ಸಾರಾಂಶ
ನರಸಿಂಹರಾಜಪುರ: ಮೌಲ್ಯ, ಸಂಸ್ಕೃತಿ ಜೀವನದ ತಾಯಿ ಬೇರುಗಳಿದ್ದಂತೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪಾ ತಿಳಿಸಿದರು.
ಸಿಂಹನಗದ್ದೆ ಬಸ್ತಿಮಠದಲ್ಲಿ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.ಮಾನವೀಯತೆ, ಮೌಲ್ಯ, ಯೋಗ, ಸಂಸ್ಕೃತಿ ತಳಹದಿಯ ಮೇಲೆ ವೈಚಾರಿಕತೆ ಬೆಳೆಸಿಕೊಳ್ಳಬೇಕು. ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ನವರು ನೀಡಿದ ಜ್ಞಾನ ಶರಧಿ ಹಾಗೂ ಜ್ಞಾನ ವಾರಿಧಿ ಪುಸ್ತಕಗಳನ್ನು ಮಸ್ತಕದಲ್ಲಿ ತೆಗೆದುಕೊಳ್ಳಬೇಕು. ಉತ್ತಮ ಪುಸ್ತಕಗಳನ್ನು ಓದಿ ಬೌದ್ಧಿಕ ಮಟ್ಟ ಬೆಳೆಸಿಕೊಂಡು ಹೃದಯ ವೈಶಾಲ್ಯತೆಯಿಂದ ಬದುಕಬೇಕು. ಕಳೆದು ಹೋದ ದಿನ ಕುರಿತು ಚಿಂತೆ ಮಾಡುವುದಕ್ಕಿಂತ ವರ್ತಮಾನ ದಿನದಲ್ಲಿ ಒಳ್ಳೆಯ ಬದುಕು ಸಾಗಿಸೋಣ ಎಂದರು.
ಧರ್ಮಸ್ಥಳ ಶಾಂತಿವನ ಟ್ರಸ್ಟ್ ನಿರ್ದೇಶಕ ಶಶಿಕಾಂತ್ ಜೈನ್ ಮಾತನಾಡಿ, ಸೋಮವಾರ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ 4 ಸ್ಪರ್ಧೆ ನಡೆಸಲಾಗಿತ್ತು ಎಂದು ಮಾಹಿತಿ ನೀಡಿದರು.ಕಳೆದ 30 ವರ್ಷದಿಂದ ಶಾಂತಿ ವನ ಟ್ರಸ್ಟ್‌ವತಿಯಿಂದ ಪ್ರತಿ ವರ್ಷ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡುತ್ತಿದ್ದೇವೆ. ಕಳೆದ 30 ವರ್ಷಗಳಲ್ಲಿ 3 ಲಕ್ಷ 75 ಸಾವಿರ ಮಕ್ಕಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. 16 ಲಕ್ಷ ಪುಸ್ತಕ ವಿತರಣೆ ಮಾಡಿದ್ದೇವೆ. ಶಾಂತಿವನ ಟ್ರಸ್ಟ್‌ನ ಕಾರ್ಯಕ್ರಮಗಳಿಂದ ಲಕ್ಷಾಂತರ ಜನರು ದುಶ್ಚಟಗಳಿಂದ ದೂರವಾಗಿ ಸಜ್ಜನರಾಗಿ ಬದುಕುತ್ತಿದ್ದಾರೆ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಕಳೆದುಕೊಂಡಿರುವುದನ್ನು ಅರಿತು ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಮತ್ತೆ ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡುತ್ತಿದೆ. ಇಂದು ಹಣ ಮಾಡುವ ಭರದಲ್ಲಿ ಜನರು ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ. ಶಾಂತಿವ ವನ ಟ್ರಸ್ಟ್ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡಿ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡುವ ಮೂಲಕ ಮಕ್ಕಳಲ್ಲಿ ಜೀವನದ ನೈತಿಕ ಪಾಠ ಹೇಳಿಕೊಡುತ್ತಿದ್ದಾರೆ ಎಂದರು.ಅತಿಥಿಗಳಾಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಬೋಗೇಶಪ್ಪ, ಸಂಘಟನಾ ಕಾರ್ಯದರ್ಶಿ ತಿಮ್ಮೇಶಪ್ಪ, ನಿರ್ದೇಶಕರುಗಳಾದ ಮಂಜಪ್ಪ, ಆರ್.ನಾಗರಾಜ್, ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆಯ ಶಿಕ್ಷಕ ಗುಣಪಾಲ್ ಜೈನ್ ಇದ್ದರು.