ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ ಅನ್ವರ್ ಮಾಣಿಪ್ಪಾಡಿಗೆ ₹150 ಕೋಟಿ ಆಮಿಷವೊಡ್ಡಿದ್ದಷ್ಟೇ ಅಲ್ಲ, ವಾಲ್ಮೀಕಿ ನಿಗಮ, ವಕ್ಫ್ ಭೂ ಕಬಳಿಕೆ, ಮುಡಾ ಸೈಟ್ ಹಗರಣ, ನಿಮ್ಮ ಅಧಿಕಾರವಧಿಯ ವರ್ಗಾವಣೆ ದಂಧೆ ಪ್ರಕರಣಗಳನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಆಸ್ತಿ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ವರ್ ಮಾಣಿಪ್ಪಾಡಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ₹150 ಕೋಟಿ ಆಮಿಷ ಒಡಿದ್ದಾರೆಂದು ಆರೋಪಿಸಿ, ಪ್ರಕರಣ ಸಿಬಿಐಗೆ ಒಪ್ಪಿಸುವ ಹೇಳಿಕೆ ಸಿದ್ದರಾಮಯ್ಯ ನೀಡಿದ್ದಾರೆ. ತಮ್ಮ ಹಾಗೂ ತಮ್ಮ ಸರ್ಕಾರದ ಮೇಲಿನ ಆರೋಪ, ಹಗರಣ, ಭ್ರಷ್ಟಾಚಾರ ಪ್ರಕರಣಗಳನ್ನೂ ಸಿಬಿಐ ತನಿಖೆಗೆ ಕೊಡಲಿ ಎಂದರು.ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆ ಎನ್ನುತ್ತಿದ್ದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರಿಗೆ ಈಗ ಸಿಬಿಐ ಮೇಲೆ ನಂಬಿಕೆ ಬಂದಂತಿದೆ. ಅನ್ವರ್ ಮಾಣಿಪ್ಪಾಡಿ ವಕ್ಫ್ ಆಸ್ತಿಗಳನ್ನು ಕಬಳಿಸಿದವರ ಬಗ್ಗೆ ವರದಿ ಸಂಗ್ರಹಿಸಿ, ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಬಿಜೆಪಿ ನಾಯಕರಾರೂ ವಕ್ಫ್ ಆಸ್ತಿ ಕಬಳಿಸಿಲ್ಲ. ವಕ್ಪ್ ಆಸ್ತಿ ನುಂಗಿದವರಲ್ಲಿ ಬಹುತೇಕರು ಕಾಂಗ್ರೆಸ್ ಮುಖಂಡರಿದ್ದಾರೆ ಎಂದು ಆರೋಪಿಸಿದರು.
ಬೆಳಗಾವಿ ಸುವರ್ಣ ಸೌಧದಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆ ಬಗ್ಗೆ ಚರ್ಚಿಸಬೇಕಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ, ಸಚಿವರು ಗಂಭೀರ ಚರ್ಚೆ ಬದಲು, ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ₹30 ಕೋಟಿ ಖರ್ಚು ಮಾಡಿ, ಬೆಳಗಾವಿ ಅಧಿವೇಶನ ಮಾಡುತ್ತಿದ್ದೀರಿ? ತೆರಿಗೆ ರೂಪದಲ್ಲಿ ಜನ ಕೊಟ್ಟ ಹಣ ವ್ಯರ್ಥ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.2 ಎ ಮೀಸಲಾತಿಗಾಗಿ ಹೋರಾಟ ನಡೆಸಿದ್ದ ಶ್ರೀಗಳು, ಸಮಾಜ ಬಾಂಧವರ ಮೇಲೆ ಸಿದ್ದರಾಮಯ್ಯ ಸರ್ಕಾರ ಲಾಠಿ ಪ್ರಹಾರ ಮಾಡಿ, ಹೋರಾಟ ಹತ್ತಿಕ್ಕುವ ದುಸ್ಸಾಹ ಮಾಡಿದೆ. ಬಿಎಸ್ವೈ ವಿರುದ್ಧ ಕೇಸ್ ದಾಖಲಿಸಿದ್ದ ಮಹಿಳೆ ಹಿಂದೆ ಐಎಎಸ್ ಅಧಿಕಾರಿಗಳು, ವಕೀಲರು ಇತರರು ಹೀಗೆ 52 ಜನರ ಮೇಲೆ ದೂರು ನೀಡಿದ್ದಾರೆಂದು ಹಿಂದೆ ಇದೇ ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದ್ದರು. ಆದರೆ, ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ಹಾಕಲು ಕಾಂಗ್ರೆಸ್ ಹೊರಟಿದೆ ಎಂದು ಟೀಕಿಸಿದರು.
ಪಕ್ಷದ ಮುಖಂಡರಾದ ರಾಜು ವೀರಣ್ಣ, ಪ್ರವೀಣ ಜಾಧವ್, ಜಯಣ್ಣ, ಪಂಜು ಪೈಲ್ವಾನ್, ದಯಾನಂದ, ಸುಮಂತ್, ಚಂದ್ರು ಪಾಟೀಲ, ಧರ್ಮರಾಜ, ಶಿವಕುಮಾರ ಎಣ್ಣೇರ, ಮಂಜುನಾಥ ಇತರರು ಇದ್ದರು.- - -
ಕೋಟ್ ಬೆಳೆ ಪರಿಹಾರ ಇಲ್ಲ, ಮನೆ ಪರಿಹಾರ ಇಲ್ಲ, ರಸ್ತೆಗೆ ಒಂದು ಪುಟ್ಟಿ ಸಿಮೆಂಟ್ ಹಾಕಿಲ್ಲ. ಅಭಿವೃದ್ಧಿ ಇಲ್ಲದ ಸರ್ಕಾರ ಇದು. ಇದನ್ನು ಪ್ರಶ್ನಿಸಿದವರಿಗೆ ನೋಟೀಸ್ ನೀಡುತ್ತೀರಿ. ಇದೇನು ಹಿಟ್ಲರ್ ಆಡಳಿತವಾ? ಕಾವಿ ವಿರೋಧಿ, ಟಿಪ್ಪು ಸರ್ಕಾರ ಇದಾಗಿದೆ. ಸಿದ್ದರಾಮಯ್ಯನವರೆ, ನಿಮ್ಮ ಹಿಟ್ಲರ್‌ನಂತಹ ವರ್ತನೆಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ಇದೇ ಮುಂದುವರಿದರೆ ಪರಿಣಾಮ ನೆಟ್ಟಗಿರದು- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ
- - - -16ಕೆಡಿವಿಜಿ5: ದಾವಣಗೆರೆಯಲ್ಲಿ ಸೋಮವಾರ ಮಾಜಿ ಸಚಿವ ರೇಣುಕಾಚಾರ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.