ಮನಃಸಾಕ್ಷಿ ಇದ್ದರೆ ಬದಲಾವಣೆ ಸಾಧ್ಯ ಎಂದು ತೋರಿಸಿದ ವಾಲ್ಮೀಕಿ: ಸ್ಟೆಲ್ಲಾ ಪಿಂಟೋ

| Published : Oct 09 2025, 02:01 AM IST

ಮನಃಸಾಕ್ಷಿ ಇದ್ದರೆ ಬದಲಾವಣೆ ಸಾಧ್ಯ ಎಂದು ತೋರಿಸಿದ ವಾಲ್ಮೀಕಿ: ಸ್ಟೆಲ್ಲಾ ಪಿಂಟೋ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆಯ ಸಹಯೋಗದಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟನೆ ನೆರವೇರಿತು.

ಪುತ್ತೂರು: ಬದುಕಿನಲ್ಲಿ ತಪ್ಪು ಮಾಡಿದ್ದರೂ ಬಳಿಕ ಅರಿವು ಪಡೆದುಕೊಂಡು ತಪ್ಪುಗಳ ಹಂಚಿಕೆ ವಿಚಾರದಲ್ಲಿ ಹೆಂಡತಿ, ಮಕ್ಕಳೊಂದಿಗೆ ಚರ್ಚಿಸಿ ಸುಧಾರಣೆಯ ದಾರಿ ಹುಡುಕುವ ಮೂಲಕ ಮುಂದೆ ದೊಡ್ಡ ಕಾವ್ಯ ರಚನೆಗೆ ಕಾರಣಕರ್ತರಾದ ಮಹರ್ಷಿ ವಾಲ್ಮೀಕಿ ಮನಃಸಾಕ್ಷಿ ಇದ್ದಲ್ಲಿ ಯಾವುದೇ ಬದಲಾವಣೆ ಸಾಧ್ಯ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅಭಿಪ್ರಾಯಪಟ್ಟಿದ್ದಾರೆ.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆಯ ಸಹಯೋಗದಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿದರು. ವಾಲ್ಮೀಕಿ ಸಂಸ್ಮರಣಾ ಉಪನ್ಯಾಸ ನೀಡಿದ ಸಂಪ್ಯದ ಅಕ್ಷಯ ಕಾಲೇಜಿನ ಉಪನ್ಯಾಸಕಿ ರಶ್ಮಿತಾ ಸುರೇಶ್ ಜೋಗಿಬೆಟ್ಟು, ಸತ್ಯ, ಧರ್ಮ ಹಾಗೂ ನಿಷ್ಠೆಯನ್ನು ಜಗತ್ತಿಗೆ ಸಾರಿದ ಮಹರ್ಷಿ ವಾಲ್ಮೀಕಿ ಸಾಮಾಜಿಕ ಅಭಿವೃದ್ಧಿಯ ಸಂದೇಶ ನೀಡಿದ್ದಾರೆ. ಯಾರನ್ನೋ ಆದರ್ಶವಾಗಿಸುವ ಬದಲು ನಮಗೆ ನಾವೇ ಆದರ್ಶವಾಗಬೇಕು ಎಂಬ ಸತ್ಯವನ್ನು ಶ್ರೀರಾಮನ ಮೂಲಕ ಸಾರಿದ್ದಾರೆ ಎಂದರು.ಧರ್ಮ, ಜಾತಿಗಿಂತಲೂ ಸ್ವಚ್ಛ ಬದುಕು ಅಗತ್ಯ ಎಂಬ ನಿಲುವು ರಾಮಾಯಣದ ಉದ್ದಕ್ಕೂ ನಾವು ಕಾಣಬಹುದಾಗಿದೆ. ಇಂತಹ ಶ್ರೇಷ್ಠವಾದ ಕಾವ್ಯ ಸೂರ್ಯ-ಚಂದ್ರ ಇರವ ತನಕವೂ ನಮ್ಮೊಂದಿಗೆ ಇರುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ನಾಗರಾಜ್ ಮಾತನಾಡಿ, ವಾಲ್ಮೀಕಿ ಸಮಾಜದ ಜನತೆ ತಮ್ಮ ಮಕ್ಕಳಿಗೆ ವಿದ್ಯೆ ಸಮರ್ಪಕವಾಗಿ ನೀಡುವಲ್ಲಿ ಮುಂದಾಗಬೇಕು. ಶಿಕ್ಷಣ ಪಡೆದ ಮಕ್ಕಳು ಸಮಾಜದ ಮೌಲ್ಯಗಳಾಗಿ ಬೆಳೆಯುತ್ತಾರೆ ಎಂದರು.ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ನಗರಸಭೆಯ ಪೌರಾಯುಕ್ತೆ ವಿದ್ಯಾ ಎಸ್ ಕಾಳೆ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಮಾತನಾಡಿದರು. ವಾಲ್ಮೀಕಿ ಸಮಾಜದ ಮುಖಂಡ ರಾಜು ಬಪ್ಪಳಿಗೆ ಇದ್ದರು.

ಸಮಾಜ ಕಲ್ಯಾಣ ಇಲಾಖಾ ಸಹಾಯಕ ನಿರ್ದೇಶಕಿ ಸುನಿತಾ ಕುಮಾರಿ ಸ್ವಾಗತಿಸಿದರು. ಕೊಂಬೆಟ್ಟು ವಸತಿ ನಿಲಯದ ಮೇಲ್ವಿಚಾರಕಿ ಸವಿತಾ ವಂದಿಸಿದರು. ಶ್ರೀಕಲಾ ನಿರೂಪಿಸಿದರು.