ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಆಧುನಿಕ ತಂತ್ರಜ್ಞಾನ ಯುಗದಲ್ಲಿರುವ ತಂದೆ-ತಾಯಿಯಂದಿರು ತಮ್ಮ ಮಕ್ಕಳಿಗೆ ಮತ್ತು ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿದರೆ ಆರೋಗ್ಯಕರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಗುರುಸ್ವಾಮಿ ಹಿರೇಮಠ ಅವರು ಹೇಳಿದರು.ಅವರು ಬಾಗಲಕೋಟೆ ಪಟ್ಟಣದ ಲೈನ್ಸ್ ಕ್ಲಬ್‌ನ ಆಶ್ರಯದಲ್ಲಿ ನಡೆದ 2024ರ ಶಿಕ್ಷಕ ಮತ್ತು ಅಭಿಯಂತರರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಮತ್ತು ಅಭಿಯಂತರರ ಗೌರವ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಇಂದಿನ ನಮ್ಮ ವಿದ್ಯಾರ್ಥಿಗಳು ಅಂಕ ಪಡೆಯುವ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ ಹೊರತು ಬದುಕು ರೂಪಿಸುವ ಹಾಗೂ ತಮ್ಮ ಜೀವನ ಬೆಳಗಿಸುವ ಸಂಸ್ಕಾರಯುತ ಶಿಕ್ಷಣದಿಂದ ದೂರವಾಗುತ್ತಿದ್ದಾರೆ. ನಮ್ಮ ನಾಡು, ದೇಶ ಸಮಾಜವನ್ನು ಗಟ್ಟಿಗೊಳಿಸುವ ಗುಣಮಟ್ಟದ ಕಾರ್ಯ ಮಾಡುವ ಅಭಿಯಂತರರು ದೊರೆಯುವುದು ವಿರಳವಾಗಿದೆ. ಶಿಕ್ಷಕರು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಬದುಕು ಮತ್ತು ಅಭಿಯಂತರರು ಮೋಕ್ಷಗುಂಡಂ ಸರ್ ಎಂ.ವಿಶ್ವೇಶ್ವರಯ್ಯನವರ ಜೀವನದ ಆದರ್ಶಗಳನ್ನು ಅಳವಡಿಸಿಕೊಂಡು, ಪ್ರಾಮಾಣಿಕ ಸೇವೆ ಸಲ್ಲಿಸುವ ಮನೋಭಾವವನ್ನು ಇಂದಿನವರು ಬೆಳೆಸಿಕೊಳ್ಳಬೇಕಾಗಿದೆ ಎಂದು ಹೇಳಿದರು.ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ್ ಡಾ.ಅರುಣಕುಮಾರ ಗಾಳಿ ಅವರು ಲೈನ್ಸ್ ಕ್ಲಬ್ ಅವರಿಂದ ಆದರ್ಶ ಶಿಕ್ಷಕ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿ, ಬಾಗಲಕೋಟೆ ಲೈನ್ಸ್ ಕ್ಲಬ್‌ನವರು ಸಮಾಜ ಸೇವೆಯ ಭಾಗವಾಗಿರುವ ಶಿಕ್ಷಣ ಕ್ಷೇತ್ರ ಹಾಗೂ ಅಭಿಯಂತರರ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಿರುವುದು ಶ್ಲಾಘನೀಯವಾಗಿದೆ ಎಂದರು.
ಬಾಗಲಕೋಟೆ ಲೈನ್ಸ್ ಕ್ಲಬ್‌ನ ಅಧ್ಯಕ್ಷ ಸಿದ್ದಣ್ಣ ಹಂಪನಗೌಡರ ಕಾರ್ಯಕ್ರಮಕ್ಕೆ ಲೈನ್ಸ್ ಕ್ಲಬ್ ಸಂಪ್ರದಾಯದಂತೆ ಚಾಲನೆ ನೀಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೀಸನ್ ಚೇರ್ಮನ್ ಮಲ್ಲಿಕಾರ್ಜುನ ಸಾಸ್ನೂರ ಹಾಗೂ ಬ್ರಾಂಚ್ ಕ್ಲಬ್ ಅಧ್ಯಕ್ಷ ಲಯನ್ ನೇಹಾ ಇಂಜಗನೇರಿ, ಕಾರ್ಯದರ್ಶಿ ಲಯನ್ ಉಮಾ ಪಟ್ಟಣಶೆಟ್ಟಿ ಮತ್ತು ಖಜಾಂಚಿಯಾದ ಲಯನ್ ಹಣಮಂತ ದೊಡಮನಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಲಯನ್ ಲಿಂಗರಾಜ ವೈದ್ಯ ಸನ್ಮಾನಿತರ ಪರಿಚಯವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬಾಗಲಕೋಟೆಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.ಸಮಾಂಭದಲ್ಲಿ ಬಾಗಲಕೋಟೆ ಎಸ್.ಎನ್.ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮೇಲಿ, ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ವಿಜಯಕುಮಾರ ಜಮಖಂಡಿ, ಸೀಮಿಕೇರಿ ಗುರುಬಸವ ಪಬ್ಲಿಕ್ ಶಾಲೆಯ ಅಕಾಡೆಮಿಕ್ ನಿರ್ದೇಶಕರಾದ ಡಾ.ಪುಷ್ಪಾ ಇಂಜಗಣೇರಿ, ತುಳಸಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನಿರ್ಮಲಾ ಪತ್ತಾರ, ಹುಬ್ಬಳಿಯ ಅಭಿಯಂತರರಾದ ಅಲ್ಲದಿನ್ ಇಮಾಮಸಾಬ ಈ ಸಾಧಕರಿಗೆ ಬಾಗಲಕೋಟೆ ಲೈನ್ಸ್ ಕ್ಲಬ್ ವತಿಯಿಂದ ಗೌರವ ಸನ್ಮಾನ ಮಾಡಿದರು. ಲಯನ್ ಡಾಕ್ಟರ ವಿಕಾಸ ಹಾಗೂ ಲಯನ್ ಡಾಕ್ಟರ್ ಭಾಗ್ಯ ಪಾಟೀಲ ನಿರೂಪಿಸಿದರು.