ವಾಲ್ಮೀಕಿ ಅಭಿವೃದ್ಧಿ ನಿಗಮ ಆರ್ಥಿಕ ದುರ್ಬಳಕೆ ಇಡಿಗೆ ತನಿಖೆಗೆ ಆಗ್ರಹ

| Published : Jun 07 2024, 01:30 AM IST / Updated: Jun 07 2024, 12:58 PM IST

Karnataka Valmiki Maharshi
ವಾಲ್ಮೀಕಿ ಅಭಿವೃದ್ಧಿ ನಿಗಮ ಆರ್ಥಿಕ ದುರ್ಬಳಕೆ ಇಡಿಗೆ ತನಿಖೆಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸಂಸ್ಥೆಯಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆಯಲ್ಲಿ ಕೋಟ್ಯಂತರ ರು. ಆರ್ಥಿಕ ದುರ್ಬಳಕೆಯಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸಬೇಕು ಎಂದು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಎರಡು ದೂರುಗಳನ್ನು ದಾಖಲಿಸಲಾಗಿದೆ.

 ಬೆಂಗಳೂರು :  ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸಂಸ್ಥೆಯಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆಯಲ್ಲಿ ಕೋಟ್ಯಂತರ ರು. ಆರ್ಥಿಕ ದುರ್ಬಳಕೆಯಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸಬೇಕು ಎಂದು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಎರಡು ದೂರುಗಳನ್ನು ದಾಖಲಿಸಲಾಗಿದೆ.

ಬಿಜೆಪಿ ನಾಯಕ ಎನ್‌.ಆರ್‌.ರಮೇಶ್‌ ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಪ್ರತ್ಯೇಕವಾಗಿ ದೂರು ನೀಡಲಾಗಿದೆ. ನಿಗಮದಲ್ಲಿ 187 ಕೋಟಿ ರು.ಗಿಂತ ಹೆಚ್ಚಿನ ಅಕ್ರಮ ನಡೆದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ನಿಗಮ ಅಧಿಕಾರಿ ಚಂದ್ರಶೇಖರನ್‌ ಅವರು ಮರಣ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾದವರ ಹೆಸರನ್ನು ಉಲ್ಲೇಖಿಸಲಾಗಿದೆ. ಯೂನಿಯನ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಾದ ಜೆ.ಜಿ.ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್ ಜಿ ದುರಗಣ್ಣನವರ್ ಮತ್ತು ಎಂ. ಜಿ. ರಸ್ತೆ ಶಾಖೆಯ ಮುಖ್ಯ ವ್ಯವಸ್ಥಾಪಕಿ ಶುಚಿಸ್ಮಿತಾ ಸೇರಿ ಇತರೆ ಪ್ರಭಾವಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ನಿಗಮದ ಖಾತೆಯಲ್ಲಿದ್ದ 187 ಕೋಟಿ ರು. ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸಚಿವ ಬಿ. ನಾಗೇಂದ್ರ ಮತ್ತು ಅವರ ಅತ್ಯಂತ ಆತ್ಮೀಯರಾದ ನಾಗರಾಜ್ ಎಂಬುವವರೂ ಸಹ ಸದರಿ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ರಮೇಶ್‌ ತಮ್ಮ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

ಎಂ. ಜಿ. ರಸ್ತೆಯ ಶಾಖೆಯಲ್ಲಿದ್ದ ನಿಗಮದ ಉಪ ಖಾತೆಯಿಂದ ತೆಲಂಗಾಣ ರಾಜ್ಯದ ಹೈದರಾಬಾದ್ ನ ಬಂಜಾರ ಹಿಲ್ಸ್ ಪ್ರದೇಶದಲ್ಲಿರುವ ಆರ್‌ಬಿಎಲ್‌ ಶಾಖೆಯಲ್ಲಿ ಖಾತೆಗಳನ್ನು ಹೊಂದಿದ್ದಂತಹ 10 ಖಾಸಗಿ ಸಂಸ್ಥೆಗಳಿಗೆ ಸುಮಾರು 89.62 ಕೋಟಿ ರುಪಾಯಿಗಳಷ್ಟು ಹಣವನ್ನು ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ 11 ಹಂತಗಳಲ್ಲಿ ಹಂತ ಹಂತವಾಗಿ ವರ್ಗಾವಣೆ ಮಾಡಲಾಗಿರುತ್ತದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಹಣಕಾಸು ಖಾತೆಯನ್ನೂ ಸಹ ಹೊಂದಿರುವುದರಿಂದ, ಅವರ ಆದೇಶವಿಲ್ಲದೆ ಅಥವಾ ಅವರ ಗಮನಕ್ಕೆ ಬಾರದೆ ಈ ಅಕ್ರಮ ಹಣ ವರ್ಗಾವಣೆ ಕಾರ್ಯ ನಡೆದಿರುವುದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ಎಲ್ಲಾ ನಿಗಮಗಳ ಖಾತೆಯನ್ನು ವಶಕ್ಕೆ ಪಡೆದು ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

ಕೆಆರ್‌ಎಸ್‌ ಪಕ್ಷದಿಂದಲೂ ದೂರು:

ಇನ್ನು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯ ಸರ್ಕಾರ ಮಾಡಿರುವ ಅಕ್ರಮದ ಹಣವು ಸಾರ್ವಜನಿಕ ಹಣವಾಗಿದೆ. ಇತರೆ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆಯಾಗಿರುವ ಮೊತ್ತದಲ್ಲಿ ಐದು ಕೋಟಿ ರು.ನಷ್ಟು ವಾಪಸ್‌ ಬಂದಿದೆ. ಇನ್ನುಳಿದ ಮೊತ್ತವು ಸಹ ಬರಬೇಕಿದೆ. ಸಾರ್ವಜನಿಕ ಹಣವನ್ನು ದುಬರ್ಳಕೆ ಮಾಡಿಕೊಂಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದೆ.