ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಗೇರು ಹಣ್ಣಿನ ಪ್ರಾಮುಖ್ಯತೆ, ಪೌಷ್ಟಿಕಾಂಶ ಭದ್ರತೆ ಮತ್ತು ಮೌಲ್ಯವರ್ಧನೆಯ ಕುರಿತು ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನ ಗೃಹ ವಿಜ್ಞಾನ ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಶುಕ್ರವಾರ ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ನಡೆಯಿತು.ಗೇರು ಸಂಶೋಧನಾ ನಿರ್ದೇಶನಾಲಯ ಮತ್ತು ಫುಡ್ ಚೈನ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಈ ತರಬೇತಿ ಶಿಬಿರವನ್ನು ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ. ಜೆ.ದಿನಕರ ಅಡಿಗ ಉದ್ಘಾಟಿಸಿದರು.ಬಳಿಕ ಮಾತನಾಡಿ, ಉದ್ಯಮಶೀಲತೆಯ ಮಹತ್ವ ಮತ್ತು ಹೊಸ ಉದ್ಯಮಗಳನ್ನು ಆರಂಭಿಸಲು ಗೇರು ಹಣ್ಣಿನ ಮೌಲ್ಯವರ್ಧನೆಯು ಹೇಗೆ ಮುಖ್ಯ ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಂಸ್ಥೆಯ ಕೃಷಿ ವಿಸ್ತರಣೆ ವಿಭಾಗದ ವಿಜ್ಞಾನಿ ಡಾ. ಅಶ್ವತಿ ಚಂದ್ರಕುಮಾರ್, ತರಬೇತಿಯ ಬಗ್ಗೆ ರೂಪರೇಖೆಯನ್ನು ನೀಡಿದರು. ಸಂಸ್ಥೆಯ ಆಹಾರ ಮತ್ತು ತಂತ್ರಜ್ಞಾನ ವಿಭಾಗದ ವಿಜ್ಞಾನಿ ಡಾ. ಜ್ಯೋತಿ ನಿಷಾದ್, ಗೇರಿನ ಪೌಷ್ಠಿಕಾಂಶದ ಪ್ರಾಮುಖ್ಯತೆ ಮತ್ತು ಮೌಲ್ಯವರ್ಧನೆಯ ಕುರಿತು ವಿವರಿಸಿದರು.ನಿರ್ದೇಶನಾಲಯದಲ್ಲಿ ತಯಾರಿಸಿದ ಗೇರು ಹಣ್ಣಿನ ಉತ್ಪನ್ನಗಳ ತಯಾರಿಕೆಯ ಕ್ರಮಗಳ ಬಗ್ಗೆ ಹಾಗೂ ವಿವಿಧ ಗೇರು ಉತ್ಪನ್ನಗಳ ಬಗ್ಗೆ, ಉತ್ಪನ್ನಗಳ ಲೇಬಲಿಂಗ್ ಮತ್ತು ಪ್ಯಾಕೇಜಿಂಗ್ ಬಗ್ಗೆ ಶಿಬಿರಾರ್ಥಿಗಳಿಗೆ ವಿವರಿಸಲಾಯಿತು. ಆಹಾರ ವಿಜ್ಞಾನ ಮತ್ತು ಗೃಹ ವಿಜ್ಞಾನದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯ ನಂತರ ಲಭ್ಯವಿರುವ ವೃತ್ತಿ ಅವಕಾಶಗಳ ಕುರಿತು ಸಂವಾದದ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಯಿತು. ಗೇರು ಮ್ಯೂಸಿಯಂ ಭೇಟಿ ಮಾಡಿಸಲಾಯಿತು. ಗೇರು ಬೆಳೆ ಮತ್ತು ಸಂಸ್ಥೆಯ ಚಟುವಟಿಕೆಗಳ ಪರಿಚಯ ಮಾಡಿಸಲಾಯಿತು. ನಿರ್ದೇಶನಾಲಯದಲ್ಲಿ ಇಂಟರ್ನ್‌ಶಿಪ್ ಮಾಡುವ ಸಾಧ್ಯತೆಗಳ ಬಗ್ಗೆ ತಿಳಿಸಲಾಯಿತು. ಆಹಾರ ತಂತ್ರಜ್ಞಾನ ಪ್ರಯೋಗಾಲಯದಲ್ಲಿ ಆಹಾರ ಸಂಸ್ಕರಣೆಗಾಗಿ ಲಭ್ಯವಿರುವ ವಿವಿಧ ಯಂತ್ರೋಪಕರಣಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ತರಬೇತಿಯಲ್ಲಿ ೨೯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
;Resize=(128,128))
;Resize=(128,128))