ಹಣಕ್ಕಿಂತ ಮನುಷ್ಯತ್ವಕ್ಕೆ ಬೆಲೆ ನೀಡಿ: ಪಶುಪತಿ ಶಿವಾಚಾರ್ಯರು

| Published : Apr 21 2025, 12:57 AM IST

ಹಣಕ್ಕಿಂತ ಮನುಷ್ಯತ್ವಕ್ಕೆ ಬೆಲೆ ನೀಡಿ: ಪಶುಪತಿ ಶಿವಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯ ಬಾಲ್ಯವನ್ನು ಓದಿಗೆ ಮೀಸಲಿಡಬೇಕು. ಯೌವನವನ್ನು ಧರ್ಮದ ರಕ್ಷಣೆಗೆ ಮೀಸಲಿಡಬೇಕು. ಮುಪ್ಪು ಬಂದಾಗ ಅಧ್ಯಾತ್ಮಕ್ಕೆ ನೀಡಬೇಕು. ಅಂದಾಗ ಮಾತ್ರ ಜಗತ್ತನ್ನು ಬಿಟ್ಟು ಹೋಗುವ ಸಂದರ್ಭದಲ್ಲಿಯೂ ನಗುನಗುತ್ತಾ ಜೀವ ಬಿಡಲು ಸಾಧ್ಯ. ಅದುವೇ ಸಾರ್ಥಕ ಜೀವನ.

ಬ್ಯಾಡಗಿ: ವ್ಯಕ್ತಿಯನ್ನು ಹಣಕ್ಕಿಂತ, ಆತನಲ್ಲಿರುವ ಧಾರ್ಮಿಕ ಮನೋಭಾವನೆ ಮಾನವೀಯ ಮೌಲ್ಯ ಹಾಗೂ ಮನುಷ್ಯತ್ವದಿಂದ ಗುರುತಿಸಬೇಕಾಗಿದೆ. ಹೀಗಾಗಿ ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಪಂಚಪೀಠಗಳ ಸಂದೇಶ ಸಾರ್ವಕಾಲಿಕ ಸತ್ಯವಾಗಿದೆ ಎಂದು ದಿಂಡದಹಳ್ಳಿ ಮಠಾಧೀಶ ಪಶುಪತಿ ಶಿವಾಚಾರ್ಯರು ತಿಳಿಸಿದರು.

ಪಟ್ಟಣದ ರೇಣುಕ ಮಂದಿರ ಹಾಗೂ ಸಂಗಮೇಶ್ವರ ದೇವಸ್ಥಾನಗಳ ಸಭಾ ಭವನದಲ್ಲಿ ಪಂಚಾಚಾರ್ಯ ಯುವ ವೇದಿಕೆ ಹಾಗೂ ತಾಲೂಕು ಜಂಗಮ ಸಮಾಜದ ಆಶ್ರಯದಲ್ಲಿ ಭಾನುವಾರ ಜರುಗಿದ ಜಂಗಮ ವಟುಗಳ ಶಿವದೀಕ್ಷೆ(ಅಯ್ಯಾಚಾರ) ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಆತನಿಗೆ ಧರ್ಮ ದೀಕ್ಷೆ ಆಗುತ್ತಿರುತ್ತದೆ. ಆದರೆ ಲೌಕಿಕ ಬದುಕಿನ ಜಂಜಾಟದಲ್ಲಿ ಬಿದ್ದು ನರಳುತ್ತಿರುವ ಮನುಷ್ಯ ತನ್ನ ಜೀವನಕ್ಕೆ ಬೇಸರವೆನಿಸಿ ಹುಟ್ಟಿದ್ದೇ ಸಾಕು ನನ್ನನ್ನು ಕರೆದುಕೋ ಎಂದು ದೇವರ ಬಳಿ ಅಂಗಲಾಚುತ್ತಾನೆ. ಇಂತಹ ಸಂದರ್ಭದಲ್ಲಿ ಆತನಿಗೆ ನೆರವಾಗುವುದೇ ಧರ್ಮದೀಕ್ಷೆ ಎಂದರು.

ಭಕ್ತಿಯೂ ಕೂಡ ಶಕ್ತಿ: ಒಂದು ಜ್ಞಾನದ ಶಕ್ತಿ, ಇನ್ನೊಂದು ಧರ್ಮದ ಶಕ್ತಿ. ಆದರೆ ಎರಡನ್ನೂ ಯಾವುದಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಯುವಕರಲ್ಲಿ ಅರಿವಿಲ್ಲ. ಅಧರ್ಮದಿಂದ ನಡೆದುಕೊಳ್ಳುವ ಮೂಲಕ ಇಂತಹ ಅದ್ಭುತವಾದ ದೇಹವನ್ನು ಬಳಸಿಕೊಳ್ಳದೇ ವ್ಯರ್ಥ ಪ್ರಯತ್ನಗಳನ್ನು ನಡೆಸಿ ಕೊನೆಗೆ ಬದುಕನ್ನೇ ಕೈಚೆಲ್ಲಿ ಕುಳಿತುಕೊಳ್ಳಲಿದ್ದಾರೆ ಎಂದರು.

ಧರ್ಮಕ್ಕಾಗಿ ದೇಹವನ್ನು ಮೀಸಲಿಡಿ: ಮನುಷ್ಯ ಬಾಲ್ಯವನ್ನು ಓದಿಗೆ ಮೀಸಲಿಡಬೇಕು. ಯೌವನವನ್ನು ಧರ್ಮದ ರಕ್ಷಣೆಗೆ ಮೀಸಲಿಡಬೇಕು. ಮುಪ್ಪು ಬಂದಾಗ ಅಧ್ಯಾತ್ಮಕ್ಕೆ ನೀಡಬೇಕು. ಅಂದಾಗ ಮಾತ್ರ ಜಗತ್ತನ್ನು ಬಿಟ್ಟು ಹೋಗುವ ಸಂದರ್ಭದಲ್ಲಿಯೂ ನಗುನಗುತ್ತಾ ಜೀವ ಬಿಡಲು ಸಾಧ್ಯ. ಅದುವೇ ಸಾರ್ಥಕ ಜೀವನ. ಅದುವೇ ಆದರ್ಶದ ಜೀವನವಾಗಲಿದೆ ಎಂದರು.

ಬದುಕಿಗೆ ಅವಶ್ಯ: ವೀರಶೈವ ಸಿದ್ಧಾಂತ ಶಿಖಾಮಣಿ ಬದುಕಿಗೆ ಅವಶ್ಯ. ಜೀವನದ ಎಲ್ಲ ಘಟನೆಗಳ ಕುರಿತು ಸ್ತೋತ್ರಗಳ ಮೂಲಕ ಸಮಗ್ರವಾಗಿ ಪ್ರಸ್ತುತಪಡಿಸಿದೆ. ಎಲ್ಲ ಧರ್ಮ ಹಾಗೂ ಸಮಾಜಗಳನ್ನು ಅಪ್ಪಿಕೊಂಡು ಹೋಗುವ ಪಂಚಪೀಠಗಳು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಂದೇಶ ಸಾರಿವೆ. ಶಿವದೀಕ್ಷೆ ಪಡೆದ ಜಂಗಮ ವಟುಗಳು ಶಿವಯೋಗ ಪದ್ಧತಿ ರೂಢಿಸಿಕೊಂಡು ಗುರು, ಲಿಂಗ, ಪಾದೋದಕ, ಪ್ರಸಾದ ಅಷ್ಟಾವರಣಗಳ ಮಹತ್ವ ಅರಿತುಕೊಳ್ಳುವಂತೆ ಸಲಹೆ ನೀಡಿದರು.

ವಿವಿಧೆಡೆಗಳಿಂದ ಆಗಮಿಸಿದ್ದ ಜಂಗಮ ವಟುಗಳಿಗೆ ಶಿವದೀಕ್ಷೆ ಪ್ರಮಾಣ ಬೋಧನೆ ಮಾಡಲಾಯಿತು. ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ವೇ. ರಾಚಯ್ಯನವರ ಓದಿಸೋಮಠ, ವೀರಯ್ಯ ಹಿರೇಮಠ, ಚನ್ನಬಸಯ್ಯ ಹಿರೇಮಠ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಶಿವದೀಕ್ಷೆ ಕಾರ್ಯಕ್ರಮ ನೆರವೇರಿಸಿದರು.

ಪಂಚಾಚಾರ್ಯ ಯುವ ವೇದಿಕೆ ಅಧ್ಯಕ್ಷ ಶರಣಯ್ಯ ಬೂದಿಹಾಳಮಠ, ವರ್ತಕ ಮೃತ್ಯುಂಜಯ್ಯ ಹಿರೇಮಠ, ಗಿರೀಶ ಇಂಡಿಮಠ, ಕೆ.ಸಿ. ಸೊಪ್ಪಿನಮಠ, ರಾಜಶೇಖರ ಹಾಲೇವಾಡಿಮಠ, ಕರಬಸಯ್ಯ ಹಿರೇಮಠ, ವಿಜಯ ಕುದರಿಹಾಳಮಠ, ಶೇಖರಗೌಡ್ರ ಕರೇಗೌಡ್ರ, ಲಿಂಗರಾಜ ರಂಗಾರಿ, ಕುಮಾರ ಹಿರೇಮಠ, ವೀರೇಶ ನೆಗಳೂರು, ರವೀಂದ್ರ ಹೊನ್ನಾಳಿ, ಮಲ್ಲಿಕಾರ್ಜುನ ಕುದರಿಹಾಳಮಠ ಇದ್ದರು.