸುವ ಮೂಲಕ ಸತ್ಯಾಸತ್ಯತೆಯನ್ನು ಹೊರತರಬೇಕು. ನಿಗಮದ ಎಂಡಿಯನ್ನು ಬಂಧಿಸಬೇಕು. ಆತ್ಮಹತ್ಯೆ ಮಾಡಿಕೊಂಡಿರುವ ನಿಗಮದ ಅಧೀಕ್ಷಕ ಚಂದ್ರಶೇಖರನ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ನ್ಯಾಯ ಸಿಗಬೇಕು ಎಂದರು.ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ಪ್ರಕರಣ ಸಂಬಂಧ ಜೂ.16ರ ವರೆಗೆ ಸರ್ಕಾರ ಯಾವುದೇ ಕ್ರಮಕೈಗೊಳ್ಳದಿದ್ದರೆ ಶ್ರೀಮಲೆ ಮಹದೇಶ್ವರ ಬೆಟ್ಟದಿಂದ ಚಾಮರಾಜನಗರ ಜಿಲ್ಲಾಡಳಿತ ಭವನದವರೆಗೆ ಪಾದಯಾತ್ರೆ ನಡೆಸುವುದಾಗಿ ಸರ್ಕಾರವನ್ನು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜುನಾಯಕ, ಮುಖಂಡ ಅಗ್ರಹಾರ ರಂಗಸ್ವಾಮಿನಾಯಕ ಹಾಜರಿದ್ದರು.