ಮಾನವೀಯ ಮೌಲ್ಯಭರಿತ ಪವಿತ್ರ ಗ್ರಂಥ ವಾಲ್ಮೀಕಿ ರಾಮಾಯಣ
KannadaprabhaNewsNetwork | Published : Oct 29 2023, 01:01 AM IST
ಮಾನವೀಯ ಮೌಲ್ಯಭರಿತ ಪವಿತ್ರ ಗ್ರಂಥ ವಾಲ್ಮೀಕಿ ರಾಮಾಯಣ
ಸಾರಾಂಶ
ವಾಲ್ಮೀಕಿ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ
ಕನ್ನಡಪ್ರಭವಾರ್ತೆ ತೀರ್ಥಹಳ್ಳಿ ಮಾನವೀಯ ಮೌಲ್ಯಗಳ ಮೂಲಕ ಜನರ ಹೃದಯವನ್ನು ಅರಳಿಸುವ ಪವಿತ್ರ ಗ್ರಂಥ ರಾಮಾಯಣ ಕೃತಿಯನ್ನು ರಚಿಸಿರುವ ದಾರ್ಶನಿಕ ವಾಲ್ಮೀಕಿ ಮಹರ್ಷಿ ಕಾಡುಪ್ರಾಣಿಗಳಲ್ಲಿರುವ ವಿಶಾಲ ಹೃದಯವಂತಿಕೆಯನ್ನೂ ಗ್ರಹಿಸಿದವರು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ತಾಲೂಕು ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಶನಿವಾರ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ, ವಾಲ್ಮೀಕಿ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ಮಹರ್ಷಿಗಳ ಬದುಕಿನ ಮೌಲ್ಯ ಸರ್ವಕಾಲಕ್ಕೂ ಪ್ರಸ್ತುತವಾಗಿದೆ. ಅಧ್ಯಯನಕ್ಕೂ ಯೋಗ್ಯವಾಗಿದೆ. ಮನುಕುಲಕ್ಕೆ ಮಾರ್ಗಸೂಚಿ ಆಗಿರುವ ದಾರ್ಶನಿಕರ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ, ಯುವಜನತೆ ಮೇಲೆ ಪರಿಣಾಮ ಬೀರಬೇಕು. ಆದರೆ, ಕೇವಲ ಕಾಟಾಚಾರಕ್ಕೆ ನಡೆಯುತ್ತಿರುವುದು ವಿಷಾದನೀಯ. ಕೆಲವೊಂದು ಕಾರ್ಯಕ್ರಮಗಳು ರಾಜಕೀಯ ಪಕ್ಷಗಳಿಂದ ನಡೆಯುವ ಜನಾಂಗದ ತುಷ್ಠೀಕರಣವೂ ಆಗಿದೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಭಾಷಣಕಾರ ಗುಡ್ಡೇಕೇರಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಮಂಜುಬಾಬು ಮಾತನಾಡಿ, ಭಾರತೀಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತೀಕದಂತಿರುವ ವಾಲ್ಮೀಕಿ ಮಹರ್ಷಿಯಂತಹ ದಾರ್ಶನಿಕರನ್ನು ಒಂದು ಜಾತಿಗೆ ಸೀಮಿತಗೊಳಿಸದೇ ಅವರನ್ನು ಅನುಸರಿಸುವಂತಾಗಬೇಕು. ರಾಮಾಯಣ ಮತ್ತು ಮಹಾಭಾರತ ಗ್ರಂಥಗಳು ಭಾರತ ವಿಶ್ವಕ್ಕೆ ನೀಡಿದ ಕೊಡುಗೆಯಾಗಿದೆ ಎಂದು ಹೇಳಿದರು. ಪಪಂ ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ ಮಾತನಾಡಿ, ವಾಲ್ಮೀಕಿ ಮಹರ್ಷಿಗಳ ಆದರ್ಶ ಮನುಕುಲಕ್ಕೆ ಮಾರ್ಗಸೂಚಿಯಾಗಿದೆ. ಇಂಥ ಆಚರಣೆಗಳು ಒಂದೇ ಜಾತಿಗೆ ಸೀಮಿತವಾಗಿ ನಡೆಯದೇ ಅನ್ಯೂನತೆಯಿಂದ ಎಲ್ಲ ಜಾತಿ- ಧರ್ಮದವರೂ ಸೇರಿ ಆಚರಿಸುವಂತಾಗಬೇಕು ಎಂದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪಪಂ ಅಧ್ಯಕ್ಷೆ ಗೀತಾ ರಮೇಶ್, ತಹಸೀಲ್ದಾರ್ ಎಂ.ಲಿಂಗರಾಜ್, ವಾಲ್ಮೀಕಿ ಸಂಘಧ ಅಧ್ಯಕ್ಷ ರಾಘವೇಂದ್ರ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ತಾಪಂ ಇಒ ಎಂ.ಶೈಲಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಆಶಾಲತಾ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್, ಡಾ.ಗಣೇಶ್ ಕಾಮತ್ ಹಾಗೂ ಡಾ. ರವಿಶಂಕರ ಉಡುಪ, ದಲಿತ ಸಂಘರ್ಷ ಸಮಿತಿಯ ವರಲಕ್ಷ್ಮೀ ಹಾಗೂ ಮಂಜುನಾಥ್ ಇದ್ದರು. ಸೂರತ್ ಭಟ್ ಕಾರ್ಯಕ್ರಮ ನಿರ್ವಹಿಸಿದರು. - - - -28ಟಿಟಿಎಚ್01: ವಾಲ್ಮೀಕಿ ಮಹರ್ಷಿ ಜಯಂತಿ ಅಂಗವಾಗಿ ಶನಿವಾರ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.