ಸಾರಾಂಶ
ಸಿಂಧನೂರಿನ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿ ಜಯಂತಿ ಆಚರಿಸಿದರು.
ಸಿಂಧನೂರು: ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಗುರುವಾರ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿ ಜಯಂತಿ ಆಚರಿಸಿದರು.ತಾಲೂಕು ಆಡಳಿತ ವತಿಯಿಂದ ಗುರುವಾರ ತಹಸೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅರುಣ ದೇಸಾಯಿ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ಸಾರ್ವಕಾಲಿಕವಾದ ರಾಮಾಯಣವನ್ನು ರಚಿಸುವ ಮೂಲಕ ಮನುಕುಲ ಹೇಗೆ ಜೀವಿಸಬೇಕು ಎನ್ನುವ ಸಂದೇಶ ನೀಡಿದ್ದಾರೆ. ಅವರ ಸಂದೇಶ ಯಾವುದೇ ಗಡಿರೇಖೆಗೆ ಸೀಮಿತವಾಗಿಲ್ಲ. ರಾಮಾಯಣವು ದೇಶದ ಸಂಸ್ಕೃತಿಯನ್ನು ಸಾರುತ್ತದೆ. ಆದ್ದರಿಂದ ಮಹರ್ಷಿ ವಾಲ್ಮೀಕಿಯನ್ನು ಕೇವಲ ನಾಯಕ ಜನಾಂಗಕ್ಕೆ ಸೀಮಿತಗೊಳಿಸದೆ ಎಲ್ಲ ಜಾತಿ ಜನಾಂಗದವರು ಗೌರವಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ನಗರಸಭೆಯ ಪೌರಾಯುಕ್ತ ಮಂಜುನಾಥ ಗುಂಡೂರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಭೀಮಪ್ಪ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ, ಸಮಾಜದ ಮುಖಂಡರು ಉಪಸ್ಥಿತರಿದ್ದರು.