ಮೌಲ್ಯಾಧಾರಿತ ರಾಜಕಾರಣದ ವ್ಯಕ್ತಿ-ಶಕ್ತಿಗಳಿಲ್ಲ: ಪ್ರೊ.ಜಿ.ಸಿದ್ದರಾಮಯ್ಯ

| Published : Jul 11 2024, 01:30 AM IST

ಮೌಲ್ಯಾಧಾರಿತ ರಾಜಕಾರಣದ ವ್ಯಕ್ತಿ-ಶಕ್ತಿಗಳಿಲ್ಲ: ಪ್ರೊ.ಜಿ.ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕೇವಲ ರಾಜಕಾರಣ ಮಾತ್ರವಲ್ಲ, ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲೂ ದುರ್ಬರ, ಧುರಿತ ಕಾಲಘಟ್ಟದಲ್ಲಿ ನಾವಿದ್ದೇವೆ. ಹಿಂದೆ ಮೌಲ್ಯಕ್ಕಾಗಿ ರಾಜಕಾರಣ ಮಾಡುವ ವ್ಯಕ್ತಿ-ಶಕ್ತಿಗಳಿದ್ದವು. ಈಗ ನಾವು ಅವರನ್ನು ಕಾಣಲು ಸಾಧ್ಯವಾಗುತ್ತಲೇ ಇಲ್ಲ. ದೇಶದಲ್ಲಿ ತತ್ವನಿಷ್ಠ ರಾಜಕಾರಣಿಗಳು ಎಷ್ಟಿದ್ದಾರೆ ಎಂಬ ಬಗ್ಗೆ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ಕಾಲಘಟ್ಟದಲ್ಲಿ ಮೌಲ್ಯಕ್ಕಾಗಿ ರಾಜಕಾರಣ ಮಾಡುವುದಕ್ಕಿಂತ ಹೆಚ್ಚಾಗಿ ಸ್ವಾರ್ಥ ಮತ್ತು ಬೇರೆ ಬೇರೆ ಹಿತಾಸಕ್ತಿಗಳಿಗೆ ರಾಜಕಾರಣ ಮಾಡುವ ಕೆಟ್ಟ ಕಾಲಘಟ್ಟದಲ್ಲಿದ್ದೇವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ವಿಷಾದಿಸಿದರು.

ನಗರದ ರೈತ ಸಭಾಂಗಣದಲ್ಲಿ ಬುಧವಾರ ಡಾ.ಜಿ.ಮಾದೇಗೌಡ ಪ್ರತಿಷ್ಠಾನ ಮತ್ತು ಭಾರತಿ ಎಜುಕೇಷನ್ ಟ್ರಸ್ಟ್‌ನಿಂದ ನಡೆದ ೨೪ನೇ ವರ್ಷದ ಡಾ.ಜಿ.ಮಾದೇಗೌಡ ಸಮಾಜಸೇವಾ ಮತ್ತು ಸಾವಯವ ಕೃಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದರು.

ಕೇವಲ ರಾಜಕಾರಣ ಮಾತ್ರವಲ್ಲ, ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲೂ ದುರ್ಬರ, ಧುರಿತ ಕಾಲಘಟ್ಟದಲ್ಲಿ ನಾವಿದ್ದೇವೆ. ಹಿಂದೆ ಮೌಲ್ಯಕ್ಕಾಗಿ ರಾಜಕಾರಣ ಮಾಡುವ ವ್ಯಕ್ತಿ-ಶಕ್ತಿಗಳಿದ್ದವು. ಈಗ ನಾವು ಅವರನ್ನು ಕಾಣಲು ಸಾಧ್ಯವಾಗುತ್ತಲೇ ಇಲ್ಲ. ದೇಶದಲ್ಲಿ ತತ್ವನಿಷ್ಠ ರಾಜಕಾರಣಿಗಳು ಎಷ್ಟಿದ್ದಾರೆ ಎಂಬ ಬಗ್ಗೆ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಆತ್ಮಾವಲೋಕನ ಮಾಡಿಕೊಂಡಾಗ ಜನರಿಗೆ ಉತ್ತರದಾಯಿತ್ವ ನಡೆಯುಳ್ಳವರಾಗುತ್ತಾರೆ ಎಂದರು.

ಜಿ.ಮಾದೇಗೌಡರು, ಬಿ.ಎಂ.ನಂಜೇಗೌಡರು ಕಾವೇರಿ ನೀರಿನ ವಿವಾದದಲ್ಲಿ ತಜ್ಞತೆ ಸಂಪಾದಿಸಿದ್ದರು. ಅವರಲ್ಲಿದ್ದ ತಜ್ಞತೆ ರಾಜಕೀಯ ವಿಚಕ್ಷಣತೆಯ ಪ್ರತಿಫಲನದಂತೆ ಗೋಚರಿಸುತ್ತಿತ್ತು. ಐತಿಹಾಸಿಕ ದಾಖಲೆಗಳನ್ನು ಜ್ಞಾನದಲ್ಲಿ ತುಂಬಿಕೊಂಡು ನಿರರ್ಗಳವಾಗಿ ಮಾತನಾಡುಉವ ಚಾಕಚಕ್ಯತೆ ಅವರಲ್ಲಿತ್ತು. ಎನಪ್ರತಿನಿಧಿಗಳಿಗೆ ಚರಿತ್ರೆಯ ನೆನಪುಗಳು ಇಲ್ಲದಿದ್ದರೆ ವರ್ತಮಾನದ ಸಮಸ್ಯೆಗಳನ್ನು ಅರಿತುಕೊಳ್ಳಲಾಗುವುದಿಲ್ಲ. ಚರಿತ್ರೆಯ ನೆನಪುಗಳೆಂದರೆ ತಿರುಚಿದ ಚರಿತ್ರೆಯಲ್ಲ. ವಾಸ್ತವ ಚರಿತ್ರೆಯನ್ನು ಅರ್ಥಮಾಡಿಕೊಳ್ಳಲು ಸಂಶೋಧನಾತ್ಮಕ ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕು ಎಂದರು.

ಜಿ.ಮಾದೇಗೌಡ ಮತ್ತು ಬಿ.ಎಂ.ನಂಜೇಗೌಡರಿಗೆ ಜನರ ಬಗ್ಗೆ ಸಾಮಾಜಿಕ ಕಳಕಳಿ ಇದ್ದುದರಿಂದಲೇ ಕಾವೇರಿ ವಿವಾದದಲ್ಲಿ ಎಲ್ಲೆಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬುದನ್ನು ಗುರುತಿಸಿ ಹೇಳುತ್ತಿದ್ದರು. ಅದು ಪ್ರತಿಯೊಬ್ಬ ರಾಜಕಾರಣಿಗೆ ಇರಬೇಕಾದ ಮನೋಧರ್ಮ ಎಂದರು.

ಜಿ.ಮಾದೇಗೌಡರಿಗೆ ಸಾತ್ವಿಕ ಸಿಟ್ಟಿತ್ತು. ಜನರಿಗೆ ಕೆಲಸ ಮಾಡಬೇಕಾದ ಕಾರ್ಯದಲ್ಲಿರುವ ಯಾವುದೇ ಅಧಿಕಾರಿ, ರಾಜಕಾರಣಿಯಾಗಲಿ ಅವರೆಷ್ಟೇ ದೊಡ್ಡವರಾಗಿರಲಿ ವಿರುದ್ಧ ನಡೆಯನ್ನು ಅನುಸರಿಸಿದಾಗ ಅವರ ಮೇಲೆ ಮಾತಿನ ಪ್ರಹಾರವನ್ನೇ ನಡೆಸುತ್ತಿದ್ದರು. ಅದು ಅಗತ್ಯವೂ ಇತ್ತು. ಈ ನೆಲದ ಸೊಗಡನ್ನು ಮೈಗೂಡಿಸಿಕೊಂಡಿರುವವರಿಂದ ಮಾತ್ರ ಈ ರೀತಿಯ ಗುಣವಿರುತ್ತದೆ. ಮಾತಿನಲ್ಲಿ ಒರಟುತನವಿದ್ದರೂ ದುಷ್ಟತನವಿರುವುದಿಲ್ಲ ಎಂದರು.

ಕೆ.ವಿ.ಶಂಕರಗೌಡ, ಎಚ್.ಕೆ.ವೀರಣ್ಣಗೌಡ, ಸಾಹುಕಾರ್ ಚನ್ನಯ್ಯ, ಜಿ.ಮಾದೇಗೌಡ ಸೇರಿದಂತೆ ಹಲವು ರಾಜಕಾರಣಿಗಳು ಕೇವಲ ಕುಟುಂಬಕ್ಕೆ ಮಾತ್ರ ಜ್ಯೋತಿಯಾಗಿರದೆ ಜಗತ್ತಿಗೆ ಜ್ಯೋತಿಯಾಗಿದ್ದರು. ಏಕೆಂದರೆ, ತಾವು ಪ್ರತಿನಿಧಿಸುತ್ತಿದ್ದ ಪ್ರಜಾಪ್ರಭುತ್ವವಾದಿ ವ್ಯವಸ್ಥೆಯ ಬಹುತ್ವ ಸಮುದಾಯಗಳನ್ನು ಒಳಗೊಳ್ಳುವ ಮನೋಪ್ರಜ್ಞೆ ಅವರಲ್ಲಿತ್ತು ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಗದಗದ ಕೆ.ಎಚ್.ಪಾಟೀಲ ಪ್ರತಿಷ್ಠಾನದ ಅಧ್ಯಕ್ಷ ಡಿ.ಆರ್.ಪಾಟೀಲ ಅವರಿಗೆ ಸಮಾಜಸೇವಾ ಪ್ರಶಸ್ತಿ, ಮಳವಳ್ಳಿ ತಾಲೂಕು ಮಲ್ಲಿಗೆಹಳ್ಳಿಯ ಸಾವಯವ ಕೃಷಿಕ ಶ್ರೀಪಾದ ಪಿ.ಆಚಾರ್ಯ ಅವರಿಗೆ ಸಾವಯವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಮಾಜಿ ಸಂಸದ ಸಿ.ನಾರಾಯಣಸ್ವಾಮಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಪಿ.ರವಿಕುಮಾರ್, ಮಧು ಜಿ.ಮಾದೇಗೌಡ ಹಾಗೂ ಜಿ.ಮಾದೇಗೌಡ ಪ್ರತಿಷ್ಠಾನ ಮತ್ತು ಭಾರತಿ ಎಜುಕೇಷನ್ ಟ್ರಸ್ಟ್‌ನ ಪದಾಧಿಕಾರಿಗಳು ಭಾಗವಹಿಸಿದ್ದರು.