ದಾಬಸ್‍ಪೇಟೆ: ಮಕ್ಕಳಿಗೆ ಸಂಸ್ಕಾರ ಶಿಕ್ಷಣ ನೀಡುವುದು ಸಮಾಜಕ್ಕೆ ನೀಡುವ ಅತಿದೊಡ್ಡ ಕೊಡುಗೆ, ಮಠಮಾನ್ಯಗಳು ಸಂಸ್ಕಾರಯುತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತವೆ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು
ದಾಬಸ್‍ಪೇಟೆ: ಮಕ್ಕಳಿಗೆ ಸಂಸ್ಕಾರ ಶಿಕ್ಷಣ ನೀಡುವುದು ಸಮಾಜಕ್ಕೆ ನೀಡುವ ಅತಿದೊಡ್ಡ ಕೊಡುಗೆ, ಮಠಮಾನ್ಯಗಳು ಸಂಸ್ಕಾರಯುತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತವೆ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ನೆಲಮಂಗಲ ತಾಲೂಕಿನ ಕಂಚುಗಲ್ ಬಂಡೆಮಠದಲ್ಲಿ ಹಮ್ಮಿಕೊಂಡಿದ್ದ ಲಿಂ.ಶ್ರೀ ಶಿವರುದ್ರ ಸ್ವಾಮೀಜಿಯವರ 29ನೇ ವರ್ಷದ ಸಂಸ್ಕರಣೋತ್ಸವ ಹಾಗೂ ಲಿಂ.ಶ್ರೀ ಬಸವಲಿಂಗ ಸ್ವಾಮೀಜಿಯವರ 4ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಶಿಕ್ಷಣದ ಕೊರತೆ ನಿವಾರಿಸಲು ಸಂಸ್ಕಾರಯುತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಕೀರ್ತಿ ಲಿಂಗೈಕ್ಯ ಶ್ರೀಗಳಿಗೆ ಸಲ್ಲುತ್ತದೆ. ಸಮಾಜಕ್ಕಾಗಿ ಬದುಕಿದವರನ್ನು ಸಮಾಜ ಯಾವಾಗಲೂ ಸ್ಮರಿಸುತ್ತದೆ. ಅಂತಹವರಲ್ಲಿ ಶ್ರೀಗಳು ಸೇರಿದ್ದಾರೆ. ಶಿವಕುಮಾರ ಸ್ವಾಮೀಜಿಯವರ ಪ್ರೀತಿಯ ಶಿಷ್ಯರಾಗಿ ಮಠದ ಸಾಮಾಜಿಕ ಕಾರ್ಯಗಳಿಗೆ ಕೈ ಜೋಡಿಸಿ ಸೇವೆ ಸಲ್ಲಿಸಿರುವುದನ್ನು ಮಠ ಎಂದಿಗೂ ಮರೆಯುವುದಿಲ್ಲ. ಈಗಿನ ಶ್ರೀ ಮಹಾಲಿಂಗ ಸ್ವಾಮೀಜಿಯವರು ಕ್ರೀಯಾಶೀಲರಾಗಿದ್ದು, ಕಿರಿಯ ವಯಸ್ಸಿನಲ್ಲಿಯೇ ಮಠದ ಜವಾಬ್ದಾರಿ ಹೊತ್ತು ಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.ಬಂಡೆಮಠದ ಮಹಾಲಿಂಗ ಸ್ವಾಮೀಜಿ ಮಾತನಾಡಿ, ಲಿಂಗೈಕ್ಯ ಶ್ರೀಗಳು ಅಗಲಿ ಹಲವು ವರ್ಷಗಳು ಕಳೆದಿದ್ದರೂ ಅವರ ನೆನೆಪು ಮಾತ್ರ ಶಾಶ್ವತ. ಬಂಡೆಮಠದ ಪರಂಪರೆ ಉಳಿಸಿ ಬೆಳೆಸಿದ್ದಾರೆ. ಮಠದಲ್ಲಿ ಮೂನ್ನೂರಕ್ಕೂ ಹೆಚ್ಚು ಮಕ್ಕಳಿದ್ದು, ಹಳೆ ವಿದ್ಯಾರ್ಥಿಗಳು, ಭಕ್ತರ ಸಹಕಾರದಿಂದ ಮಠ ಬೆಳೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗದ್ದುಗೆ ಮಠದ ಮಹಾಂತ ಸ್ವಾಮೀಜಿ, ಪವಾಡ ಬಸವಣ್ಣ ದೇವರ ಮಠದ ಸಿದ್ದಲಿಂಗ ಸ್ವಾಮೀಜಿ, ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಸ್ಕಲ್ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಕಂಬಾಳು ಮಠದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಅಭಾವಿಮ ಮಹಿಳಾ ಘಟಕದ ಪದಾಧಿಕಾರಿಗಳಾದ ರಾಜಮ್ಮ, ವೇದಾವತಿ, ಮಂಜುಳ, ಭಕ್ತರಾದ ರಾಜಶೇಖರಯ್ಯ, ಬಿ.ಎಸ್.ಮಲ್ಲಿಕಾರ್ಜುನ್, ಮಾತಾ ಪುಟ್ಟರಾಜು ಇತರರು ಉಪಸ್ಥಿತರಿದ್ದರು.ಪೋಟೋ 2 :
ನೆಲಮಂಗಲ ತಾಲೂಕಿನ ಕಂಚುಗಲ್ ಬಂಡೆಮಠದಲ್ಲಿ ಹಮ್ಮಿಕೊಂಡಿದ್ದ ಲಿಂ.ಶ್ರೀ ಶಿವರುದ್ರ ಸ್ವಾಮೀಜಿಯವರ 29ನೇ ಸಂಸ್ಕರಣೋತ್ಸವ ಹಾಗೂ ಲಿಂ.ಶ್ರೀ ಬಸವಲಿಂಗ ಸ್ವಾಮೀಜಿಯವರ 4ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹಾಗೂ ಹರಗುರು ಚರಮೂರ್ತಿಗಳು ಭಾಗವಹಿಸಿದ್ದರು.