ವಾಲ್ಮೀಕಿ ಬರೆದ ರಾಮಾಯಣ ಆದಿಕಾವ್ಯ: ಪ್ರೊ.ರಾಮಕೃಷ್ಣ ಭಟ್ಟ

| Published : Aug 04 2025, 12:30 AM IST

ವಾಲ್ಮೀಕಿ ಬರೆದ ರಾಮಾಯಣ ಆದಿಕಾವ್ಯ: ಪ್ರೊ.ರಾಮಕೃಷ್ಣ ಭಟ್ಟ
Share this Article
  • FB
  • TW
  • Linkdin
  • Email

ಸಾರಾಂಶ

ವಾಲ್ಮೀಕಿ ಬರೆದ ರಾಮಾಯಣ ಆದಿಕಾವ್ಯ. ಒಂದು ಕಾವ್ಯಕ್ಕೆ ಇರಬೇಕಾದ ಎಲ್ಲ ಲಕ್ಷಣಗಳಿಂದ ಕೂಡಿದ ಕಾವ್ಯ ಇದಾಗಿದೆ.

ಶಿರಸಿ: ವಾಲ್ಮೀಕಿ ಬರೆದ ರಾಮಾಯಣ ಆದಿಕಾವ್ಯ. ಒಂದು ಕಾವ್ಯಕ್ಕೆ ಇರಬೇಕಾದ ಎಲ್ಲ ಲಕ್ಷಣಗಳಿಂದ ಕೂಡಿದ ಕಾವ್ಯ ಇದಾಗಿದೆ. ಇದರಲ್ಲಿ ಬರುವ ಭರತನ ಪಾತ್ರವು ಭ್ರಾತೃಪ್ರೇಮ ಹೇಗಿರಬೇಕು ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದೆ ಎಂದು ಸಿದ್ದಾಪುರದ ಎಂಜಿಸಿ ಕಾಲೇಜಿನ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಪ್ರೊ.ರಾಮಕೃಷ್ಣ ಭಟ್ಟ ಹೇಳಿದರು.

ಅವರು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ರಾಜರಾಜೇಶ್ವರೀ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಸಂಸ್ಕೃತ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಉಪನ್ಯಾಸಕರಾಗಿ ಮಾತನಾಡಿದರು.

ಭರತನು ತಾಯಿ ಕೈಕೇಯಿಯು ಕೇಳಿದ ವರದಿಂದಾಗಿ ಲಭಿಸಿದ ರಾಜ್ಯವನ್ನು ಅನುಭವಿಸಬಹುದಿತ್ತು. ಆದರೆ ಅಣ್ಣನ ಮೇಲಿನ ಪ್ರೀತಿಯಿಂದಾಗಿ ಅದನ್ನು ಅಣ್ಣನಿಗಾಗಿಯೇ ಕಾಯ್ದಿರಿಸಿದ. ಅದು ಅವನಿಗೇ ಸಲ್ಲಬೇಕಾದುದೆಂದು ಪ್ರತಿಪಾದಿಸಿದ. ವನವಾಸದಿಂದ ಅಣ್ಣ ಬರುವವರೆಗೂ ಅಣ್ಣನಂತೆಯೇ ಹಣ್ಣು-ಹಂಪಲುಗಳನ್ನು ತಿಂದು ಬದುಕಿದ. ನೆಲದ ಮೇಲೆ ಮಲಗಿದ. ಯಾವುದೇ ರಾಜ ವೈಭವ ಅನುಭವಿಸಲಿಲ್ಲ. ಇಂತಹ ಭ್ರಾತೃಪ್ರೇಮ ವಿಶ್ವಕ್ಕೆ ಆದರ್ಶಪ್ರಾಯವಾದುದು ಎಂದರು.

ರಾಮ ಲಕ್ಷ್ಮಣ ಭರತ ಶತ್ರುಘ್ನರ ಬದುಕು ಪರಸ್ಪರ ಸಹೋದರರು ಹೇಗೆ ಬದುಕಬೇಕೆಂಬುದನ್ನು ಲೋಕಕ್ಕೆ ಅರುಹುತ್ತದೆ. ಅವರಂತೆ ನಾವೆಲ್ಲ ಒಂದೇ ತಾಯಿಯ ಮಕ್ಕಳು ಎಂಬಂತೆ ಕೂಡಿ ಬಾಳಿದರೆ ದೇಶ ರಾಮರಾಜ್ಯವಾಗುತ್ತದೆ ಎಂದರು.

ಸಭೆಗೆ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಆಶೀರ್ವದಿಸಿದರು. ಡಾ.ನಾಗರಾಜ ಭಟ್ ನಿರ್ವಹಿಸಿದರು. ಡಾ.ವಿನಾಯಕ ಭಟ್ಟ ಶ್ರೀಗಳಿಗೆ ಫಲ ಸಮರ್ಪಿಸಿದರು. ಪ್ರಾಂಶುಪಾಲ ಡಾ.ಕೃಷ್ಣ ಜೋಶಿ ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು.