ಸಾರಾಂಶ
ವಿಶೇಷ ತನಿಖಾ ತಂಡವು (ಎಸ್‌ಐಟಿ), ನಿಗಮದ ಹಣದಲ್ಲಿ ‘ಹೈದರಾಬಾದ್ ಗ್ಯಾಂಗ್’ನ ಮಾಸ್ಟರ್ ಮೈಂಡ್ ಎನ್ನಲಾದ ಸತ್ಯನಾರಾಯಣ್ ವರ್ಮಾ ಖರೀದಿಸಿದ್ದ 10 ಕೆ.ಜಿ.ಚಿನ್ನವನ್ನು ವಶಪಡಿಸಿಕೊಂಡಿದೆ.
ಬೆಂಗಳೂರು : ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಭರ್ಜರಿ ಯಶಸ್ವಿ ಕಾರ್ಯಾಚರಣೆ ನಡೆಸಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ), ನಿಗಮದ ಹಣದಲ್ಲಿ ‘ಹೈದರಾಬಾದ್ ಗ್ಯಾಂಗ್’ನ ಮಾಸ್ಟರ್ ಮೈಂಡ್ ಎನ್ನಲಾದ ಸತ್ಯನಾರಾಯಣ್ ವರ್ಮಾ ಖರೀದಿಸಿದ್ದ 10 ಕೆ.ಜಿ.ಚಿನ್ನವನ್ನು ವಶಪಡಿಸಿಕೊಂಡಿದೆ.
ಹೈದರಾಬಾದ್ ನಗರದ ವರ್ಮಾನ ಆಪ್ತರ ಮನೆಗಳಲ್ಲಿ ಅವಿತಿಟ್ಟಿದ್ದ 10 ಕೆ.ಜಿ ಚಿನ್ನ ಜಪ್ತಿ ಮಾಡಿದ ಎಸ್‌ಐಟಿ, ಇನ್ನುಳಿದ 5 ಕೆ.ಜಿ ಚಿನ್ನಕ್ಕೆ ಶೋಧ ಕಾರ್ಯ ಮುಂದುವರೆಸಿದೆ. ಅದಷ್ಟು ಶೀಘ್ರ ಬಾಕಿ ಚಿನ್ನವು ಜಪ್ತಿಯಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಾಲ್ಮೀಕಿ ನಿಗಮದಿಂದ ಅಕ್ರಮವಾಗಿ ವರ್ಗಾವಣೆಯಾಗಿದ್ದ ಹಣವನ್ನು ನಗದು ಮಾಡಿಕೊಳ್ಳಲು 15 ಕೆಜಿ ಚಿನ್ನವನ್ನು ವರ್ಮಾ ಖರೀದಿಸಿದ್ದ ಸಂಗತಿ ತನಿಖೆಯಲ್ಲಿ ಪತ್ತೆಯಾಗಿತ್ತು. ಹೈದರಾಬಾದ್ ನಗರದ ಪ್ರಮುಖ ಜ್ಯುವೆಲ್ಲರ್ಸ್‌ವೊಂದರಲ್ಲೇ ಅಧಿಕೃತವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿ 6 ಕೆಜಿ ಚಿನ್ನ ಖರೀದಿಸಿದ್ದ. ಇನ್ನುಳಿದ ಎಂಟು ಚಿನ್ನವನ್ನು ಆತ ಕಾಳಸಂತೆಯಲ್ಲಿ ಕೊಂಡಿದ್ದ. ಈ ಚಿನ್ನ ಖರೀದಿಗೆ ಬಗ್ಗೆ ವಿಚಾರಣೆ ವೇಳೆ ನಾಲ್ವರು ಚಿನ್ನದ ವ್ಯಾಪಾರಿಗಳು ಒಪ್ಪಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಜಪ್ತಿ ಚಿನ್ನಕ್ಕೆ ಇಂದಿನ ಮಾರುಕಟ್ಟೆ ಮೌಲ್ಯ:
ಆರೋಪಿಯಿಂದ ಜಪ್ತಿಯಾದ ಚಿನ್ನವನ್ನು ಇಂದಿನ ಮಾರುಕಟ್ಟೆ ಮೌಲ್ಯ ಆಧರಿಸಿ ದರ ನಿಗದಿಪಡಿಸಲಾಗುತ್ತದೆ. ಹೀಗಾಗಿ 4 ತಿಂಗಳ ಹಿಂದೆ ಸುಮಾರು 11 ಕೋಟಿ ರು. ಕೊಟ್ಟು 15 ಕೆಜಿ ಚಿನ್ನ ಖರೀದಿಸಿದ್ದ. ಆದರೆ ಕೇಂದ್ರ ಸರ್ಕಾರದ ಬಜೆಟ್ ಬಳಿಕ ಚಿನ್ನದ ಬೆಲೆ ಇಳಿಕೆಯಾಗಿದೆ. ಈಗ ಆ ದರವನ್ನು ಆಧರಿಸಿ ಜಪ್ತಿ ಚಿನ್ನಕ್ಕೆ ಬೆಲೆ ನಿಗದಿಯಾಗಲಿದೆ ಎಂದು ಎಸ್‌ಐಟಿ ಮೂಲಗಳು ಹೇಳಿವೆ.
ಎರಡು ಫ್ಲ್ಯಾಟ್‌ಗಳ ಬಗ್ಗೆ ಪರಿಶೀಲನೆ?:
ನಿಗಮದ ಹಣ ಬಳಸಿಕೊಂಡು ಹೈದರಾಬಾದ್‌ನಲ್ಲಿ ಎರಡು ಫ್ಲ್ಯಾಟ್‌ಗಳನ್ನು ವರ್ಮಾ ಖರೀದಿಸಿದಿರುವ ಮಾಹಿತಿ ಇದೆ. ಆದರೆ ಈ ಬಗ್ಗೆ ದಾಖಲೆಗಳ ಪರಿಶೀಲನೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಗಮದ ಹಣ ಬಳಸಿ ಖರೀದಿಸಿದ್ದ ಚಿನ್ನದ ಬಗ್ಗೆ ವರ್ಮಾ ಮಾಹಿತಿ ನೀಡಲು ನಿರಾಕರಿಸಿದ್ದ. ತನಗೇನು ಗೊತ್ತಿಲ್ಲ ಎಂದೇ ಆತ ಹೇಳುತ್ತಿದ್ದ. ಆದರೆ ದಾಖಲಾತಿಗಳನ್ನು ಮುಂದಿಟ್ಟು ಪ್ರಶ್ನಿಸಿದ್ದಾಗ ಕೊನೆಗೆ ಅಡಗಿಸಿಟ್ಟಿದ್ದ ಚಿನ್ನದ ಮೂಲದ ಬಗ್ಗೆ ಆತ ಬಾಯ್ಬಿಟ್ಟ. ಅಲ್ಲದೆ ಆತನ ಮತ್ತೊಬ್ಬ ಸಹಚರ ಕಾಕಿ ಶ್ರೀನಿವಾಸ್ ವಿಚಾರಣೆ ವೇಳೆ ಕೂಡ ಚಿನ್ನದ ಸಂಬಂಧ ಮಹತ್ವದ ಮಾಹಿತಿ ಸಿಕ್ಕಿತು. ಈ ಸುಳಿವು ಆಧರಿಸಿ ಹೈದರಾಬಾದ್‌ನಲ್ಲಿ ವರ್ಮಾನ ಸ್ನೇಹಿತರ ಅಪಾರ್ಟ್‌ಮೆಂಟ್‌ಗಳ ಫ್ಲ್ಯಾಟ್‌ನಲ್ಲಿ 10 ಕೆಜಿ ಚಿನ್ನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
)
;Resize=(128,128))
;Resize=(128,128))
;Resize=(128,128))
;Resize=(128,128))