ವಾಲ್ಮೀಕಿ ಜಾತ್ರೆಯ ಉದ್ದೇಶ ವಾಲ್ಮೀಕಿ ಸಮಾಜವನ್ನು ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಜಾಗೃತಿ ಮೂಡಿಸುವುದಾಗಿದೆ
ಹರಪನಹಳ್ಳಿ: ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಯ ಉದ್ದೇಶ ವಾಲ್ಮೀಕಿ ಸಮಾಜವನ್ನು ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಜಾಗೃತಿ ಮೂಡಿಸುವುದಾಗಿದೆ ಎಂದು ಜಾತ್ರಾ ಸಮಿತಿ ಗೌರವಾದ್ಯಕ್ಷ ಎಚ್.ಕೆ. ಹಾಲೇಶ ತಿಳಿಸಿದ್ದಾರೆ.
ಅವರು ಪಟ್ಟಣದ ಪ್ರವಾಸಿ ಮಂದಿದಲ್ಲಿ ಮಂಗಳವಾರ ವಾಲ್ಮೀಕಿ ಜಾತ್ರಾ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.ವಾಲ್ಮೀಕಿ ಜಾತ್ರೆ ಎಂದರೆ ಸಮಾಜವನ್ನು ಜಾಗೃತಿ ಮೂಡಿಸುವುದು ಹಾಗೂ ನಮಗೆ ಸಿಗುವ ಸೌಲಭ್ಯಗಳ ಕುರಿತು ಸಮಾಜದವರಿಗೆ ಅರಿವು ಮೂಡಿಸುದಾಗಿದೆ ಎಂದು ಸ್ಪಷ್ಟಪಡಿಸಿದರು.
ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಫೆ.8, 9ರಂದು ವಾಲ್ಮೀಕಿ ಜಾತ್ರೆ ರಾಜನಹಳ್ಳಿಯಲ್ಲಿ ನಡೆಯಲಿದೆ. ವಾಲ್ಮೀಕಿ ಪೀಠ ಸ್ಥಾಪನೆಯಾಗಿ 28 ವರ್ಷವಾಗಿದ್ದು, ಲಿಂ.ಪುಣ್ಯಾನಂದ ಪುರಿ ಸ್ವಾಮೀಜಿಯ ಪುಣ್ಯಾರಾಧನೆ ಹಾಗೂ ಈಗಿನ ಸ್ವಾಮೀಜಿ ಪ್ರಸನ್ನಾನಂದ ಸ್ವಾಮೀಜಿ ಪಟ್ಟಾಭಿಷೇಕದ ಕಾರ್ಯಕ್ರಮಗಳು ನಡೆಯುತ್ತವೆ ಎಂದು ತಿಳಿಸಿದರು.ರಾಜ್ಯ ಸರ್ಕಾರ ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಿಸಿದೆ. ಆದರೆ ಕೇಂದ್ರ ಸರ್ಕಾರ ಶೆಡ್ಯುಲ್ 9ರಲ್ಲಿ ಸೇರಿಸಿಲ್ಲ. ಶೆಡ್ಯುಲ್ 9ರಲ್ಲಿ ಸೇರಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದು, ಬೆಂಗಳೂರು ಬಳಿ ರಾಜ್ಯ ಸರ್ಕಾರ ನಮ್ಮ ಸಮಾಜಕ್ಕೆ ನೀಡಿರುವ 2 ಎಕರೆ ಜಮೀನಿನಲ್ಲಿ ಎಸ್ಟಿ ನಿಗಮ, ಐಎಎಸ್ ಹಾಗೂ ಕೆಎಸ್‌ಎಸ್ ತರಬೇತಿ ಕೇಂದ್ರ ಸ್ಥಾಪಿಸಲು ಮನವಿ ಮಾಡಬೇಕಿದೆ ಎಂದು ಅವರು ಹೇಳಿದರು.
ವಾಲ್ಮೀಕಿ ಜಾತ್ರೆಗೆ ತಾಲೂಕಿನ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಕೋರಿದರು.ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷ ಆರ್.ಲೋಕೇಶ ಮಾತನಾಡಿ, ತಾಲೂಕಿನ ಪ್ರತಿ ಹಳ್ಳಿಗಳಿಗೂ ಕಳೆದ 11 ದಿನಗಳಿಂದ ತೆರಳಿ ಜಾತ್ರೆ ಹಾಗೂ ಸಮಾಜದ ಸಂಘಟನೆ ಕುರಿತು ಅರಿವು ಮೂಡಿಸುವ ಕೆಲಸ ಮಾಡಿದ್ದೇವೆ. ತನುಮನದಿಂದ ಜಾತ್ರೆಗೆ ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು.
ವಾಲ್ಮೀಕಿ ನಾಯಕ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಎಚ್.ಟಿ. ವನಜಾಕ್ಷಮ್ಮ ಶಿವಯೋಗಿ ಮಾತನಾಡಿ, ತಾಲೂಕಿನ ಸಮಾಜದವರು ವಾಲ್ಮೀಕಿ ಜಾತ್ರೆಯ ಯಶಸ್ವಿಗೆ ಸಹಕರಿಸಿ ಎಂದು ಮನವಿ ಮಾಡಿದರು.ವಾಲ್ಮೀಕಿ ಸಮಾಜದ ಮುಖಂಡರಾದ ಶಿಂಗ್ರಿಹಳ್ಳಿ ನಾಗರಾಜ, ವಕೀಲ ಮಂಜುನಾಥ, ಕೆ.ಉಚ್ಚೆಂಗೆಪ್ಪ, ಗಿಡ್ಡಹಳ್ಳಿ ನಾಗರಾಜ, ಕೆಂಗಳ್ಳಿ ಪ್ರಕಾಶ, ತೆಲಿಗಿ ಅಂಜಿನಪ್ಪ, ಗಿರಜ್ಜಿ ನಾಗರಾಜ, ಪಟ್ನಾಮದ ಪರಶುರಾಮ, ಆಲೂರು ಶ್ರೀನಿವಾಸ, ಗುಂಡಿ ಮಂಜುನಾಥ, ದಾದಾಪುರ ಶಿವಾನಂದ, ರಾಜು ಪೂಜಾರ, ಚಿಕ್ಕೇರಿ ವೆಂಕಪ್ಪ, ಲಕ್ಷ್ಮಿಚಂದ್ರಶೇಖರ, ರತ್ನಮ್ಮ, ತೆಲಿಗಿ ಶಿವಣ್ಣ, ಚಂದ್ರಪ್ಪ ತಳವಾರ, ಟಿ.ಬಿ.ರಾಜಪ್ಪ, ಸುರೇಶ ಮಂಡಕ್ಕಿ ಇದ್ದರು.